ಸರ್ಕಾರಿ ಶಾಲೆಯ ಬಿಸಿ ಊಟದಲ್ಲಿ ಹಾವು ಪತ್ತೆ- ವಿದ್ಯಾರ್ಥಿಗಳು ಅಸ್ವಸ್ಥ
ಪಾಟ್ನಾ ಮೇ 27: ಬಿಹಾರದಲ್ಲಿ ಶನಿವಾರ ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವು ಕಂಡುಬಂದಿದ್ದು ಊಟ ಸೇವಿಸಿದ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಾರಿಯಾ ಜಿಲ್ಲೆಯ ಫೋರ್ಬೆಸ್‌ಗಂಜ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಶಾಲೆಯ ನೂರಾರು ಮಕ್ಕಳು ಆಹಾರವನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಫೋರ್ಬ್ಸ್‌ಗಂಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು (ಮೇ 27) ಮಧ್ಯಾಹ್ನದ ಊಟದ ಸಮಯದಲ್ಲಿ ಎನ್‌ಜಿಒ ಸಿದ್ಧಪಡಿಸಿದ ಖಿಚಡಿಯನ್ನು ವಿದ್ಯಾರ್ಥಿಗಳಿಗೆ ಬಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗೆ ಬಡಿಸಿದ್ದ ಪ್ಲೇಟ್‌ವೊಂದರಲ್ಲಿ ಹಾವು ಕಂಡುಬಂದಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಘಟನೆ ವರದಿಯಾದ ನಂತರ ಶಾಲೆಯಲ್ಲಿ ಊಟದ ವಿತರಣೆಯನ್ನು ನಿಲ್ಲಿಸಲಾಯಿತು. ಆದರೆ ಅದಾಗಲೇ ಆಹಾರ ಸೇವಿಸಿದ್ದ ವಿದ್ಯಾರ್ಥಿಗಳಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಫೋರ್ಬ್ಸ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಎಸ್‌ಡಿಎಂ, ಎಸ್‌ಡಿಒ ಮತ್ತು ಡಿಎಸ್‌ಪಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದರು. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. ಊಟ ತಿಂದು 100ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದರೆ, 25 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯಲ್ಲಿ ಗ್ರಾಮಸ್ಥರ ಗಲಾಟೆ
ಘಟನೆ ವರದಿಯಾದ ನಂತರ ಗ್ರಾಮಸ್ಥರು ಮತ್ತು ಮಕ್ಕಳ ಪೋಷಕರು ಶಾಲೆಗೆ ಆಗಮಿಸಿ ಗಲಾಟೆ ಮಾಡಲು ಪ್ರಾರಂಭಿಸಿದರು. ಕೆಲವರು ಶಾಲೆಯ ಮುಖ್ಯೋಪಾಧ್ಯಾಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಡಿಒ ಸುರೇಂದ್ರ ಅಲ್ಬೇಲ ತಿಳಿಸಿದ್ದಾರೆ.
2014ರಲ್ಲಿ ಇದೇ ರೀತಿಯ ಘಟನೆ
ಇದಕ್ಕೂ ಮೊದಲು 2014 ರಲ್ಲಿ ಬಿಹಾರದ ಸಿತಾಮರ್ಹಿ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆಯ 54 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದರು. ಅಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಶಾಲೆಯಲ್ಲಿ ನೀಡಲಾಗಿದ್ದು ಬಿಸಿ ಊಟದಲ್ಲಿ ಹಾವು ಕಂಡುಬಂದಿತ್ತು.
ಈ ಬಗ್ಗೆ ವಿವರಗಳನ್ನು ನೀಡಿದ ಸುರ್ಸಂದ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ ವಿನೋದ್ ಕುಮಾರ್, ಸೂರ್ಸಂದ್‌ನಲ್ಲಿರುವ ಮೇಘಪುರ ಮಿಡ್ಲ್ ಸ್ಕೂಲ್‌ನ ಮಕ್ಕಳಿಗೆ ವಾಕರಿಕೆ ಲಕ್ಷಣಗಳು ಕಾಣಿಸಿಕೊಂಡು ಊಟ ತಿಂದ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಔಷಧ ನೀಡಿ ನಿಗಾದಲ್ಲಿ ಇರಿಸಲಾಯಿತು.
ಹೆಚ್ಚಿನ ಮಾಹಿತಿ ನೀಡಿದ ಸೂರ್‌ಸಂಡ್ ಇನ್ಸ್‌ಪೆಕ್ಟರ್ ಬಿಮಾರ್ ಕುಮಾರ್ ಸಿಂಗ್, ವಿದ್ಯಾರ್ಥಿಗಳು ಊಟವನ್ನು ಸೇವಿಸಿದ್ದಾರೆ ಮತ್ತು ನಂತರ ಅದನ್ನು ಬೇಯಿಸಿದ ದೊಡ್ಡ ಪಾತ್ರೆಯಲ್ಲಿ ಸತ್ತ ಹಾವಿರುವುದು ಗಮನಿಸಿದ್ದಾರೆ ಎಂದು ಖಚಿತಪಡಿಸಿದ್ದರು. ಇಷ್ಟು ಮಾತ್ರವಲ್ಲದೆ ಈ ಘಟನೆಗೂ ಮುನ್ನ ಬಿಹಾರದ ಸರನ್ ಜಿಲ್ಲೆಯ ಧರ್ಮಸತಿ ಗಂದಮಾನ್ ಗ್ರಾಮದ ಪ್ರಾಥಮಿಕ ಶಾಲೆಯ 23 ಮಕ್ಕಳು ಕೀಟನಾಶಕ ಬೆರೆಸಿದ ಮಧ್ಯಾಹ್ನದ ಊಟ ಸೇವಿಸಿ ಸಾವನ್ನಪ್ಪಿದ್ದರು.












Click it and Unblock the Notifications