Sexual Harassment Allegation: ಕುಸ್ತಿಪಟುಗಳ ಪ್ರತಿಭಟನೆ- ಸುಪ್ರೀಂ ಕೋರ್ಟ್‌ನಲ್ಲಿಂದು ವಿಚಾರಣೆ
ದೆಹಲಿ ಏಪ್ರಿಲ್ 28: ಕುಸ್ತಿ ಸಂಸ್ಥೆಯ ಮುಖ್ಯಸ್ಥನ ಲೈಂಗಿಕ ಕಿರುಕುಳದ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ.
ಜೊತೆಗೆ ಅವರ ಬಂಧನಕ್ಕೆ ಒತ್ತಾಯಿಸಿ ಕೆಲ ದಿನಗಳಿಂದ ದೆಹಲಿಯ ಜಂತರ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಾಗ ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಕುಸ್ತಿಪಟುಗಳ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಬೆಂಬಲಕ್ಕೆ ಇದೀಗ ಖಾಪ್ ಪಂಚಾಯತ್ ನ ಮಹಿಳಾ ಘಟಕ ಮುಂದಾಗಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಈಗ ಖಾಪ್ ಪಂಚತ್ ಮತ್ತು ಯುನೈಟೆಡ್ ಕಿಸಾನ್ ಮೋರ್ಚಾ ಬೆಂಬಲ ಸಿಕ್ಕಿದೆ.
ಕುಸ್ತಿಪಟುಗಳು ಖಾಪ್ ಪಂಚಾಯತ್ ಮುಖಂಡರಿಂದ ಬೆಂಬಲ ಕೋರಿದ್ದರು. ಜಿಂದ್‌ನ ಜನಪ್ರಿಯ ಕಾಂಡೇಲಾ ಖಾಪ್ ಮುಖ್ಯಸ್ಥ ಓಂ ಪ್ರಕಾಶ್ ಖಂಡೇಲಾ ಮಾತನಾಡಿ, ಕುಸ್ತಿಪಟುಗಳು ಇಡೀ ದೇಶಕ್ಕೆ ಸೇರಿದವರ. ಅವರಿಗೆ ಯಾವುದೇ ಜಾತಿ, ಧರ್ಮ, ಪ್ರದೇಶವಿಲ್ಲ.

ಹೆಣ್ಣು ಮಕ್ಕಳ ಭವಿಷ್ಯದ ಒಳಿತಿಗಾಗಿ ಶುಕ್ರವಾರ ದೆಹಲಿ ತಲುಪಿ ಕುಸ್ತಿ ಪಟುಗಳ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಲಿದ್ದೇವೆ ಎಂದು ಓಂ ಪ್ರಕಾಶ್ ತಿಳಿಸಿದರು. ಖಾಪ್ ಯಾವಾಗಲೂ ಕ್ರೀಡಾಪಟುಗಳನ್ನು ಬೆಂಬಲಿಸುತ್ತಾರೆ. ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗುವವರೆಗೆ ನಾವು ಕುಸ್ತಿಪಟುಗಳೊಂದಿಗೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇವೆ ಎಂದಿದ್ದಾರೆ.
ಈ ಹಿಂದೆ ಹರಿಯಾಣ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು. ಆಗಲೂ ರಾಜ್ಯ ಸರ್ಕಾರ ಅವರನ್ನು ಉಳಿಸಲು ಪ್ರಯತ್ನಿಸಿತ್ತು ಎಂದು ಓಂ ಪ್ರಕಾಶ್ ಹೇಳಿದ್ದಾರೆ. ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿಚಾರದಲ್ಲೂ ಅದೇ ಆಗುತ್ತಿದೆ. ಬ್ರಿಜ್‌ಭೂಷಣ್ ಉಳಿಸಲು ಕೇಂದ್ರ ಸರ್ಕಾರದಿಂದ ನೆರವು ಪಡೆಯಲಾಗುತ್ತಿದೆ. ಇಲ್ಲದಿದ್ದರೆ ಎಫ್‌ಐಆರ್ ಏಕೆ ದಾಖಲಾಗುತ್ತಿಲ್ಲ? ಎಂದು ಅವರು ಪ್ರರ್ಶನೆ ಮಾಡಿದರು.

ಹರಿಯಾಣದ ಖಾಪ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ ತಲುಪಿ ಕುಸ್ತಿಪಟುಗಳೊಂದಿಗೆ ಇರುತ್ತಾರೆ ಎಂದು ಫೋಗಟ್ ಖಾಪ್ ಮುಖ್ಯಸ್ಥ ಬಲ್ವಾನ್ ನಂಬರ್ದಾರ್ ಹೇಳಿದ್ದಾರೆ. ನಾವು ನಮ್ಮ ಮಕ್ಕಳನ್ನು ಬೆಂಬಲಿಸಿದ್ದೇವೆ, ಅವರ ಮೇಲೆ ನಮಗೆ ನಂಬಿಕೆ ಇದೆ. ಅವರು ದೇಶಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಈಗ ಆ ಮಕ್ಕಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ತನಿಖೆ ನಡೆಯುತ್ತಿರುವಾಗಲೇ ಕುಸ್ತಿ ಸಂಘದ ಅಧ್ಯಕ್ಷರು ತಾವಾಗಿಯೇ ರಾಜೀನಾಮೆ ನೀಡಬೇಕು. ಆದರೆ ನೀಡಿಲ್ಲ. ಸುಪ್ರೀಂ ಕೋರ್ಟ್‌ನಿಂದ ನಮಗೆ ಹೆಚ್ಚಿನ ನಿರೀಕ್ಷೆ ಇದೆ ಎಂದರು.
ಯುನೈಟೆಡ್ ಕಿಸಾನ್ ಮೋರ್ಚಾದ ನಾಯಕ ಅಭಿಮನ್ಯು ಕುಹರ್ ಮಾತನಾಡಿ, ನಾವು ಶುಕ್ರವಾರ ಸಭೆಯನ್ನು ಕರೆದಿದ್ದೇವೆ, ನಾವು ಕುಸ್ತಿಪಟುಗಳಿಗೆ ನಮ್ಮ ಬೆಂಬಲವನ್ನು ನೀಡುತ್ತೇವೆ. ರೈತ ಚಳವಳಿ ಸಂದರ್ಭದಲ್ಲಿ ಕುಸ್ತಿಪಟುಗಳು ನಮಗೆ ಬೆಂಬಲ ನೀಡಿದ್ದರು, ಈಗ ರೈತರು ಅವರ ಜೊತೆ ನಿಲ್ಲುತ್ತಾರೆ ಎಂದಿದ್ದಾರೆ.












Click it and Unblock the Notifications