Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
ಕರ್ನಾಟಕ ಲೋಕಸಭಾ ಚುನಾವಣೆಯ ಪ್ರಚಾರ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮುಂದೆ ನಡೆಯುತ್ತಿರುವಂತೆ ಕಂಡು ಬಂದಿದೆ. ತಿರುಪತಿ ತಿರುಮಲ ದೇವಸ್ಥಾನದ ಮುಂದೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರ ಫೋಟೋ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ತಿರುಪತಿ ದೇವಸ್ಥಾನದ ಮುಂದೆ ಭಕ್ತನೊಬ್ಬ ಸೌಮ್ಯ ರೆಡ್ಡಿ ಫೋಟೋ ಹಿಡಿದು ಫೋಟೋ ಫೋಸ್ ಕೊಟ್ಟಿದ್ದಾನೆ. ಈ ವ್ಯಕ್ತಿಯನ್ನು ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಹೇಳಲಾಗಿದೆ. ಅಂದಹಾಗೆ ತಿರುಮಲದಲ್ಲಿ ಪಕ್ಷ ಮತ್ತು ರಾಜಕೀಯ ನಾಯಕರ ಫೋಟೋ ತೆಗೆಯಬಾರದು ಎಂಬ ನಿಯಮವಿದೆ. ಆದರೆ ಆ ನಿಯಮ ಉಲ್ಲಂಘಿಸಿ ಕಾರ್ಯಕರ್ತ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಭಾರತದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತ ಶುಕ್ರವಾರದಿಂದ (ಏಪ್ರಿಲ್ 19) ಆರಂಭವಾಗಿವೆ. ಈ ನಡುವೆ ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡಿದ್ದಾರೆ. ಅಭ್ಯರ್ಥಿಗಳ ಜೊತೆಗೆ ಅವರ ಬೆಂಬಲಿಗರೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ.
ಅಂತೆಯೇ ಚುನಾವಣೆಯಲ್ಲಿ ಗೆಲ್ಲಿಸುವಂತೆ ಬೇಡಿ ಅಭ್ಯರ್ಥಿಗಳು ತಿರುಪತಿಗೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ತಿರುಪತಿಯಲ್ಲಿ ಯಾವುದೇ ಪ್ರಚಾರದ ರೀತಿಯಲ್ಲಿ ಫೋಟೋಗಳನ್ನು ಬಳಕೆ ಮಾಡುವಂತಿಲ್ಲ. ಆದರೆ ಬೆಂಗಳೂರು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸೌಮ್ಯರೆಡ್ಡಿ ಫೋಟೋ ಹಿಡಿದು ನಿಯಮವನ್ನು ಉಲ್ಲಂಘಿಸಿದ್ದಾನೆ.

ತಿರುಪತಿಯಲ್ಲಿ ಚುನಾವಣೆ ಪ್ರಯುಕ್ತ ಶಿಫಾರಸ್ಸು ಪತ್ರಗಳನ್ನು ರದ್ದುಗೊಳಿಸಲಾಗಿದೆ. ತಿರುಪತಿ ದೇವಸ್ಥಾನದ ಆವರಣದಲ್ಲಿ ಯಾವುದೇ ಚುನಾವಣಾ ಅಭ್ಯರ್ಥಿಗಳ ಫೋಟೋಗಳನ್ನು ಅಂಟಿಸುವಂತಿಲ್ಲ. ಪ್ರಚಾರ ಮಾಡುವಂತಿಲ್ಲ. ಆದರೆ ತಿರುಪತಿಯಲ್ಲಿ ಕಾರ್ಯಕರ್ತನು ಹಿಡಿದ ಫೋಟೋದಲ್ಲಿ ಸೌಮ್ಯ ರೆಡ್ಡಿ, ಶಾಸಕ ಎಂ ಕೃಷ್ಣಪ್ಪ, ಶಾಸಕ ಪ್ರಿಯಾ ಕೃಷ್ಣ ಅವರೊಂದಿಗೆ ಕಾರ್ಯಕರ್ತರ ಚಿತ್ರವೂ ಇದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಜೊತೆಗೆ ಕಾರ್ಯಕರ್ತನ ವಿರುದ್ಧ ಸೂಕ್ತ ಕ್ರಮಕ್ಕೆ ಚುನಾವಣಾ ಆಯೋಗ್ಯಕ್ಕೆ ಒತ್ತಾಯಿಸಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ ಆರೋಪ ಸೌಮ್ಯ ರೆಡ್ಡಿ ಬೆಂಬಲಿಗರ ವಿರುದ್ಧ ದೂರು
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಮತ್ತಿತರರ ವಿರುದ್ಧ ಬಿಜೆಪಿ ಗುರುವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಇಲ್ಲಿನ ಬಿಟಿಎಂ ಲೇಔಟ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದಿಂದ ಗ್ಯಾರೆಂಟಿ ಕಾರ್ಡ್‌ಗೆ ಬದಲಾಗಿ ಆಧಾರ್ ನೀಡುವಂತೆ ಹೇಳುವ ಮೂಲಕ ಮತದಾರರಿಗೆ ಪ್ರೇರೆಪಿಸುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಗಳಿಂದ ಚುನಾವಣೆ ನಂತರ ಮತದಾರರು 1 ಲಕ್ಷ ರೂ. ಬಾಂಡ್ ಸ್ವೀಕರಿಸಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿಯ ಚುನಾವಣಾ ಏಜೆಂಟ್ ಗಜೇಂದ್ರ ಎಸ್ ದೂರಿದ್ದಾರೆ.












Click it and Unblock the Notifications