ನೈಋತ್ಯ ಮುಂಗಾರು; ವಾಡಿಕೆಯಂತೆ ಸುರಿಯಲಿದೆ ಮಳೆ
ಬೆಂಗಳೂರು, ಏಪ್ರಿಲ್ 15; ಈ ಬಾರಿಯ ನೈಋತ್ಯ ಮುಂಗಾರಿನ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಡಿಕೆಯಂತೆ ಮಳೆಯಾಗಲಿದ್ದು, ಉತ್ತರ ಭಾರತದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಈ ಹಿಂದಿನ ಮೂರು ವರ್ಷಗಳು ಸಹ ನೈಋತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆಯಾಗಿದೆ. ಈ ವರ್ಷವೂ ಸಹ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೀರ್ಘಾವಧಿ ಸರಾಸರಿ ಮಳೆ (ಎಲ್‌ಪಿಎ) 1971-2020ರ ತನಕ 87 ಸೆಂ. ಮೀ ಇದೆ. ಈ ಬಾರಿ ಎಲ್‌ಪಿಎಯ ಶೇ 96ರಿಂದ 104ರಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೇ ತಿಂಗಳಿನಲ್ಲಿ ಮತ್ತೊಮ್ಮೆ ಮುಂಗಾರು ಕುರಿತು ವರದಿ ನೀಡಲಿದೆ.

ಈ ಮೊದಲು ಭಾರತೀಯ ಹವಾಮಾನ ಇಲಾಖೆ 1961 ರಿಂದ 2010ರ ವರೆಗಿನ ಎಲ್‌ಪಿಎ ಪರಿಗಣನೆ ಮಾಡಿ ನೈಋತ್ಯ ಮುಂಗಾರು ಮಳೆಯ ಲೆಕ್ಕಾಚಾರ ಹಾಕಲಾಗುತ್ತಿತ್ತು. ಈಗ 1971 -2020ರ ತನಕದ ಅವಧಿಯ ಎಲ್‌ಪಿಎ ಲೆಕ್ಕಾಚಾರ ತೆದುಕೊಳ್ಳಲಾಗುತ್ತದೆ.
ಈ ಬಾರಿಯ ಮುಂಗಾರು ಅವಧಿಯಲ್ಲಿ ದೇಶದ ಮಧ್ಯ ಭಾಗ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ವಾಯುವ್ಯ ಭಾಗದಲ್ಲಿ ಸಹ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈಶಾನ್ಯ ಮತ್ತು ವಾಯುವ್ಯ ಭಾಗದ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
2021ರಲ್ಲಿಯೂ ದೇಶದಲ್ಲಿ ಜೂನ್‌ನಿಂದ ಸೆಪ್ಟೆಂಬರ್ ತನಕ ನೈಋತ್ಯ ಮುಂಗಾರು ಅವಧದಿಯಲ್ಲಿ ವಾಡಿಕೆಯಷ್ಟು ಮಳೆಯಾಗಿತ್ತು. 2019 ಮತ್ತು 2020ರಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿತ್ತು.
ಜೂನ್-ಜುಲೈನಲ್ಲಿ ಸಾಧಾರಣ ಮಳೆ; ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಸಹ 2022ರ ಮುಂಗಾರು ಬಗ್ಗೆ ಮುನ್ಸೂಚನೆ ನೀಡಿದೆ. ಜೂನ್ ಮತ್ತು ಜುಲೈ ಅವಧಿಯಲ್ಲಿ ಮಳೆ ಸಾಧಾರಣವಾಗಿರಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹೇಳಿದೆ.

ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಮಳೆ ಉತ್ತಮವಾಗಿ ಸುರಿಯಲಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗಲಿದೆ. ಇದರಿಂದಾಗಿ ಹಣದುಬ್ಬರ ತಗ್ಗಲಿದ್ದು, ದೇಶದ ಆರ್ಥಿಕತೆಗೆ ಸಹ ಅನುಕೂಲವಾಗಲಿದೆ.
ಈ ವರ್ಷದ ಮುಂಗಾರು ಅವಧಿಯಲ್ಲಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮಧ್ಯ ಭಾರತದ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಕೇರಳ, ಕರ್ನಾಟಕ, ರಾಜಸ್ಥಾನ, ಗುಜರಾತ್‌ನಲ್ಲಿ ಮಳೆ ಕಡಿಮೆ ಸುರಿಯಲಿದೆ ಎಂದು ಸ್ಕೈಮೆಟ್ ವರದಿ ತಿಳಿಸಿದೆ.
ಪ್ರತಿ ವರ್ಷ ನೈಋತ್ಯ ಮುಂಗಾರು ಆರಂಭವಾಗುವ ಕೆಲವು ತಿಂಗಳ ಮುಂಚೆ ನಡೆಯುವ ಎಲ್ ನಿನೊ ಮತ್ತು ಲಾ ನಿನಾ ವಿದ್ಯಮಾನಗಳು ಮುಂಗಾರಿನ ಮೇಲೆ ಪ್ರಭಾವ ಬೀರುತ್ತಿವೆ. ಇದರಿಂದಾಗಿ ಮುಂಗಾರು ತಡವಾಗಿ, ಕಡಿಮೆ ಮಳೆಯಾಗುವ ಸಾಧ್ಯತೆ ಸಹ ಇದೆ.
ಈ ವರ್ಷ ಲಾ ನಿನಾ ಮತ್ತು ಎಲ್ ನಿನೋ ವಿದ್ಯಾಮಾನ ನೈಋತ್ಯ ಮುಂಗಾರಿನ ಮೇಲೆ ಪರಿಣಾಮ ಬೀರಲಿದೆ ಎಂಬ ವರದಿಯನ್ನು ಸ್ಕೈಮೆಟ್ ತಳ್ಳಿ ಹಾಕಿದೆ. ಶೇ 75ರಷ್ಟು ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಗಾರು ಮಳೆ ಸುರಿಯಲಿದೆ ಎಂದು ಹೇಳಿದೆ. ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಬರಗಾಲ ಉಂಟಾಗುವ ವರದಿಯನ್ನು ಅಲ್ಲಗಳೆದಿದೆ.
ಜೂನ್‌ನಲ್ಲಿ ಕೇರಳಕ್ಕೆ ಆಗಮಿಸುವ ಮುಂಗಾರು ಬಳಿಕ ಕರ್ನಾಟಕಕ್ಕೆ ಪ್ರವೇಶ ಮಾಡಲಿದೆ. ಜೂನ್‌ನಲ್ಲಿ ಸರಾಸರಿ ಮಳೆಯ ನೀರಿಕ್ಷೆ ಇದೆ. ಜುಲೈನಲ್ಲಿ ಶೇ 107ರಷ್ಟು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿಯೂ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ.












Click it and Unblock the Notifications