ನಟ ದಿಲೀಪ್ ಮೇಲೆ ತಿರುಗಿ ಬಿದ್ದ ಲೈಂಗಿಕ ಕಿರುಕುಳಕ್ಕೊಳಗಾದ ಸ್ಟಾರ್ ನಟಿ
ತಿರುವನಂತಪುರಂ, ಜೂನ್ 28: ಮಲಯಾಳಂ ಭಾಷೆಯ ಜನಪ್ರಿಯ ನಟ ದಿಲೀಪ್ ವಿರುದ್ದ ಬಹುಭಾಷಾ ಸ್ಟಾರ್ ನಟಿ ತಿರುಗಿ ಬಿದ್ದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಅಪಹರಣಕ್ಕೊಳಗಾಗಿ, ಈಕೆ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದರು.
ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುತ್ತಿರುವ ಜನಪ್ರಿಯ ಸಿನಿಮಾ ನಟ ದಿಲೀಪ್ ಗೆ ಎಚ್ಚರಿಕೆ ನೀಡಿದ್ದಾರೆ. 'ನಿಮ್ಮ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ,' ಎಂದು ಆಕೆ ಬೆದರಿಕೆ ಹಾಕಿದ್ದಾರೆ.
ಫೆಬ್ರವರಿ 17ರಂದು ಮಲಯಾಳಂ ಮೂಲದ ಸ್ಟಾರ್ ನಟಿ ಅಪಹರಣಕ್ಕೊಳಗಾಗಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದರು. ಆದರೆ ಅಲ್ಲಿಂದ ಘಟನೆ ಬಗ್ಗೆ ಮೌನವಾಗಿದ್ದ ನಟಿ ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ದೌರ್ಜನ್ಯ ನಡೆದ ಬೆನ್ನಿಗೆ ತನ್ನ ಪ್ರಿಯತಮ ಕರ್ನಾಟಕದ ಮೂಲದ ನಿರ್ಮಾಪಕನ ಜತೆ ನಟಿ ನಿಶ್ಚಿತಾರ್ಥವನ್ನೂ ಮುಗಿಸಿದ್ದರು. ಇದೀಗ ಅವರು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ನಟಿ ಹೇಳಿದ್ದೇನು?
ತನ್ನ ಪತ್ರಿಕಾ ಹೇಳಿಕೆಯಲ್ಲಿ, ಮಾಧ್ಯಮಗಳ ಜತೆ ಮಾತನಾಡದಂತೆ ಪೊಲೀಸರು ನಿರ್ಬಂಧಿಸಿದ್ದರು. ಆದರೆ ಇದಿಗ ಮಾಧ್ಯಮಗಳಲ್ಲಿ ಬರುತ್ತಿರುವ ಸಮರೋಪಾದಿ ಸುದ್ದಿಗಳಿಂದ ನಾನು ಮೌನ ಮುರಿಯುತ್ತಿರುವುದಾಗಿ ನಟಿ ಹೇಳಿದ್ದಾರೆ.

ನಾನು ಯಾರ ಹೆಸರನ್ನೂ ಹೇಳಿಲ್ಲ
"ಇದೀಗ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎನ್ನಲಾದ ಹಲವರ ಹೆಸರುಗಳು ಹೊರ ಬರುತ್ತಿವೆ. ನನಗೆ ಗೊತ್ತು ಮಾಧ್ಯಮಗಳ ಮೂಲಕ ಈ ಹೆಸರುಗಳು ನನಗೆ ತಿಳಿಯುತ್ತಿವೆ. ಯಾರನ್ನೇ ಗುರಿಯಾಗಿಸಿ ಶಿಕ್ಷೆ ನೀಡಿ ಅಥವಾ ಕೈ ಬಿಡಿ ಎಂದು ಪೊಲೀಸರಿಗೆ ನಾನು ಹೇಳಿಲ್ಲ. ಸಾಮಾಜಿಕ ಜಾಲತಾಣಲದಲ್ಲಿಯೂ ನಾನು ಯಾರ ಹೆಸರನ್ನೂ ಹೇಳಿಲ್ಲ. ಪ್ರಸ್ತಾಪವಾಗುತ್ತಿರುವ ಹೆಸರುಗಳಲ್ಲಿ ಯಾರದ್ದೇ ಆಗಲಿ ಘಟನೆಯಲ್ಲಿ ಅವರ ಕೈವಾಡ ಇದೆ ಎಂದು ನಿರೂಪಿಸಲು ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲ," ಎಂದು ನಟಿ ಹೇಳಿದ್ದಾರೆ.

ದಿಲೀಪ್ ಮೇಲೆ ಮುಗಿಬಿದ್ದ ನಟಿ
ತನ್ನ ಹೇಳಿಕೆಯಲ್ಲಿ ನಟಿ ದಿಲೀಪ್ ಹೆಸರನ್ನು ಹೇಳಿಲ್ಲವಾದರೂ ಆಕೆ ಅವರನ್ನೇ ಗುರಿಯಾಗಿಸಿ ಹೇಳಿದ್ದು ಎಂಬುದು ಸ್ಪಷ್ಟವಾಗುತ್ತದೆ.
"ನಟರೊಬ್ಬರು ಹೇಳಿಕೆ ನೀಡಿದ್ದು ನನ್ನ ಗಮನಕ್ಕೆ ಬಂದಿದೆ. ಹೇಳಿಕೆಯಲ್ಲಿ ನಟರು ನಾನು ಮತ್ತು ಆರೋಪಿ ಪಲ್ಸರ್ ಸುನಿ ಗೆಳೆಯರು ಎಂದಿದ್ದಾರೆ. ನಾನು ನನ್ನ ಗೆಳೆಯರನ್ನು ತುಂಬಾ ಜಾಗರೂಕತೆಯಿಂದ ಆರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದು ನನ್ನ ಮನಸ್ಸಿಗೆ ಭಾರೀ ನೋವುಂಟು ಮಾಡಿದೆ. ಅನಿವಾರ್ಯವಾದರೆ ನಾನು ಆಧಾರ ರಹಿತ ಸುದ್ದಿಯನ್ನು ಹರಡುತ್ತಿರುವುದಕ್ಕೆ ನಟನ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ಎಲ್ಲಾ ವಿಚಾರಣೆಗಳಿಗೂ ನಾನು ಸಿದ್ದವಾಗಿದ್ದೇನೆ," ಎಂದು ನಟಿ ಹೇಳಿದ್ದಾರೆ.

ದಿಲೀಪ್ ವಿವಾದಿತ ಹೇಳಿಕೆ
ಸೋಮವಾರವಷ್ಟೇ ಪ್ರಕರಣದಲ್ಲಿ ಕೈವಾಡ ಇರುವುದಾಗಿ ಹೇಳಲಾಗುತ್ತಿರುವ ಸ್ಟಾರ್ ನಟ ದಿಲೀಪ್ ಮಲಯಾಳಂನ ರಿಪೋರ್ಟರ್ ಟಿವಿಯ ಚರ್ಚೆಯೊಂದರಲ್ಲಿ ಭಾಗವಹಿಸಿ ನಟಿಯವ ವಿರುದ್ಧ ಹೇಳಿಕೆ ನೀಡಿದ್ದರು. ತಾನು ಮುಗ್ಧ ಎಂಬುದಾಗಿ ಬಿಂಬಿಸಿಕೊಂಡ ದಿಲೀಪ್ "ನಟಿ ಮತ್ತು ಪ್ರಮುಖ ಆರೋಪಿ ಪಲ್ಸರ್ ಸುನಿ ಗೆಳೆಯರಾಗಿದ್ದರು. ಅವರಿಬ್ಬರು ಜತೆಯಾಗಿ ಗೋವಾಕ್ಕೂ ಹೋಗಿದ್ದರು." ಎಂದು ಹೇಳಿದ್ದರು.
"ನಾವು ನಮ್ಮ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದಿರಬೇಡವಾ? ನಾನಂತೂ ಹಾಗೆ ಮಾಡುತ್ತೇನೆ," ಎಂದೂ ದಿಲೀಪ್ ಹೇಳಿದ್ದರು.

ತನಿಖೆ ಮೇಲೆ ನಂಬಿಕೆ ಇದೆ
ಆದರೆ ಗಾಳಿ ಸುದ್ದಿಗಳನ್ನು ತಳ್ಳಿ ಹಾಕಿರುವ ನಟಿ, ತನಿಖೆ ನಡೆಯುತ್ತಿದೆ. ನಾನು ಪೊಲೀಸರ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ನಟಿ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಮೌನವಾಗಿದ್ದರೂ ಅವರ ಸಹವರ್ತಿಗಳು ಮತ್ತು ಅಭಿಮಾನಿಗಳು ನಟಿ ತೆಗೆದುಕೊಂಡ ದಿಟ್ಟನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲಿಸಿದ್ದಾರೆ.

ಪಲ್ಸರ್ ಸುನಿ ಬಾಯ್ಬಿಟ್ಟ ಸತ್ಯ
ಕರ್ನಾಟಕ ಉದ್ಯಮಿಯನ್ನು ಮದುವೆಯಾಗುತ್ತಿರುವ ಮಲಯಾಳಂ ನಟಿಯನ್ನು ಅಪಹರಿಸಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣದ ರೂವಾರಿ ಪಲ್ಸರ್ ಸುನಿ ಚಿತ್ರರಂಗದ ಹಲವು ಘಟಾನುಘಟಿಗಳ ಹೆಸರನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಇದರಲ್ಲಿ 'ಮೆಗಾಸ್ಟಾರ್' ತನ್ನನ್ನು ಬಾಡಿಗೆ ಪಡೆದು ಚಿತ್ರನಟಿಯನ್ನು ಅಪಹರಿಸಿ, ಆಕೆಯ ಮೇಲೆ ದೌರ್ಜನ್ಯವೆಸಗುವಂತೆ ಕುಮ್ಮಕ್ಕು ನೀಡಿದ್ದ ಎಂದು ಒಪ್ಪಿಕೊಂಡಿದ್ದಾನಂತೆ.

ಬೆದರಿಕೆ ಪ್ರಕರಣ ದಾಖಲಿಸಿದ್ದ ದಿಲೀಪ್ ಆಪ್ತ
ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಮುಖ ಆರೋಪಿ ಪಲ್ಸರ್ ಸುನಿಯ ಸಹಚರನಿಂದ ನಟ ದಿಲೀಪ್ ಗೆ ಬೆದರಿಕೆ ಕರೆ ಬಂದಿತ್ತು. ಸದ್ಯ ಜೈಲಿನಲ್ಲಿರುವ ಪಲ್ಸರ್ ಸುನಿಯ ಆಪ್ತ ವಿಷ್ಣು ಎಂಬಾತ ಬೆದರಿಕೆ ಕರೆ ಮಾಡಿದ್ದ. ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಹೇಳಬಾರದು ಎಂದಾದರೆ 1.5 ಕೋಟಿ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಸುದ್ದಿಯಾಗಿತ್ತು.
ಈ ಕುರಿತು ನಟ ದಿಲೀಪ್ ಅವರ ಆಪ್ತ, ನಿರ್ದೇಶಕ ನಾದಿರ್ ಶಾ ಆರೋಪಿಸಿದ್ದಲ್ಲದೆ ವಿಷ್ಣು ಜೊತೆಗಿನ ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಆಡಿಯೋ ಸಂಭಾಷಣೆ ಸಮೇತ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ನಟಿ ಅಪಹರಣ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತ್ತು.












Click it and Unblock the Notifications