ಮೋದಿ ಬೆನ್ನಿಗೆ ನಿತೀಶ್ ಕುಮಾರ್: ಬಿಹಾರದ 'ಮಹಾಮೈತ್ರಿ'ಗೆ ಗಂಡಾಂತರ?
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗೆ ತಮ್ಮ ಬೆಂಬಲ ಎನ್ನುವ ಹೇಳಿಕೆಯನ್ನು ಜೆಡಿಯು ಪುನರುಚ್ಚಿಸಿರುವ ಬೆನ್ನಲ್ಲೇ, ಬಿಹಾರದಲ್ಲಿನ ಮಹಾಮೈತ್ರಿಗೆ ಗಂಡಾಂತರ ಕಾದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗೆ ತಮ್ಮ ಬೆಂಬಲ ಎನ್ನುವ ಹೇಳಿಕೆಯನ್ನು ಜೆಡಿಯು ಪುನರುಚ್ಚಿಸಿರುವ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಬಿಹಾರದಲ್ಲಿ ತಮ್ಮ ಪಾಲುದಾರ ಆರ್ಜೆಡಿ, ಸಿಎಂ ನಿತೀಶ್ ಕುಮಾರ್ ವಿರುದ್ದ ತಿರುಗಿಬಿದ್ದಿವೆ.
ಈ ಹಿಂದೆ ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದ ನಿತೀಶ್ ಕುಮಾರ್ ಅವರ ಜೆಡಿಯು, ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದ್ದ ಬೆನ್ನಲ್ಲೇ, ಮೈತ್ರಿಕೂಟದಿಂದ ಹೊರಗೆಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಇದಾದ ನಂತರ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಂಡು ಜನಾದೇಶ ಪಡೆದುಕೊಂಡಿದ್ದ ನಿತೀಶ್ ಕುಮಾರ್, ಮೋದಿ ಸರಕಾರದ ಅಪನಗದೀಕರಣವನ್ನು ಸ್ವಾಗತಿಸಿದ್ದರು. ಜೊತೆಗೆ, ಪ್ರಧಾನಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಯೋಗ್ಯ ವ್ಯಕ್ತಿ ಎನ್ನುವ ಹೇಳಿಕೆಯನ್ನು ನೀಡಿದ್ದರು.
ಈ ಎಲ್ಲಾ ವಿದ್ಯಮಾನಗಳು ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಜೊತೆಗಿನ ಮೈತ್ರಿಯಲ್ಲಿನ ಅಪಸ್ವರ ಎಂದು ರಾಜಕೀಯ ಪಡಶಾಲೆಯಲ್ಲಿ ಕೇಳಿಬರುತ್ತಿರುವ ಸುದ್ದಿಯ ಬೆನ್ನಲ್ಲೇ, ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ನಿತೀಶ್ ಕುಮಾರ್, ಮೋದಿ ಬೆನ್ನಿಗೆ ನಿಂತಿದ್ದಾರೆ.
ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಅಂಟಿಕೊಂಡಿರುವ ನಿತೀಶ್ ವಿರುದ್ದ ಆರ್ಜೆಡಿ ಮುಖ್ಯಸ್ಥ ಲಾಲೂ ವಾಕ್ ಪ್ರಹಾರ ನಡೆಸಿರುವುದು, ಬಿಹಾರದಲ್ಲಿನ ಮಹಾಮೈತ್ರಿಗೆ ಗಂಡಾಂತರ ಕಾದಿದೆ ಎನ್ನುವುದು ಸದ್ಯ ಹರಿದಾಡುತ್ತಿರುವ ಸುದ್ದಿ. ಮೈತ್ರಿಕೂಟದಿಂದ ಆರ್ಜೆಡಿ ಹೊರಬಂದರೂ ನಿತೀಶ್ ಸೇಫ್, ಮುಂದೆ ಓದಿ..

ಬಿಹಾರದಲ್ಲಿ ಕೋವಿಂದ್ ಗೆ ಜೆಡಿಯು ಬೆಂಬಲ
ಬಿಹಾರದಲ್ಲಿ ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಮಹಾಮೈತ್ರಿಕೂಟದ ಸರಕಾರ ಅಧಿಕಾರದಲ್ಲಿದೆ. ಆದರೆ, ಆರ್ಜೆಡಿ ಮತ್ತು ಕಾಂಗ್ರೆಸ್ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೆಂಬಲಿಸದೇ, ಬಿಹಾರ ಮೂಲದ ರಾಮ್ ನಾಥ್ ಕೋವಿಂದ್ ಅವರನ್ನು ನಿತೀಶ್ ಕುಮಾರ್ ಬೆಂಬಲಿಸುತ್ತಿರುವುದು, ಕಾಂಗ್ರೆಸ್ ಮೈತ್ರಿಕೂಟಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.

ನಿತೀಶ್ ವಿರುದ್ದ ಗುಲಾಂನಬಿ, ಲಾಲೂ ವಾಗ್ದಾಳಿ
ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ನಿತೀಶ್ ಅವರನ್ನು ಭೇಟಿಯಾದ ನಂತರ ಬಹಿರಂಗವಾಗಿಯೇ ನಿತೀಶ್ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ. ಇದು, ಬಿಹಾರದ ಮಹಾಮೈತ್ರಿಕೂಟದಲ್ಲಿ ಅಪಸ್ವರ ಎದ್ದಿರುವುದಕ್ಕೆ ಮತ್ತೊಂದು ಉದಾಹರಣೆ.

ಮಹಾಮೈತ್ರಿಯಲ್ಲಿ ಬಿರುಕು
ಒಂದು ಸಿದ್ದಾಂತವನ್ನು ನಂಬುವವರು ಒಂದೇ ನಿರ್ಧಾರಕ್ಕೆ ಬರುತ್ತಾರೆ, ಹಲವು ಸಿದ್ದಾಂತದಲ್ಲಿ ನಂಬಿಕೆಯಿದ್ದವರು ತಮ್ಮ ನಿರ್ಧಾರವನ್ನು ಬದಲಿಸುತ್ತಲೇ ಇರುತ್ತಾರೆ ಎಂದು ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಂನಬಿ ಆಜಾದ್, ನಿತೀಶ್ ವಿರುದ್ದ ಮಾಡಿರುವ ಹೇಳಿಕೆ, ಮಹಾಮೈತ್ರಿಯಲ್ಲಿ ಮತ್ತಷ್ಟು ಬಿರುಕನ್ನು ಹುಟ್ಟುಹಾಕಿದೆ.

ರಾಷ್ಟ್ರಪತಿ ಚುನಾವಣೆಗೆ ಮಾತ್ರ ನಮ್ಮ ಬೆಂಬಲ
ಗುಲಾಂನಬಿ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿರುವ ಜೆಡಿಯು ಮುಖಂಡ ಕೆ ಸಿ ತ್ಯಾಗಿ, ಎನ್ದಿಎ ಜೊತೆ ಹಿಂದೆ ಹೊಂದಿದ್ದ ಸ್ವಾಭಾವಿಕ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಎನ್ಡಿಎ ಮೈತ್ರಿಕೂಟಕ್ಕೆ ನಮ್ಮ ಬೆಂಬಲ ರಾಷ್ಟ್ರಪತಿ ಚುನಾವಣೆಗೆ ಮಾತ್ರ. ಕಾಂಗ್ರೆಸ್ ಮುಖಂಡರ ಇಂತಹ ಹೇಳಿಕೆಯಿಂದಾಗಿ ಮೈತ್ರಿ ಹೆಚ್ಚುದಿನ ಉಳಿಯಲು ಸಾಧ್ಯವೇ ಎಂದು ತ್ಯಾಗಿ ಹೇಳುವ ಮೂಲಕ, ಆರ್ಜೆಡಿ ಮತ್ತು ಕಾಂಗ್ರೆಸ್ಸಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಅಸೆಂಬ್ಲಿಯಲ್ಲಿ ಬಲಾಬಲ
ಸದ್ಯ ಮಹಾಮೈತ್ರಿಕೂಟದ ಬಲಾಬಲ ಇಂತಿದೆ. ಜೆಡಿಯು - 71, ಆರ್ಜೆಡಿ - 80, ಕಾಂಗ್ರೆಸ್ - 27. ಎನ್ಡಿಎ ಮೈತ್ರಿಕೂಟ ಒಟ್ಟು 58 ಶಾಸಕರನ್ನು ಹೊಂದಿದೆ. ಬಹುಮತ ಸಾಬೀತು ಮಾಡಲು 124 ಸದಸ್ಯ್ರನ್ನು ಹೊಂದಿರಬೇಕು.












Click it and Unblock the Notifications