50 ಜನ ಬಿಟ್ಟಾಗಲೇ ತಲೆಕೆಡಿಸಿಕೊಂಡಿಲ್ಲ: ಅಜಿತ್ ಪವಾರ್‌ಗೆ ಶರದ್ ಗುದ್ದು!
ಮುಂಬೈ: ಶರದ್ ಪವಾರ್ ಈಗ ತನ್ನ ಸಂಬಂಧಿ ಹಾಗೂ ಆಪ್ತರಾಗಿದ್ದ ಅಜಿತ್ ಪವಾರ್ ವಿರುದ್ಧ ತೊಡೆತಟ್ಟಿದ್ದಾರೆ. ಅಜಿತ್ ಪವಾರ್ ಎನ್‌ಸಿಪಿ ಬಿಟ್ಟು ಹೋಗಿರುವುದು ಕೆಲವರಿಗೆ ಹೊಸದಾಗಿರಬಹುತು. ಹೀಗೆ ಪಕ್ಷ ಬಿಟ್ಟು ಹೋಗುವವರನ್ನ ನೋಡುವುದು ನನಗೆ ಹೊಸ ಅಭ್ಯಾಸವೇನಲ್ಲ, 1980ರಲ್ಲಿ 50 ಶಾಸಕರು ಬಿಟ್ಟು ಹೋದಾಗಲೇ ನಾನು ಹೆದರಿಕೊಂಡಿಲ್ಲ ಇನ್ನು ಈಗ ತಲೆಕೆಡಿಸಿಕೊಳ್ತೀನಾ? ಎಂದಿದ್ದಾರೆ ಶರದ್ ಪವಾರ್.
ಕಳೆದ ಕೆಲ ತಿಂಗಳಿಂದ ಶರದ್ ಪವಾರ್ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಇಂದು ಸ್ಫೋಟವಾಗಿದೆ. ದಿಢೀರ್ ಅಜಿತ್ ಪವಾರ್ ಬಿಜೆಪಿ ಮತ್ತು ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಹಾಗೇ ಡಿಸಿಎಂ ಆಗಿ ಪ್ರಮಾಣ ವಚನ ಕೂಡ ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಶರದ್ ಪವಾರ್ ತೊಡೆತಟ್ಟಿ ನಿಂತಿದ್ದಾರೆ. ಅಲ್ಲದೆ ಇದು ನನಗೇನು ಹೊಸದಲ್ಲ, ಇಂತಹ ಸಾಕಷ್ಟು ಬೆಳವಣಿಗೆ ನೋಡಿದ್ದೇನೆ ಬಿಡಿ ಎಂದು ತಿರುಗೇಟು ನೀಡಿ ಸವಾಲು ಎಸೆದಿದ್ದಾರೆ. ಅಲ್ಲದೆ 1980ರಲ್ಲಿ ನಡೆದಿದ್ದ ಘಟನೆಯನ್ನ ಉದಾಹರಣೆಯಾಗಿ ನೀಡಿ, ಅಜಿತ್ ಪವಾರ್ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮತ್ತೊಂದು ಸ್ಫೋಟಕ ಆರೋಪವನ್ನೂ ಶರದ್ ಪವಾರ್ ಅವರು ಮಾಡಿದ್ದಾರೆ!

'ಇಡಿ' ಅಟ್ಯಾಕ್ ಭಯ ಕಾಡಿತ್ತಾ?
ಅಜಿತ್ ಪವಾರ್ ಎನ್‌ಸಿಪಿ ಬಿಟ್ಟ ಬಗ್ಗೆ ಗರಂ ಆಗಿರುವ ಶರದ್ ಪವಾರ್, ಅಜಿತ್ ಪವಾರ್ ಹೀಗೇಕೆ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆದ್ರೆ ಇಂತಹ ಬೆಳವಣಿಗೆ ನನಗೆ ಹೊಸದಲ್ಲ. ಎಲ್ಲವನ್ನೂ ನಿಭಾಯಿಸಿ ಪಕ್ಷ ಮುನ್ನೆಡೆಸಿದ್ದೇನೆ. ಪ್ರಧಾನಿ ಇತ್ತೀಚೆಗೆ ಎನ್‌ಸಿಪಿ ಅನೇಕ ಹಗರಣ ಮಾಡಿದೆ ಎಂದು ಆರೋಪ ಮಾಡಿದ್ದರು. ಈ ಮಧ್ಯೆ ನಮ್ಮ ಪಕ್ಷದವರೇ ಈಗ ಅವರ ಜೊತೆ ಸೇರಿದ್ದು, ಪಿಎಂ ಮೋದಿ ಆರೋಪಗಳು ಸುಳ್ಳು ಎಂಬುದು ಸಾಬೀತಾಗಿದೆ. ಜುಲೈ 6ಕ್ಕೆ ಪಕ್ಷದ ಸಭೆ ಕೂಡ ನಾನು ಕರೆಯಲಿದ್ದೇನೆ ಎಂದಿದ್ದಾರೆ ಶರದ್ ಪವಾರ್. ಹಾಗೇ ಇದರ ಜೊತೆಗೆ ನಮ್ಮ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
53 ಶಾಸಕರಲ್ಲಿ 40 ಶಾಸಕರು ಎಸ್ಕೇಪ್?
ಹೌದು, ಬರೋಬ್ಬರಿ 40 ಶಾಸಕರು ದಿಢೀರ್ ಎನ್‌ಸಿಪಿ ಪಕ್ಷಕ್ಕೆ ಗುಡ್‌ಬೈ ಹೇಳುತ್ತಿದ್ದಾರಂತೆ. ಈ ಲೆಕ್ಕಾಚಾರ ಹೇಳಿರುವುದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರು. ಮಹಾರಾಷ್ಟ್ರದ ಎನ್‌ಸಿಪಿ ಪಕ್ಷದ 40 ಶಾಸಕರು ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆಂದು ಈಗ ಮಹಾರಾಷ್ಟ್ರದ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಹೇಳಿದ್ದಾರೆ. ಅಂದಹಾಗೆ ಅಜಿತ್ ಜೊತೆ ಶರದ್ ಪವಾರ್ ಬಣದ 8 ಶಾಸಕರು ಶಿವಸೇನಾ & ಬಿಜೆಪಿ ನೇತೃತ್ವದ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣ ಸ್ವೀಕಾರ ವೇಳೆ ಡಿಸಿಎಂ ದೇವೇಂದ್ರ ಫಡ್ನವೀಸ್ ರಾಜಭವನದಲ್ಲಿ ಉಪಸ್ಥಿತರಿದ್ದರು. ಈ ನಡುವೆ 53 ಎನ್‌ಸಿಪಿ ಶಾಸಕರಲ್ಲಿ 40 ಶಾಸಕರು ದಿಢೀರ್ ಪಕ್ಷಬಿಟ್ಟು ಎಸ್ಕೇಪ್ ಆಗುತ್ತಿರುವ ವಿಚಾರ ಸಂಚಲನ ಸೃಷ್ಟಿಸಿದೆ.

'ಶಾಸಕರನ್ನ ಖರೀದಿಸುವ ಕಾರ್ಯ ಜೋರು'
ಇಷ್ಟೆಲ್ಲಾ ಘಟನೆ ಬಗ್ಗೆ ವಿವಿಧ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಪಿಡಿಪಿ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ, ಬಿಜೆಪಿ ಈಗ ಶಾಸಕರನ್ನು ಖರೀದಿಸುವ ಕಾರ್ಯದಲ್ಲಿ ಎಗ್ಗಿಲ್ಲದೇ ತೊಡಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಜನರ ತೀರ್ಪನ್ನ ಅಗೌರವಿಸಲು ಬಿಜೆಪಿ ಮತ್ತೆ ಮತ್ತೆ ಮಾಡುತ್ತಿರುವ ಪ್ರಯತ್ನ ಬಣ್ಣಿಸಲು ಆಗಲ್ಲ. ಅಲ್ಲಿ ಪ್ರಜಾಪ್ರಭುತ್ವ ಹತ್ತಿಕ್ಕಲಾಗ್ತಿದೆ. ಬಿಜೆಪಿ ಒಂದು ಕೈಯಲ್ಲಿ ರಾಜಕೀಯ ವಿರೋಧಿಗಳನ್ನ ಹಿಡಿದಿಟ್ಟುಕೊಳ್ಳಲು ಯತ್ನಿಸಿ, ಇನ್ನೊಂದೆಡೆ ಶಾಸಕರನ್ನು ಖರೀದಿಸುವ ಕಾರ್ಯದಲ್ಲಿ ನಿರತವಾಗಿದೆ. ಬಿಜೆಪಿ ಅಧಿಕಾರ ದಾಹ ಇಂಗಿಸಲು ಜನರ ಹಣ ಬಳಕೆಯಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೀಗೆ ದೇಶಾದ್ಯಂತ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕಿಚ್ಚು ಹಚ್ಚಿದೆ.












Click it and Unblock the Notifications