Shashi Bahuguna Raturi: 52ನೇ ವಯಸ್ಸಿನಲ್ಲಿ ಪರ್ವತದ ಉಪ್ಪಿನಿಂದಲೇ 5 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಗೃಹಿಣಿ!

ಗೃಹಿಣಿಯರ ಬದುಕು ಅಡುಗೆಮನೆ, ಮನೆ ನಿರ್ವಹಣೆ ಮತ್ತು ಕುಟುಂಬದ ಜವಾಬ್ದಾರಿಗಳಿಗಷ್ಟೇ ಸೀಮಿತ ಎಂಬ ಅಭಿಪ್ರಾಯ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ಆದರೆ, ಇಂತಹ ಎಲ್ಲ ಪೂರ್ವಗ್ರಹಗಳನ್ನು ಮುರಿದು, 52ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ ಮಹಿಳೆಯೊಬ್ಬರ ಕಥೆ ಇದು. ಉತ್ತರಾಖಂಡದ ಶಶಿ ಬಹುಗುಣ ರಾತುರಿ ಅವರು ಕೇವಲ ಉಪ್ಪಿನ ಮೂಲಕವೇ 5 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಸಾಧಕಿ. ಅವರ ಕಥೆ ಮಹಿಳೆಯರ ಉದ್ಯಮಶೀಲತೆಗೆ ಮಾತ್ರವಲ್ಲ, ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉಳಿಸುವ ಪ್ರಯತ್ನಕ್ಕೂ ಮಾದರಿಯಾಗಿದೆ.

Shashi Bahuguna Raturi From Homemaker to Entrepreneur how she Built a Rs 5 Crore Empire

ಅಡುಗೆಮನೆಯಿಂದ ಆರಂಭವಾದ ದೊಡ್ಡ ಕನಸು

ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿ ಪಿಸ್ಯು ಲೂನ್ (Pisyu Loon) ಎಂಬ ಸಾಂಪ್ರದಾಯಿಕ ಉಪ್ಪಿಗೆ ವಿಶೇಷ ಸ್ಥಾನವಿದೆ. ಇದು ಕೇವಲ ಆಹಾರಕ್ಕೆ ರುಚಿ ನೀಡುವ ಉಪ್ಪಲ್ಲ. ಪರ್ವತ ಪ್ರದೇಶದ ಜನರ ಜೀವನಶೈಲಿ, ಆಹಾರ ಸಂಸ್ಕೃತಿ ಮತ್ತು ತಲೆಮಾರುಗಳಿಂದ ಬಂದ ಜ್ಞಾನವನ್ನು ತನ್ನೊಳಗೆ ಹೊಂದಿರುವ ವಿಶಿಷ್ಟ ಪದಾರ್ಥ.

ಕಲ್ಲುಪ್ಪು, ಖಾರವಾದ ಮೆಣಸಿನಕಾಯಿ ಹಾಗೂ ಸ್ಥಳೀಯ ಸುಗಂಧಭರಿತ ಗಿಡಮೂಲಿಕೆಗಳನ್ನು ಸೇರಿಸಿ ಸಾಂಪ್ರದಾಯಿಕ ಸಿಲ್ ಬಟ್ಟಾ (ಸಿಲಬಟ್ಟೆ) ಮೇಲೆ ರುಬ್ಬಿ ಈ ಉಪ್ಪನ್ನು ತಯಾರಿಸಲಾಗುತ್ತದೆ. ಉತ್ತರಾಖಂಡದ ಮನೆಗಳಲ್ಲಿ ಮಹಿಳೆಯರು ತಮ್ಮ ಕೈಗಳಿಂದಲೇ ಇದನ್ನು ತಯಾರಿಸುತ್ತಿದ್ದರು.

ಬಿಸಿ ಅನ್ನ, ರೊಟ್ಟಿ ಅಥವಾ ಸರಳವಾದ ಊಟದ ಜೊತೆ ಸ್ವಲ್ಪ ಪಿಸ್ಯು ಲೂನ್ ಇದ್ದರೆ ಸಾಕು, ಆಹಾರದ ರುಚಿಯೇ ಬದಲಾಗುತ್ತದೆ. ಇದರ ಖಾರ, ಘಮ ಮತ್ತು ಮಣ್ಣಿನ ಸೊಗಡಿನಂತಹ ವಿಶಿಷ್ಟ ರುಚಿ ಅನೇಕ ಪರ್ವತ ಪ್ರದೇಶದ ಜನರಿಗೆ ಬಾಲ್ಯದ ನೆನಪುಗಳನ್ನು ತರುತ್ತದೆ.

ಆದರೆ, ಮಾರುಕಟ್ಟೆಯಲ್ಲಿ ಪ್ಯಾಕೆಟ್ ಆಹಾರಗಳು ಮತ್ತು ಕಾರ್ಖಾನೆಗಳಲ್ಲಿ ತಯಾರಾಗುವ ಉತ್ಪನ್ನಗಳ ಪ್ರಭಾವ ಹೆಚ್ಚಾದಂತೆ, ಇಂತಹ ಸಾಂಪ್ರದಾಯಿಕ ಆಹಾರಗಳು ನಿಧಾನವಾಗಿ ತಮ್ಮ ಸ್ಥಾನವನ್ನು ಕಳೆದುಕೊಳ್ಳತೊಡಗಿದವು. ಶಶಿ ಬಹುಗುಣ ರಾತುರಿ ಅವರಿಗೆ ಈ ಬದಲಾವಣೆ ಬೇಸರ ತಂದಿತು. ತಮ್ಮ ಬಾಲ್ಯದಿಂದಲೂ ಸವಿದಿದ್ದ ಈ ವಿಶಿಷ್ಟ ಉಪ್ಪು ಕೇವಲ ಕೆಲವು ಮನೆಗಳ ಅಡುಗೆಮನೆಗಳಿಗೆ ಸೀಮಿತವಾಗಬಾರದು ಎಂದು ಅವರು ನಿರ್ಧರಿಸಿದರು. "ನಾನು ಚಿಕ್ಕವಳಿದ್ದಾದ ಸವಿದ ಆ ರುಚಿಯನ್ನು ಇಡೀ ದೇಶವೇ ಸವಿಯಬೇಕು" ಎಂಬುದು ಅವರ ಕನಸಾಯಿತು.

52ನೇ ವಯಸ್ಸಿನಲ್ಲಿ 1,000 ರೂ. ಬಂಡವಾಳದೊಂದಿಗೆ ಉದ್ಯಮ ಆರಂಭ

ಸಾಮಾನ್ಯವಾಗಿ 50 ವರ್ಷ ದಾಟಿದ ನಂತರ ಅನೇಕರು ಹೊಸ ಉದ್ಯಮ ಆರಂಭಿಸುವ ಬದಲು ವಿಶ್ರಾಂತಿಯ ಬಗ್ಗೆ ಯೋಚಿಸುತ್ತಾರೆ. ಆದರೆ ಶಶಿ ಅವರ ಪಾಲಿಗೆ 52ನೇ ವಯಸ್ಸು ಹೊಸ ಬದುಕಿನ ಆರಂಭವಾಗಿತ್ತು.ಕೈಯಲ್ಲಿದ್ದದ್ದು ಕೇವಲ ₹1,000. ಜೊತೆಗೆ ಒಬ್ಬ ಸಹಾಯಕಿ, ಕೆಲವು ಕಾಗದದ ಪ್ಯಾಕೆಟ್‌ಗಳು ಮತ್ತು ಮಗನಿಂದ ದೊರೆತ ಸಾಮಾಜಿಕ ಮಾಧ್ಯಮದ ಬೆಂಬಲ. ಇಷ್ಟೇ ಅವರ ಉದ್ಯಮದ ಆರಂಭಿಕ ಬಂಡವಾಳ.

ಅವರು ಆರಂಭಿಸಿದ ಉದ್ಯಮದ ಹೆಸರು 'ನಮಕವಾಲಿ' (Namakwali). ಒಂದು ಸಾಂಪ್ರದಾಯಿಕ ಉಪ್ಪನ್ನು ಮಾರಾಟ ಮಾಡುವುದರಿಂದ ದೊಡ್ಡ ಉದ್ಯಮ ಕಟ್ಟಲು ಸಾಧ್ಯವೇ ಎಂಬ ಪ್ರಶ್ನೆಗಳು ಅವರ ಮುಂದೆ ಬಂದವು. "ಒಬ್ಬ ಗೃಹಿಣಿ ಉದ್ಯಮವನ್ನು ಹೇಗೆ ನಡೆಸಬಲ್ಲರು?" ಎಂಬ ಅನುಮಾನಗಳೂ ವ್ಯಕ್ತವಾದವು.

ಆದರೆ ಶಶಿ ಅವರಿಗೆ ತಮ್ಮ ಉತ್ಪನ್ನದ ಮೇಲೆ ಅಪಾರ ನಂಬಿಕೆಯಿತ್ತು. ಇದು ಕೇವಲ ಉಪ್ಪಲ್ಲ, ತಲೆಮಾರುಗಳಿಂದ ಬಂದ ಆಹಾರ ಸಂಸ್ಕೃತಿ ಮತ್ತು ಮಹಿಳೆಯರ ಅನುಭವದ ಪ್ರತೀಕ ಎಂಬುದನ್ನು ಅವರು ಅರಿತಿದ್ದರು.

ಗುಣಮಟ್ಟಕ್ಕಾಗಿ 15 ಕಿ.ಮೀ. ನಡೆಯುತ್ತಿದ್ದ Shashi Bahuguna Raturi

ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಸಂಗ್ರಹಿಸುವುದಕ್ಕಾಗಿ ಶಶಿ ಅವರು ಸುಮಾರು 15 ಕಿಲೋಮೀಟರ್‌ಗಳವರೆಗೆ ನಡೆದು ಹೋಗುತ್ತಿದ್ದರು. ಉಪ್ಪು ತಯಾರಿಕೆಗೆ ಬೇಕಾದ ಮೆಣಸಿನಕಾಯಿ, ಸ್ಥಳೀಯ ಗಿಡಮೂಲಿಕೆಗಳು ಮತ್ತು ಇತರ ಪದಾರ್ಥಗಳನ್ನು ಆಯ್ಕೆ ಮಾಡುವಾಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು.

ಸ್ಥಳೀಯ ಮಹಿಳೆಯರನ್ನು ತಮ್ಮ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಆರಂಭದಲ್ಲಿ ಹೊಸ ಉದ್ಯಮದ ಬಗ್ಗೆ ಮಹಿಳೆಯರಲ್ಲಿ ಸಹಜವಾಗಿಯೇ ಕೆಲವು ಅನುಮಾನಗಳಿದ್ದವು. ಆದರೆ ಶಶಿ ಅವರ ಪ್ರಯತ್ನ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸ ಕ್ರಮೇಣ ಅವರಲ್ಲಿ ನಂಬಿಕೆ ಮೂಡಿಸಿತು. ಒಬ್ಬೊಬ್ಬರಾಗಿ ಮಹಿಳೆಯರು ಈ ಉದ್ಯಮದ ಭಾಗವಾದರು.

ಶಶಿ ಅವರ ಮಗ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪನ್ನದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡಿದರು. ಇನ್‌ಸ್ಟಾಗ್ರಾಮ್ ಮೂಲಕ ನಮಕವಾಲಿ ಜನರ ಗಮನ ಸೆಳೆಯತೊಡಗಿತು. ನಂತರ ಮಾಧ್ಯಮಗಳಲ್ಲಿಯೂ ಅವರ ಉದ್ಯಮದ ಬಗ್ಗೆ ಸುದ್ದಿಗಳು ಪ್ರಕಟವಾದವು. ಸ್ವಂತ ವೆಬ್‌ಸೈಟ್ ಆರಂಭಿಸಿದ ಬಳಿಕ ದೇಶದ ವಿವಿಧ ಭಾಗಗಳಿಂದಲೂ ಆರ್ಡರ್‌ಗಳು ಬರಲಾರಂಭಿಸಿದವು. ಹೀಗೆ, ಉತ್ತರಾಖಂಡದ ಪರ್ವತ ಪ್ರದೇಶದ ಒಂದು ಸಾಂಪ್ರದಾಯಿಕ ರುಚಿ ದೇಶದಾದ್ಯಂತ ಗ್ರಾಹಕರನ್ನು ತಲುಪುವಂತಾಯಿತು.

35 ಮಹಿಳೆಯರಿಗೆ ಉದ್ಯೋಗ, 500 ರೈತರಿಗೆ ಬೆಂಬಲ

ಶಶಿ ಅವರ ಉದ್ಯಮದಿಂದ ಅನೇಕ ಕುಟುಂಬಗಳ (family) ಬದುಕಿನಲ್ಲಿಯೂ ಬದಲಾವಣೆ ಉಂಟಾಗಿದೆ. ಇಂದು ನಮಕವಾಲಿ ಉದ್ಯಮದಲ್ಲಿ ಸುಮಾರು 35 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸುಮಾರು 500 ರೈತರಿಗೆ ಈ ಉದ್ಯಮದಿಂದ ಬೆಂಬಲ ದೊರೆಯುತ್ತಿದೆ. ಸ್ಥಳೀಯ ರೈತರಿಂದ ಪದಾರ್ಥಗಳನ್ನು ಖರೀದಿಸುವ ಮೂಲಕ ಅವರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುತ್ತಿದೆ. ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಆರ್ಥಿಕ ಸ್ವಾವಲಂಬನೆಗೂ ದಾರಿ ಮಾಡಿಕೊಡಲಾಗಿದೆ.

ಇಷ್ಟೇ ಅಲ್ಲ, ಪರಿಸರ (environment) ಸಂರಕ್ಷಣೆಯನ್ನೂ ತಮ್ಮ ಉದ್ಯಮದ ಭಾಗವಾಗಿಸಿಕೊಂಡಿದ್ದಾರೆ. ಪ್ರತಿ ಆರ್ಡರ್‌ಗೆ ಒಂದು ಮರ ನೆಡುವ ಪ್ರಯತ್ನದ ಮೂಲಕ ಉದ್ಯಮದ ಬೆಳವಣಿಗೆಯ ಜೊತೆಗೆ ಪ್ರಕೃತಿಯ ಸಂರಕ್ಷಣೆಯನ್ನೂ ಉತ್ತೇಜಿಸುತ್ತಿದ್ದಾರೆ. ಒಂದು ಸಣ್ಣ ಅಡುಗೆಮನೆಯಿಂದ ಆರಂಭವಾದ ಪ್ರಯತ್ನ ಇಂದು ಮಹಿಳೆಯರು, ರೈತರು ಮತ್ತು ಸ್ಥಳೀಯ ಸಮುದಾಯವನ್ನು ಒಳಗೊಂಡ ಉದ್ಯಮವಾಗಿ ಬೆಳೆದಿದೆ.

₹1,000 ಬಂಡವಾಳದಿಂದ ₹5 ಕೋಟಿ ವಹಿವಾಟು!

ಶಶಿ ಬಹುಗುಣ ರಾತುರಿ ಅವರ ಉದ್ಯಮದ ಯಶಸ್ಸಿನ ಅಂಕಿಅಂಶಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಕೇವಲ ₹1,000 ಬಂಡವಾಳದೊಂದಿಗೆ ಆರಂಭವಾದ ನಮಕವಾಲಿ ಇಂದು ₹5 ಕೋಟಿ ವಹಿವಾಟಿನ ಮಟ್ಟಕ್ಕೆ ಬೆಳೆದಿದೆ. 52ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಿದ ಶಶಿ ಅವರು ಇಂದು ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಕನಸು ಕಾಣಲು ವಯಸ್ಸಿನ ಮಿತಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+