ಶರದ್ ಪವಾರ್ ವಾಪಸ್ ಓಕೆ, ಅಜಿತ್ ಕಾಣ್ತಿಲ್ಲ ಯಾಕೆ?
ಮುಂಬೈ: ಶರದ್ ಪವಾರ್ ಎನ್‌ಸಿಪಿ ಅಧ್ಯಕ್ಷ ಪಟ್ಟಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಆದರೂ NCP ಗೊಂದಲಕ್ಕೆ ತೆರೆಬಿದ್ದಿಲ್ಲ. ಯಾಕಂದ್ರೆ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಶರದ್ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ನಂತರ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಶರದ್ ಪವಾರ್ ನಡೆಸಿರುವ ಈ ಸುದ್ದಿಗೋಷ್ಠಿಯಲ್ಲಿ ಅಜಿತ್ ಪವಾರ್ ಕಾಣೆಯಾಗಿ ಕುತೂಹಲ ಹೆಚ್ಚಿಸಿದ್ದಾರೆ.
ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿದ್ದಾರೆ ಮುಂದಿನ ಮಹಾರಾಷ್ಟ್ರ ಸಿಎಂ ಅವರೇ ಎಂಬ ಊಹಾಪೋಹ ಓಡಾಡುತ್ತಲೇ ಇದೆ. ಕೆಲವು ದಿನಗಳ ಹಿಂದೆ ಈ ವದಂತಿ ದೊಡ್ಡದಾಗಿ, ಎನ್‌ಸಿಪಿ ಪಕ್ಷದಲ್ಲಿ ದೊಡ್ಡ ಕಿಚ್ಚು ಹೊತ್ತಿಕೊಂಡಿತ್ತು. ಆದರೆ ನಂತರ ಅದನ್ನ ಸ್ವತಃ ಅಜಿತ್ ಪವಾರ್ ಸಮಾಧಾನ ಮಾಡಿ ಸ್ಪಷ್ಟನೆ ನೀಡಿದ್ದರು. ಈಗ ನೋಡಿದರೆ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಜಿತ್ ಎನ್‌ಸಿಪಿ ನಾಯಕರ ಜೊತೆ ಭಾರಿ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ಶರದ್ ಪವಾರ್ ಹೇಳಿದ್ದೇನು?
ತಮ್ಮ ರಾಜೀನಾಮೆ ಪತ್ರ ಹಿಂಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಮೇಲೆ ನಾವು ಗಮನ ಇಟ್ಟಿದ್ದೇವೆ ಎಂದು ತಿಳಿಸಿದ್ದರು. ಅಲ್ಲದೆ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮುಂದುವರಿಯಲಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದರು. ಇದರ ಜೊತೆ ನಿಮ್ಮ ಸುದ್ದಿಗೋಷ್ಠಿಗೆ ಅಜಿತ್ ಪವಾರ್ ಬಂದಿಲ್ಲ ಏಕೆ? ಎಂಬ ಪ್ರಶ್ನೆಗೆ ಶರದ್ ಉತ್ತರ ನೀಡಿದ್ದಾರೆ. ಆ ಮಾಹಿತಿಯನ್ನ ಮುಂದೆ ಓದೋಣ.
ಅಜಿತ್ ಹೆಸರು ಕೆಡಿಸುತ್ತಿದ್ದಾರೆ!
ಅಜಿತ್ ಪವಾರ್ ಸುದ್ದಿಗೋಷ್ಠಿಗೆ ಬಾರದೆ ಇರುವ ಬಗ್ಗೆ ಉತ್ತರ ನೀಡಿದ ಶರದ್ ಪವಾರ್, ಅಜಿತ್ ಸಾಮಾನ್ಯವಾಗಿ ಪಕ್ಷದ ಮುಖಂಡರು ಮತ್ತು ಜನರ ಜೊತೆ ಇರುತ್ತಾರೆ. ಸುಖಾಸುಮ್ಮನೆ ಅಜಿತ್ ಹೆಸರು ಕೆಡಿಸಲಾಗುತ್ತಿದೆ ಎಂದು ಗರಂ ಆದರು ಎನ್‌ಸಿಪಿ ಮುಖ್ಯಸ್ಥ. ಮತ್ತೊಂದು ಕಡೆ ನಾನು ಪಕ್ಷದ ಮುಖ್ಯಸ್ಥ ಸ್ಥಾನ ತ್ಯಜಿಸಿ, ಉತ್ತರಾಧಿಕಾರಿ ನೇಮಕ ಮಾಡುವ ಸುಳಿವು ಅಜಿತ್‌ಗೆ ಮಾತ್ರ ಇತ್ತು ಎಂಬುದನ್ನೂ ಶರದ್ ಪವಾರ್ ತಿಳಿಸಿದ್ದಾರೆ. ಈ ಮೂಲಕ ಎನ್‌ಸಿಪಿಯ ಗೇಮ್ ಪ್ಲ್ಯಾನ್ ಬಗ್ಗೆ ಭಾರಿ ಕುತೂಹಲ ಮೂಡಿದೆ.

ದಿಢೀರ್ ರಾಜೀನಾಮೆ ವಾಪಸ್!
ಅಷ್ಟಕ್ಕೂ 2024ರ ಲೋಕಸಭಾ ಚುನಾವಣೆಗೆ ಮುನ್ನ ವಿಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸುವ ಚರ್ಚೆ ನಡೆಯುತ್ತಿದೆ. ಅತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿಪಕ್ಷಗಳ ಸಂಘಟನೆ ಕಾರ್ಯ ಭರದಿಂದ ಸಾಗಿದೆ. ಕಾಂಗ್ರೆಸ್ ನಾಯಕರು ಶರದ್ ಪವಾರ್ ಜೊತೆ ಚುನಾವಣಾ ಪೂರ್ವ ಮೈತ್ರಿಗೂ ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಈ ನಡುವೆ ಶರದ್ ಪವಾರ್ ದಿಢೀರ್ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಚಲನ ಸೃಷ್ಟಿಸಿದ್ದರು. ಆದರೆ ಈಗ ರಾಜೀನಾಮೆ ವಾಪಸ್ ಪಡೆದಿದ್ದಾರೆ.
ಶರದ್ & ರಾಹುಲ್ ಗಾಂಧಿ ಭೇಟಿ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಧ್ಯೆ ಕೆಲದಿನಗಳ ಹಿಂದೆ ವಿಪಕ್ಷಗಳ ಒಗ್ಗಟ್ಟಿನ ವಿಚಾರವಾಗಿ ಗಂಭೀರ ಚರ್ಚೆ ನಡೆದಿತ್ತು. ಸಂಸತ್ ಚುನಾವಣೆ ವೇಳೆ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯುವ ಸಲುವಾಗಿ ಎನ್‌ಸಿಪಿ ವರಿಷ್ಠ ಪವಾರ್ ಭೇಟಿ ನೀಡಿ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಸಮಾನ ಮನಸ್ಕ ಪಕ್ಷಗಳು ಒಗ್ಗೂಡಬೇಕೆಂಬ ವಿಷಯ ಮೊದಲಿನಿಂದ ಚರ್ಚೆಯಲ್ಲಿ ಇತ್ತು. ಈಗಲೂ ಶರದ್ ಪವಾರ್ ಆ ಮಾತನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ಒಟ್ನಲ್ಲಿ ಇದೆಲ್ಲಾ ಏನೇ ಇದ್ದರೂ, ಎನ್‌ಸಿಪಿ ಪಕ್ಷದೊಳಗಿನ ಗೊಂದಲಕ್ಕೆ ಮಾತ್ರ ತೆರೆಬಿದ್ದಿಲ್ಲ. ಎತ್ತು ಏರಿಗೆ, ಕೋಣ ನೀರಿಗೆ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಮುಂದೆ ಅಜಿತ್ ಪವಾರ್ ಎನ್‌ಸಿಪಿ ಪಕ್ಷದೊಳಗೇ ಇರುತ್ತಾರಾ ಅಥವಾ ಎನ್‌ಸಿಪಿ ಬಿಟ್ಟು ಹೊರಬಂದು ಸರ್ಕಾರ ರಚನೆ ಮಾಡುತ್ತಾರಾ ಎಂಬುದನ್ನ ಕಾದು ನೋಡಬೇಕು.












Click it and Unblock the Notifications