ಇಡೀ ದೇಶಕ್ಕೇ ಮಾದರಿಯಾದ ಈ ಸಣ್ಣ ಹಳ್ಳಿ: ಭಾರತದ ಮೊದಲ ಜಾತಿ ಮುಕ್ತ ಗ್ರಾಮವಾಗಿ ಘೋಷಣೆ
ಮಹಾರಾಷ್ಟ್ರ: ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ, ತಾರತಮ್ಯ ಮಾಡುವ ಘಟನೆಗಳು ದೇಶದ ಮೂಲೆಮೂಲೆಗಳಲ್ಲಿ ಪ್ರತಿದಿನ ವರದಿಯಾಗುತ್ತಿರುವ ಇಂದಿನ ದಿನಗಳಲ್ಲಿ, ಮಹಾರಾಷ್ಟ್ರದ ಒಂದು ಸಣ್ಣ ಹಳ್ಳಿ ಇಡೀ ದೇಶಕ್ಕೆ ಒಂದೊಳ್ಳೆ ಮಾದರಿಯಾಗಿ ನಿಂತಿದೆ.
ಹೌದು, ಮಹಾರಾಷ್ಟ್ರದ ಅಹಲ್ಯಾನಗರ ಅಂದರೆ ಹಿಂದಿನ ಅಹಮದ್‌ನಗರ ಜಿಲ್ಲೆಯ ನೆವಾಸಾ ತಾಲೂಕಿಗೆ ಸೇರಿದ ಸೌಂದಲ ಗ್ರಾಮವು ಭಾರತದ ಮೊಟ್ಟಮೊದಲ ಜಾತಿ ಮುಕ್ತ ಗ್ರಾಮ ಎಂಬ ಐತಿಹಾಸಿಕ ಘೋಷಣೆ ಮಾಡುವ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದೆ. ಕೇವಲ ಬಾಯಿ ಮಾತಿನಲ್ಲಿ ಹೇಳದೆ, ಗ್ರಾಮಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಣಯ ಪಾಸ್ ಮಾಡುವ ಮೂಲಕ ಇಡೀ ಭಾರತೀಯರ ಗಮನ ಸೆಳೆದಿದೆ.

ಫೆಬ್ರವರಿ 5, 2026ರಂದು ನಡೆದ ಸೌಂದಲ ಗ್ರಾಮಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು. ಗ್ರಾಮಸ್ಥರೆಲ್ಲರೂ ಒಗ್ಗೂಡಿ ಜಾತಿ ತಾರತಮ್ಯವನ್ನ ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕುವ ನಿರ್ಣಯವನ್ನ ಸರ್ವಾನುಮತದಿಂದ ಅಂಗೀಕರಿಸಿದರು. ವಿಶೇಷ ಎಂದರೆ, ನಮ್ಮ ಜಾತಿ... ಮಾನವ ಎಂಬ ಘೋಷವಾಕ್ಯದೊಂದಿಗೆ ಈ ಗ್ರಾಮ ಮುನ್ನಡೆಯಲು ತೀರ್ಮಾನಿಸಿದೆ.
ಸುಮಾರು 1,800ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಹಳ್ಳಿಯಲ್ಲಿ ವಿವಿಧ ಜಾತಿ, ವರ್ಗದ ಜನರಿದ್ದಾರೆ. ಆದರೆ, ಯಾವುದೇ ಜಾತಿ, ಜನಾಂಗ, ಅಥವಾ ವರ್ಗ ಭೇದವಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಗ್ರಾಮಸ್ಥರು ಮೆರೆದಿದ್ದಾರೆ. ಸಮಾಜದ ಎಲ್ಲ ವರ್ಗದ ಜನರು ಒಮ್ಮತದಿಂದ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವುದು ನಿಜಕ್ಕೂ ಅಭಿನಂದನಾರ್ಹ.
ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಸಮಾನ ಹಕ್ಕು
ಈ ನಿರ್ಣಯದ ಪ್ರಕಾರ ಗ್ರಾಮದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಅಸ್ಪೃಶ್ಯತೆ ಅಥವಾ ಜಾತಿ ಆಧಾರಿತ ಸಾಮಾಜಿಕ ಬಹಿಷ್ಕಾರಕ್ಕೆ ಅವಕಾಶವಿಲ್ಲ. ಗ್ರಾಮದ ದೇವಸ್ಥಾನಗಳು, ಸಮುದಾಯ ಭವನಗಳು, ಶಾಲೆಗಳು, ಕೆರೆ-ಕುಂಟೆಗಳಂತಹ ನೀರಿನ ಮೂಲಗಳು ಮತ್ತು ಸ್ಮಶಾನ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಿಗೆ ಪ್ರತಿಯೊಬ್ಬರಿಗೂ ಸಮಾನ ಹಾಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಎಲ್ಲರೂ ಸಮಾನವಾಗಿ ಅನುಭವಿಸುವ ಹಕ್ಕನ್ನು ಈ ಗ್ರಾಮಸಭೆ ಖಾತ್ರಿಪಡಿಸಿದೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬ ಸಂದೇಶವನ್ನು ರವಾನಿಸಿದೆ.
ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳಿಂದ ಪ್ರೇರಣೆಗೊಂಡು ಸೌಂದಲ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಈ ಹಿಂದೆಯೂ ಜಾತಿ ಆಧಾರಿತ ಸಂಘರ್ಷಗಳು ತೀರಾ ಕಡಿಮೆ ಇದ್ದವು. ಆದರೆ, ಭವಿಷ್ಯದಲ್ಲಿ ಯಾವುದೇ ರೀತಿಯ ತಾರತಮ್ಯದ ಬೀಜ ಬಿತ್ತಬಾರದು ಎಂಬ ದೂರದೃಷ್ಟಿ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಈ ದಿಟ್ಟ ಹೆಜ್ಜೆ ಇಡಲಾಗಿದೆ.
ಗ್ರಾಮ ಪಂಚಾಯಿತಿ ಆಡಳಿತವು ಕೇವಲ ಭೌತಿಕವಾಗಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡುವ ಅಥವಾ ತಾರತಮ್ಯ ಪ್ರಚೋದಿಸುವ ಪೋಸ್ಟ್‌ಗಳ ಮೇಲೂ ತೀವ್ರ ನಿಗಾ ಇಡಲು ನಿರ್ಧರಿಸಿದೆ.
ಸೌಂದಲ ಗ್ರಾಮವು ಇಂತಹ ಕ್ರಾಂತಿಕಾರಿ ಹೆಜ್ಜೆ ಇಡುತ್ತಿರುವುದು ಇದೇ ಮೊದಲೇನಲ್ಲ. 2024ರಲ್ಲಿ ಈ ಗ್ರಾಮವು ವಿಧವಾ ವಿವಾಹವನ್ನ ಬೆಂಬಲಿಸಿ ಮತ್ತು ಅವಹೇಳನಕಾರಿ ಹಾಗೂ ನಿಂದನಾತ್ಮಕ ಪದಗಳ ಬಳಕೆಯನ್ನು ನಿಷೇಧಿಸಿ ನಿರ್ಣಯ ಕೈಗೊಂಡಿತ್ತು. ಈಗ ಜಾತಿ ಮುಕ್ತ ಗ್ರಾಮವಾಗಿ ಹೊರಹೊಮ್ಮುವ ಮೂಲಕ ಸಾಮಾಜಿಕ ಸುಧಾರಣೆಯಲ್ಲಿ ಇಡೀ ದೇಶಕ್ಕೆ ತಾನೇ ನಾಯಕತ್ವ ವಹಿಸಿದೆ.
ಸ್ಥಳೀಯ ಸ್ವಯಂ ಆಡಳಿತ ಹಾಗೂ ಸಮುದಾಯದ ಒಗ್ಗಟ್ಟು ಹೇಗೆ ಒಂದು ದೊಡ್ಡ ಮಟ್ಟದ ಸಾಮಾಜಿಕ ಬದಲಾವಣೆಯನ್ನು ಕೆಳಮಟ್ಟದಿಂದಲೇ ತರಬಲ್ಲದು ಎಂಬುದಕ್ಕೆ ಸೌಂದಲ ಗ್ರಾಮ ಅತ್ಯುತ್ತಮ ಉದಾಹರಣೆಯಾಗಿದೆ.


Click it and Unblock the Notifications
