ತೆಹಲ್ಕಾ ತರುಣ್ ಮಾಡಿದ್ದು ಅತ್ಯಾಚಾರವೇ: ಬಾಧಿತೆ
ನವದೆಹಲಿ, ನ.29- ಲೈಂಗಿಕ ಕಿರುಕುಳ ಪ್ರಕರಣ ಎದುರಿಸುತ್ತಿರುವ ತೆಹಲ್ಕಾ ಪತ್ರಿಕೆಯ ಸಂಸ್ಥಾಪಕ ಸಂಪಾದಕ ತರುಣ್ ತೇಜ್ ಪಾಲ್ ಅತ್ತ ಗೋವಾ ಟ್ರಿಪ್ ಗೆ ಹೊರಡುವ ಕೆಲವೇ ಗಂಟೆಗಳ ಮುನ್ನ ಇತ್ತ ದಿಲ್ಲಿಯಲ್ಲಿ ಬಾಧಿತ ಮಹಿಳಾ ಸಹೋದ್ಯೋಗಿ ಪ್ರಕರಣಕ್ಕೆ ಅಂತಿಮ ಮೊಳೆ ಹೊಡೆದಿದ್ದಾರೆ.
ಯಾವುದೇ ರಾಜಕೀಯ ಲಾಭಕ್ಕಾಗಿ ನಾನು ಆತನ ಮೇಲೆ ಆರೋಪ ಹೊರಿಸಿಲ್ಲ. ಕಾನೂನಿನ ಚೌಕಟ್ಟಿಗೆ ಒಳಪಡುವ ರೀತಿಯಲ್ಲೇ ಆತ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಕ್ಷರಶಃ ಆತ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ' ಎಂದು ದೃಢೀಕರಿಸಿದ್ದಾರೆ.

ಇದರಿಂದ ಅಂತಿಮ ಗಳಿಗೆಯಲ್ಲಿ ಬಾಧಿತಳು ತನಗೆ ಆಸರೆಯಾಗಬಹುದು. ನನ್ನ ಮೇಲಿನ ಆರೋಪವನ್ನು ಹಿಂತೆಗೆದುಕೊಳ್ಳಬಹುದು ಎಂಬ ಆಸರೆ ತೇಜಪಾಲ್ ಗೆ ಕಮರಿಹೋಗಿದೆ. ಹಾಗಾಗಿ ಅತ್ತ ತಾನು ಕುಕೃತ್ಯವೆಸಗಿದ ಗೋವಾ ನೆಲದಲ್ಲಿ ಕಾಲಿಡುತ್ತಿದ್ದಂತೆ ತೆಹಲ್ಕಾ ಪತ್ರಿಕೆಯ ಪ್ರಧಾನ ಸಂಪಾದಕ ತರುಣ್ ತೇಜಪಾಲ್ ಪೊಲೀಸ್ ಬಂಧನಕ್ಕೆ ಒಳಗಾಗುವುದು ದಿಟವಾಗಿದೆ.
'ಒಂದೆಡೆ ನನಗೆ ಭಾರಿ ಪ್ರೋತ್ಸಾಹ/ ನೆರವು ಲಭಿಸುತ್ತಿದೆ. ಇದೇ ವೇಳೆ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಾನು ಇಂತಹ ಆರೋಪ ಮಾಡುತ್ತಿರುವುದಾಗಿ ಕೊಂಕು ತೆಗೆದಿರುವುದು ಬೇಸರ ಮೂಡಿಸಿದೆ' ಎಂದು 2 ಪುಟಗಳ ಹೇಳಿಕೆಯಲ್ಲಿ ಬಾಧಿತ ಪತ್ರಕರ್ತೆ ಹೇಳಿಕೊಂಡಿದ್ದಾರೆ.
'ನನ್ನ ಸ್ವಾಭಿಮಾನಕ್ಕಾಗಿ ನಾನು ಹೋರಾಡುತ್ತಿದ್ದೇನೆಯೇ ಹೊರತು, ಯಾವುದೇ ರಾಜಕೀಯ ದುರುದ್ದೇಶದಿಂದಲ್ಲ. ಕಾನೂನು ಎಂಬುದು ಎಲ್ಲರಿಗೂ ಒಂದೇ ಆಗಿರಬೇಕು. ನನ್ನ ವಿರುದ್ಧದ ಆರೋಪಗಳಿಂದ ನನಗೆ ತುಂಬಾ ದುಃಖವಾಗುತ್ತಿದೆ. ತೇಜಪಾಲ್ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಕೆಲ ಪ್ರಭಾವಿಗಳು ನನ್ನ ಆರೋಪಗಳನ್ನು ರಾಜಕೀಯ ದುರುದ್ದೇಶ ಪೂರ್ವಕ ಎಂದು ಬಣ್ಣಿಸುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಜರ್ಜರಿತಳಾಗಿದ್ದೇನೆ' ಎಂದು ತೆಹಲ್ಕಾ ಮಾಜಿ ಪತ್ರಕರ್ತೆ ಹೇಳಿಕೊಂಡಿದ್ದಾರೆ.












Click it and Unblock the Notifications