ಶ್ರದ್ಧಾ ಕೊಲೆ ಪ್ರಕರಣ: 'ಮಹಾ' ಪೊಲೀಸರ ವಿರುದ್ಧ ವಿಕಾಸ್ ವಾಕರ್ ಗಂಭೀರ ಆರೋಪ
ದೆಹಲಿ ಡಿಸೆಂಬರ್ 9: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಶ್ರದ್ಧಾ ತಂದೆ ವಿಕಾಸ್ ವಾಕರ್ ಮಾದ್ಯಮದ ಮುಂದೆ ಬಂದು ಬಹಿರಂಗವಾಗಿ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಇದರೊಂದಿಗೆ ಮುಂಬೈ ಪೊಲೀಸರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ.
ಈ ವರ್ಷ ಮೇನಲ್ಲಿ ದೆಹಲಿಯಲ್ಲಿ ಶ್ರದ್ಧಾ ವಾಕರ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಲಾಯಿತು. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಅಫ್ತಾಬ್ ಪೂನಾವಾಲಾ ಜೈಲಿನೊಳಗೆ ಇದ್ದಾನೆ. ಈ ನಿರ್ದಯ ಕೊಲೆ ಪ್ರಕರಣ ಅಕ್ಟೋಬರ್‌ನಲ್ಲಿ ಬಹಿರಂಗಗೊಂಡಿದೆ. ಪೊಲೀಸರ ವಿಚಾರಣೆಯಲ್ಲಿ ಆರೋಪಿ ಅಫ್ತಾಬ್ ಹಲವಾರು ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ.
ಶುಕ್ರವಾರ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾನನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೆಹಲಿಯ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಫ್ತಾಬ್ ಪೂನಾವಾಲಾ ಜೈಲುವಾಸವನ್ನು 14 ದಿನಗಳವರೆಗೆ ವಿಸ್ತರಿಸಲಾಗಿದೆ.

ಮುಂಬೈನಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರದ್ಧಾ ವಾಕರ್ ತಂದೆ ವಿಕಾಸ್ ವಾಕರ್, ನನ್ನ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರ ಪೊಲೀಸರಿಂದಾಗಿ ನಾನು ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ. ಅವರು ನನಗೆ ಸಹಾಯ ಮಾಡಿದ್ದರೆ, ನನ್ನ ಮಗಳು ಬದುಕುತ್ತಿದ್ದಳು ಎಂದು ಹೇಳಿದ್ದಾರೆ.
ಇದರೊಂದಿಗೆ ದೆಹಲಿ ಪೊಲೀಸರು ನಮಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ನಮಗೆ ಇದೇ ಭರವಸೆ ನೀಡಿದ್ದಾರೆ ಎಂದರು. ಜೊತೆಗೆ ನನ್ನ ಮಗಳನ್ನು ಅಫ್ತಾಬ್ ಪೂನವಾಲಾ ಕೊಂದ ಕ್ರೂರತನಕ್ಕೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿಕಾಸ್ ವಾಕರ್ ಹೇಳಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ಅಫ್ತಾಬ್ ಅವರ ಕುಟುಂಬ ಸದಸ್ಯರು, ಸಂಬಂಧಿಕರು ಸೇರಿದಂತೆ ಎಲ್ಲರ ವಿರುದ್ಧ ತನಿಖೆ ನಡೆಸಬೇಕು ಎಂದು ವಿಕಾಸ್ ಒತ್ತಾಯಿಸಿದರು. ಶ್ರದ್ಧಾ ಅವರ ಸಾವಿನಿಂದ ನಮ್ಮ ಇಡೀ ಕುಟುಂಬವೇ ಒಡೆದು ಹೋಗಿದೆ ಎಂದು ತಂದೆ ವಿಕಾಸ್ ವಾಕರ್ ಹೇಳಿದ್ದಾರೆ. ನನ್ನ ಮಗಳ ಕೊಲೆಯಿಂದ ನನ್ನ ಮನಸ್ಥಿತಿಯೂ ತುಂಬಾ ಹದಗೆಟ್ಟಿದೆ.
28 ವರ್ಷದ ಅಫ್ತಾಬ್ ತನ್ನ ಗೆಳತಿ ಶ್ರದ್ಧಾ ವಾಕರ್ ಅವರನ್ನು ಮೇ ತಿಂಗಳಲ್ಲಿ ದೆಹಲಿಯ ಮೆಹ್ರೌಲಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಅವರು ಶ್ರದ್ಧಾವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ 18 ದಿನಗಳ ಕಾಲ ಎಸೆದಿದ್ದನು. ಈ ಪ್ರಕರಣದ ತನಿಖೆ ನಡೆಯುತ್ತಿದೆ.












Click it and Unblock the Notifications