EPFO: ಇಪಿಎಫ್‌ಒ ವೇತನ ಮಿತಿ ಏರಿಕೆ, ಉದ್ಯೋಗಿಗಳ ಮೇಲೆ ಪರಿಣಾಮವೇನು?
ನವದೆಹಲಿ, ನವೆಂಬರ್ 11: ಉದ್ಯೋಗಿಗಳಿಗೆ ಮಹತ್ವದ ಮಾಹಿತಿಯೊಂದಿದೆ. ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ನಿಯಮದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗೆ ತಯಾರಿ ನಡೆಸಿದೆ. ಈ ಕುರಿತು ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಸದ್ಯ ರೂ. 15 ರೂ. ವೇತನ ಪಡೆಯುತ್ತಿರುವವರು ಇಪಿಎಫ್‌ಒ ವ್ಯಾಪ್ತಿಗೆ ಸೇರುತ್ತಿದ್ದಾರೆ.
ಕೇಂದ್ರ ಸರ್ಕಾರ ಇಪಿಎಫ್‌ಒಗೆ ಇರುವ ಗರಿಷ್ಠ ವೇತನ ಮಿತಿಯನ್ನು 15 ಸಾವಿರದಿಂದ 21,000 ರೂ.ಗಳಿಗೆ ಏರಿಕೆ ಮಾಡಲು ತಯಾರಿ ನಡೆಸಿದೆ. 20214ರಲ್ಲಿನ ವೇತನ ಸಮಿತಿಯ ವರದಿಯ ಬಳಿಕ ಗರಿಷ್ಠ ವೇತನ ಮಿತಿಯನ್ನು 15,000 ರೂ.ಗಳಿಗೆ ನಿಗದಿ ಮಾಡಲಾಗಿತ್ತು.

ಈ ಕುರಿತು ಈಗಾಗಲೇ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಣಕಾಸು ಸಚಿವಾಲಯಕ್ಕೆ ಏಪ್ರಿಲ್‌ನಲ್ಲಿಯೇ ವರದಿ ಸಲ್ಲಿಕೆ ಮಾಡಿದೆ. ಈ ಪ್ರಸ್ತಾವನೆಗೆ ಈಗ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಸಚಿವಾಲಯ ಅನುಮೋದನೆ ನೀಡುವುದು ಬಹುತೇಕ ಖಚಿತವಾಗಿದೆ.
ದಶಕದ ಬಳಿಕ ವೇತನ ಮಿತಿ ಹೆಚ್ಚಳ: ಸದ್ಯ ಇಪಿಎಫ್‌ಒ ವೇತನ ಮಿತಿ 15,000 ರೂ. ಇದೆ. 2014ರಲ್ಲಿ ವೇತನ ಸಮಿತಿಯ ಶಿಫಾರಸು ಆಧರಿಸಿ ಕನಿಷ್ಠ ವೇತನ ಮಿತಿಯನ್ನು 6,500 ರೂ.ಗಳಿಂದ 15,000 ರೂ.ಗಳಿಗೆ ಏರಿಕೆ ಮಾಡಲಾಗಿತ್ತು. ಈಗ ದಶಕದ ಬಳಿಕ ವೇತನ ಮಿತಿ ಮತ್ತೆ ಏರಿಕೆಯಾಗಿ 21,000 ರೂ.ಗಳಿಗೆ ಏರಿಕೆಯಾಗಲಿದೆ.
ಇಪಿಎಫ್‌ಒ ವೇತನ ಹೆಚ್ಚಳದ ಮಿತಿ ಏರಿಕೆಯಿಂದ ಉದ್ಯೋಗಿಗಳ ಮೇಲೆ ಏನು ಪರಿಣಾಮ ಉಂಟಾಗಲಿದೆ? ಎಂಬ ಪ್ರಶ್ನೆ ಸಹಜ. ವೇತನ ಮಿತಿ ಹೆಚ್ಚಳವಾಗುವ ಕಾರಣ ನೌಕರರ ಭವಿಷ್ಯ ನಿಧಿ ಖಾತೆಗೆ ಜಮೆ ಮಾಡುವ ಮೊತ್ತವೂ ಹೆಚ್ಚಳವಾಗುತ್ತದೆ. ಆಗ ನೌಕರರ ಕೈ ಸೇರುವ ವೇತನ (ಟೇಕ್ ಹೋಮ್ ಸ್ಯಾಲರಿ) ಕಡಿಮೆಯಾಗಲಿದೆ.
ನಿಯಮದಂತೆ ಮೂಲ ವೇತನ ಮತ್ತು ತುಟ್ಟಿಭ್ಯೆಯ ಶೇ 12ರಷ್ಟನ್ನು ಉದ್ಯೋಗಿ ಮತ್ತು ಉದ್ಯೋಗದಾತರು ಪಾವತಿ ಮಾಡಬೇಕು. ಉದ್ಯೋಗಿಯ ಪಾಲನ್ನು ಸಂಪೂರ್ಣವಾಗಿ ನೌಕರರ ಭವಿಷ್ಯ ನಿಧಿ ಖಾತೆಗೆ ಜಮೆ ಮಾಡಲಾಗುತ್ತದೆ. ಉದ್ಯೋಗದಾತರ ಪಾಲಿನ ಶೇ 8.33ರಷ್ಟು ಪಿಂಚಣಿ ಯೋಜನೆ ಖಾತೆಗೆ ಜಮೆ ಮಾಡಲಾಗುತ್ತದೆ. ಈಗ ವೇತನ ಮಿತಿ ಹೆಚ್ಚಳವಾಗುವ ಕಾರಣ ಉದ್ಯೋಗಿ, ಉದ್ಯೋಗದಾತ ಇಬ್ಬರ ಪಾಲು ಸಹ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರ ಮೇ 2024ರಂದು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಇಪಿಎಫ್ಒ 2024ರಲ್ಲಿ 14.41 ಲಕ್ಷ ನಿವ್ವಳ ಸದಸ್ಯರನ್ನು ಹೊಂದಿದೆ. ಮಾರ್ಚ್ 2024ರಲ್ಲಿ ಸುಮಾರು 7.47 ಲಕ್ಷ ಹೊಸ ಸದಸ್ಯರನ್ನು ನೋಂದಾಯಿಸಲಾಗಿದೆ. ಮಾರ್ಚ್ ಸೇರಿಸಲಾದ ಒಟ್ಟು ಹೊಸ ಸದಸ್ಯರಲ್ಲಿ ಶೇ 56.83 ರಷ್ಟು 18-25ರ ವಯೋಮಾನದವರು. ವೇತನದಾರರ ಲಿಂಗವಾರು ವಿಶ್ಲೇಷಣೆಯಂತೆ 7.47 ಲಕ್ಷ ಹೊಸ ಸದಸ್ಯರಲ್ಲಿ ಸುಮಾರು 2 ಲಕ್ಷ ಹೊಸ ಮಹಿಳಾ ಸದಸ್ಯರು ಸೇರಿಕೊಂಡಿದ್ದಾರೆ.
ಹಲವು ಸದಸ್ಯರು ಒಮ್ಮೆ ಯೋಜನೆ ವ್ಯಾಪ್ತಿಯಿಂದ ಹೊರ ಹೋಗಿ ಬಳಿಕ ಮತ್ತೆ ಮರು ಸೇರ್ಪಡೆಗೊಳ್ಳುತ್ತಾರೆ. ಉದ್ಯೋಗ ಬದಲಾವಣೆ ಸಮಯದಲ್ಲಿ ಮತ್ತು ಇಪಿಎಫ್‌ಒ ವ್ಯಾಪ್ತಿಯಡಿಯಲ್ಲಿ ಒಳಗೊಂಡಿರುವ ಸಂಸ್ಥೆಗಳಿಗೆ ಮರು ಸೇರ್ಪಡೆಗೊಂಡಾಗ ಈ ಮಾದರಿಯ ಬದಲಾವಣೆ ಆಗುತ್ತದೆ. ಇಂತಹ ಯೋಜನೆ ವ್ಯಾಪ್ತಿಗೆ ಸೇರುವ ಮೂಲಕ ನೌಕರರು ದೀರ್ಘಾವಧಿಯ ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಸಾಮಾಜಿಕ ಭದ್ರತೆ ರಕ್ಷಣೆಯನ್ನು ವಿಸ್ತರಿಸಿಕೊಂಡಂತೆ ಆಗುತ್ತದೆ.












Click it and Unblock the Notifications