ಕೇಂದ್ರದ ಲಸಿಕೆ ರಫ್ತು ನಿರ್ಬಂಧದ ವಿರುದ್ಧ ಸೈರಸ್ ಪೂನಾವಾಲ ಆಕ್ರೋಶ
ಪುಣೆ, ಆಗಸ್ಟ್ 13: ಕೊರೊನಾ ಲಸಿಕೆಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರ ಹೇರಿರುವ ನಿರ್ಬಂಧವನ್ನು ವಿರೋಧಿಸಿರುವ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸೈರಸ್ ಪೂನಾವಾಲಾ, "ಕೇಂದ್ರ ಸರ್ಕಾರದ ಈ ನಡೆ ಅತಿ ಕೆಟ್ಟ ಕ್ರಮವಾಗಿದೆ" ಎಂದು ಟೀಕಿಸಿದ್ದಾರೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾದ ಸೆರಂ ಇನ್‌ಸ್ಟಿಟ್ಯೂಟ್ ಕಳೆದ ವರ್ಷ ಉನ್ನತ ಲಸಿಕೆ ಪೂರೈಕೆದಾರರು ಎಂಬ ಹೆಸರು ಪಡೆದಿತ್ತು. ಆದರೆ ರಫ್ತು ನಿಷೇಧದಿಂದಾಗಿ ಈಗಾಗಲೇ ಲಸಿಕೆಗಾಗಿ ಬೇಡಿಕೆ ಸಲ್ಲಿಸಿದ್ದ ವಿದೇಶಗಳಿಗೆ ಲಸಿಕೆ ಪೂರೈಸುವಲ್ಲಿ ಭಾರತೀಯ ಕಂಪನಿಯು ಹಿನ್ನಡೆ ಅನುಭವಿಸಿದೆ.
ಕೇಂದ್ರ ಸರ್ಕಾರದ ಈ ಕ್ರಮ ಸಂಸ್ಥೆಯನ್ನು ಕಠಿಣ ಪರಿಸ್ಥಿತಿಗೆ ದೂಡಿದೆ ಎಂದು ಸೈರಸ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವನ್ನು ಶೀಘ್ರವೇ ಹಿಂಪಡೆಯಬೇಕು ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಮಧ್ಯೆ ಏಪ್ರಿಲ್‌ನಿಂದ ಕೇಂದ್ರ ಸರ್ಕಾರವು ಕೋವಿಡ್ ಲಸಿಕೆ ರಫ್ತು ನಿಷೇಧಿಸಿದ್ದು, ಕಂಪನಿಯು ಯಾವುದೇ ಡೋಸೇಜ್‌ಗಳನ್ನು ವಿದೇಶಕ್ಕೆ ಕಳುಹಿಸಲು ಸಾಧ್ಯವಾಗಿಲ್ಲ.
ಈ ವಿಷಯವನ್ನು ಉಲ್ಲೇಖಿಸಿದ ಸೈರಸ್ ಪೂನಾವಾಲ, "ಈ ವಿಷಯದ ಕುರಿತು ಮಾತನಾಡದಂತೆ ನನ್ನ ಮಗ, (ಐಎಸ್‌ಎಸ್ ಸಿಇಒ ಅದಾರ್ ಪೂನಾವಾಲ) ನನ್ನ ಬಳಿ ಮನವಿ ಮಾಡಿಕೊಂಡಿದ್ದಾನೆ" ಎಂದು ಹೇಳಿದ್ದಾರೆ.
"ಲಸಿಕೆ ರಫ್ತು ನಿಷೇಧ ಮೋದಿ ಸರ್ಕಾರದ ಅತಿ ಕೆಟ್ಟ ನಿರ್ಧಾರ. ಈ ಬಗ್ಗೆ ನಾನು ಮಾತನಾಡಬಾರದು ಎಂದುಕೊಂಡಿದ್ದೆ. ಆದರೆ ಲಸಿಕೆ ರಫ್ತಿಗೆ ಅವಕಾಶ ನೀಡಲೇಬೇಕಿದೆ" ಎಂದಿದ್ದಾರೆ.
ನೂರ ಐವತ್ತಕ್ಕೂ ಹೆಚ್ಚು ದೇಶಗಳು ಕೊರೊನಾ ಲಸಿಕೆಗಳಿಗಾಗಿ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯನ್ನು ಅವಲಂಬಿಸಿವೆ. ನಿರ್ಣಾಯಕ ಪೂರೈಕೆಯನ್ನು ನಿಲ್ಲಿಸಿದ್ದಕ್ಕಾಗಿ ಕಂಪನಿಯನ್ನು ದೂಷಿಸಲಾಗುತ್ತಿದೆ. ಸಂಸ್ಥೆಯನ್ನು ನಂಬಿ ದೇಶಗಳು ಕಂಪನಿಗೆ ಕೋಟ್ಯಂತರ ರೂಪಾಯಿಯನ್ನು ಪಾವತಿಸಿವೆ ಎಂದು ದೂರಿದರು.
ಲಸಿಕೆಗೆ ಮುಂಗಡವೇ ಹಣ ನೀಡಿದ್ದ ಗೇಟ್ಸ್ ಫೌಂಡೇಷನ್ ಹಾಗೂ ಡಬ್ಲುಎಚ್‌ಒಗೆ ಹಣ ಹಿಂದಿರುಗಿಸಲು ಮುಂದಾಗಿದ್ದೆ. ಆದರೆ ಭಾರತ ರಫ್ತು ನಿಷೇಶವನ್ನು ತೆರವುಗೊಳಿಸುತ್ತದೆ ಎಂಬ ಭರವಸೆಯಲ್ಲಿ ಅವರು ಈ ಕೋರಿಕೆಯನ್ನು ನಿರಾಕರಿಸಿದ್ದಾರೆ ಎಂದರು.
ಕಳೆದ ವರ್ಷ, ಸೆರಂ ಇನ್‌ಸ್ಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆದಾರ್ ಪೂನವಾಲ್ಲಾ, 2020 ರ ಅಂತ್ಯದ ವೇಳೆಗೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಅಸ್ಟ್ರಾಜೆನೆಕಾ ಪಿಎಲ್‌ಸಿಯ ಕೊರೊನಾ ಲಸಿಕೆಯನ್ನು ನೀಡುವ ಭರವಸೆ ನೀಡಿದ್ದರು. 400 ಮಿಲಿಯನ್ ಡೋಸ್ ಲಸಿಕೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. 2021 ರೊಳಗೆ ಒಂದು ತಿಂಗಳು ಭಾರತದಿಂದ ಯಾವಾಗ ಪರವಾನಗಿ ಪಡೆಯುತ್ತದೆ ಎಂಬ ಬಗ್ಗೆ ಕಂಪನಿಯು ಅನಿಶ್ಚಿತತೆ ಹೊಂದಿದ್ದರಿಂದ ಮತ್ತು ಸಾಕಷ್ಟು ಗೋದಾಮಿನ ಸ್ಥಳವನ್ನು ಹೊಂದಿರದ ಕಾರಣ ಕೇವಲ 70 ಮಿಲಿಯನ್ ಡೋಸ್‌ಗಳನ್ನು ಮಾತ್ರ ಸಂಸ್ಥೆ ಉತ್ಪಾದಿಸಿತ್ತು.
ಲಸಿಕೆ ರಫ್ತು ನಿರ್ಬಂಧದ ಕುರಿತು ಈ ಮುನ್ನ ಮಾತನಾಡಿದ್ದ ಅದಾರ್ ಪೂನಾವಾಲ, "ಈ ಜನವರಿಯಲ್ಲಿ ನಮ್ಮ ಸಂಸ್ಥೆಯಲ್ಲಿ ಹೆಚ್ಚು ಲಸಿಕೆಗಳನ್ನು ಉತ್ಪಾದಿಸಲಾಗಿತ್ತು. ಆಗ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯೂ ಕಡಿಮೆಯಿತ್ತು. ಇದೇ ಸಮಯದಲ್ಲಿ ಬೇರೆ ದೇಶಗಳಲ್ಲಿ ಲಸಿಕೆಗಳ ಅವಶ್ಯಕತೆ ತೀವ್ರವಾಗಿತ್ತು. ಹೀಗಾಗಿ ರಫ್ತು ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ದೇಶ ದೇಶಗಳ ನಡುವೆ ಸಹಕಾರ ನೀಡುವುದು ಮುಖ್ಯವಾಗಿದೆ. ಭಾರತ ಬೇರೆ ದೇಶಗಳಿಗೆ ನೆರವಾಗಿದ್ದ ಕಾರಣಕ್ಕೆ ಇಂದು ಭಾರತಕ್ಕೂ ಬೇರೆ ದೇಶಗಳು ನೆರವು ನೀಡುತ್ತಿವೆ" ಎಂದು ಸಮರ್ಥಿಸಿಕೊಂಡಿದ್ದರು.












Click it and Unblock the Notifications