ನಾಟಕೀಯ ಬೆಳವಣಿಗೆ ಬಳಿಕವೂ ಬದಲಾಗದ ನಾಯಕತ್ವ: ಸೋನಿಯಾ ಪಾರುಪತ್ಯ ಮುಂದುವರಿಕೆ
ನವದೆಹಲಿ, ಆಗಸ್ಟ್ 24: ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯ ಸರ್ಕಸ್, ನಾಟಕೀಯ ಘಟನಾವಳಿಗಳ ಬಳಿಕ ಯಾವುದೇ ಬದಲಾವಣೆಗಳಿಲ್ಲದೆ ಅಂತ್ಯಗೊಂಡಿದೆ. ತೀವ್ರ ಚರ್ಚೆ, ಒತ್ತಡ ಅಭಿಪ್ರಾಯ ಮಂಡನೆ ಬಳಿಕ ಸೋನಿಯಾ ಗಾಂಧಿ ಅವರು ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತೀರ್ಮಾನಿಸಲಾಗಿದೆ.
ಎಐಸಿಸಿಗೆ ಪೂರ್ಣಾವಧಿ ಅಧ್ಯಕ್ಷರ ಆಯ್ಕೆಯಾಗಬೇಕೆಂದು ಪಕ್ಷದ ಹಿರಿಯ ಮುಖಂಡರು ಬಲವಾಗಿ ಪ್ರತಿಪಾದಿಸಿದ್ದರು. ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಹಂಗಾಮಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಕೆಳಕ್ಕಿಳಿದು ಹೊಸ ನಾಯಕತ್ವಕ್ಕೆ ಅವಕಾಶ ನೀಡಲಿದ್ದಾರೆ ಎಂದು ಭಾವಿಸಲಾಗಿತ್ತು. ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಬೇಕು ಎಂದು ಒಂದು ಬಣ ಪ್ರತಿಪಾದಿಸಿದ್ದರೆ, ಹೊಸ ಸಮರ್ಥ ನಾಯಕನ ಆಯ್ಕೆಗೆ ಮತ್ತೊಂದು ಬಣ ಒತ್ತಾಯಿಸಿತ್ತು. ಆದರೆ ಕೊನೆಗೆ ಯಾವ ವಾಸ-ವವಾದಗಳಿಗೂ ತಾರ್ಕಿಕ ಅಂತ್ಯ ಸಿಗದೇ ಸೋನಿಯಾ ಗಾಂಧಿ ಅವರನ್ನೇ ಅಧ್ಯಕ್ಷಗಿರಿಯಲ್ಲಿ ಮುಂದುವರಿಸಲು ಒಪ್ಪಿಕೊಳ್ಳಲಾಯಿತು.
ಫೆಬ್ರವರಿಯವರೆಗೂ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಫೆಬ್ರವರಿಯ ಒಳಗೆ ಹೊಸ ಅಧ್ಯಕ್ಷರ ನೇಮಕದ ಬಗ್ಗೆ ಅಭಿಪ್ರಾಯ ಸಂಗ್ರಹ ನಡೆಸಲು ಉದ್ದೇಶಿಸಲಾಯಿತು. ಸೋನಿಯಾ ಅವರ ಮುಂದುವರಿಕೆಗೆ ಒಮ್ಮತದ ಬೆಂಬಲ ದೊರಕಿತು.
ಸೋನಿಯಾ ಗಾಂಧಿ ಕೂಡ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಇಚ್ಛಿಸಿದ್ದರು. ತಾವು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಸಿಡಬ್ಲ್ಯೂಸಿ ಸಭೆಯ ಆರಂಭದಲ್ಲಿ ಅವರು ಹೇಳಿದ್ದರು. ಹಾಗಿದ್ದೂ ನಾಯಕತ್ವದ ಬಿಕ್ಕಟ್ಟಿನ ಗೊಂದಲದಲ್ಲಿರುವ ಕಾಂಗ್ರೆಸ್‌ಗೆ ನೂತನ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಮುಂದೆ ಓದಿ.

ರಾಜೀನಾಮೆ ನೀಡುವುದಾಗಿ ಹೇಳಿದ್ದ ಸೋನಿಯಾ
ಪಕ್ಷಕ್ಕೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸೋನಿಯಾ ಗಾಂಧಿ ಸೂಚಿಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಹಿರಿಯ ನಾಯಕರ ತಂಡವು ಪೂರ್ಣಾವಧಿ ನಾಯಕರ ಆಯ್ಕೆಗೆ ಒತ್ತಾಯಿಸಿತ್ತು. ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ತಾವು ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಯಲು ಸಿದ್ಧರಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ವಿವರವಾದ ಪ್ರತಿಕ್ರಿಯೆ ನೀಡಿದ್ದಾಗಿ ತಿಳಿಸಿದರು.

ಸೋನಿಯಾ ಪರ ಸಿಂಗ್ ಬ್ಯಾಟಿಂಗ್
ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿ ಎಂದು ಒತ್ತಾಯಿಸಿದರು. ಅವರಿಗೆ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಬೆಂಬಲ ನೀಡಿದರು. ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಮುಕುಲ್ ವಾಸ್ನಿಕ್ ಸೇರಿದಂತೆ ಪಕ್ಷದ ಕೆಲವು ನಾಯಕರು ಸಹಿ ಹಾಕಿ ರವಾನಿಸಿದ್ದ ಪತ್ರದ ಬಗ್ಗೆ ಅವರು ಕಿಡಿಕಾರಿದರು.

ಬಿಜೆಪಿ ಜತೆ ನಂಟು
ಸಭೆಯ ವೇಳೆ ರಾಹುಲ್ ಗಾಂಧಿ ಆಡಿದ ಮಾತು ಅನೇಕ ಹಿರಿಯ ಮುಖಂಡರಲ್ಲಿ ಅಸಾಮಾಧಾನ ಮೂಡಿಸಿತ್ತು. ಸೋನಿಯಾ ಅವರು ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪತ್ರ ಬರೆದಿದ್ದ ಮುಖಂಡರ ವಿರುದ್ಧ ಹರಿಹಾಯ್ದ ರಾಹುಲ್, ಪತ್ರ ಬರೆದ ಸಮಯವನ್ನು ಪ್ರಶ್ನಿಸಿದ್ದರು. ಜತೆಗೆ ಬಿಜೆಪಿ ಜತೆ ಸಂಬಂಧ ಹೊಂದಿರುವ ಭಿನ್ನಮತೀಯರು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು ಎನ್ನಲಾಗಿದೆ.

ಸಿಡಿದ ಕಪಿಲ್ ಸಿಬಲ್
ಇದಕ್ಕೆ ಕಪಿಲ್ ಸಿಬಲ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಪಕ್ಷಕ್ಕಾಗಿ ಇಷ್ಟೆಲ್ಲ ಮಾಡಿದವರಿಗೆ ಬಿಜೆಪಿ ಜತೆ ನಂಟಿನ ಪಟ್ಟ ಕಟ್ಟಿದ್ದಾರೆ ಎಂದು ಕಿಡಿಕಾರಿದ್ದರು. ಆದರೆ ನಂತರ ತಮ್ಮ ಟ್ವೀಟ್ ಅನ್ನು ಅಳಿಸಿ ಹಾಕಿದ್ದರು. ಕಪಿಲ್ ಸಿಬಲ್, ಗುಲಾಮ್ ನಬಿ ಆಜಾದ್, ರಣದೀಪ್ ಸುರ್ಜೇವಾಲಾ ಸೇರಿದಂತೆ ಅನೇಕ ಮುಖಂಡರು, ರಾಹುಲ್ ಗಾಂಧಿ ಈ ರೀತಿ ಹೇಳಿಕೆ ನೀಡಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.












Click it and Unblock the Notifications