ಜಮ್ಮುವಿಗೆ ನುಗ್ಗಲು ಯತ್ನ; ಪಾಕ್ ಬೆಂಬಲಿತ 7 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಭಾರತ ಪಾಕಿಸ್ತಾನ ನಡುವೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಗುರುವಾರ ರಾತ್ರಿ ಪಾಕಿಸ್ತಾನ ಭಾರತದ ಗಡಿ ಭಾಗದಲ್ಲಿ ದಾಳಿ ಮಾಡಲು ಯತ್ನಿಸಿದ್ದು ಭಾರತದ ರಕ್ಷಣಾ ಪಡೆಗಳು ಅದನ್ನು ವಿಫಲಗೊಳಿಸಿವೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿ ಭಾರತದೊಳಗೆ ನುಗ್ಗಲು ಯತ್ನಿಸಿದ ಭಯೋತ್ಪಾಕರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಏಳು ಉಗ್ರರನ್ನು ಭಾರತದ ಸೈನ್ಯ ಕೊಂದು ಹಾಕಿದೆ.
ಧಂಧರ್ ಪೋಸ್ಟ್‌ನಿಂದ ಗಡಿಯುದ್ದಕ್ಕೂ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ರೇಂಜರ್‌ಗಳು ಭಯೋತ್ಪಾದಕರಿಗೆ ಭಾರತದ ಒಳನುಸುಳಲು ಸಹಾಯ ಮಾಡುತ್ತಿದ್ದರು ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತಿಳಿಸಿದೆ. ಭಾರತದ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಪಾಕಿಸ್ತಾನ ಮಿಲಿಟರಿ ಪೋಸ್ಟ್‌ಗೆ ಹಾನಿಯಾಗಿದೆ.

ಮೇ 8 ಮತ್ತು 9 ರ ಮಧ್ಯರಾತ್ರಿ ಸಾಂಬಾ ಸೆಕ್ಟರ್‌ಗೆ ನುಸುಳುತ್ತಿದ್ದಾಗ ಕಣ್ಗಾವಲು ಗ್ರಿಡ್‌ನಿಂದ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಲಾಯಿತು ಎಂದು ಬಿಎಸ್‌ಎಫ್ ತಿಳಿಸಿದೆ. ಎಚ್ಚರಗೊಂಡ ಬಿಎಸ್‌ಎಫ್ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ತಟಸ್ಥಗೊಳಿಸಿದವು, ಕನಿಷ್ಠ ಏಳು ಭಯೋತ್ಪಾದಕರನ್ನು ಕೊಂದು ಪಾಕ್ ಪೋಸ್ಟ್ ಧಂಧರ್‌ಗೆ ವ್ಯಾಪಕ ಹಾನಿಯನ್ನುಂಟುಮಾಡಲಾಗಿದೆ ಎಂದು ಸೇನಾ ಪೋಸ್ಟ್ ನಾಶದ ವೀಡಿಯೊವನ್ನು ಹಂಚಿಕೊಂಡಿದೆ.
ಪಾಕಿಸ್ತಾನಿ ಸೈನ್ಯವು ಭಯೋತ್ಪಾದಕರಿಗೆ ಭಾರತದ ಗಡಿಯೊಳಗೆ ನುಸುಳಲು ಹೇಗೆ ಸಹಾಯ ಮಾಡುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪಾಕಿಸ್ತಾನ ಹೇಗೆ ಜಗತ್ತಿನ ಭಯೋತ್ಪಾದಕರ ಕೇಂದ್ರಬಿಂದುವಾಗಿದೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸುತ್ತದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ಥಳವಾಗಿದೆ ಎಂದು ಭಾರತ ಪದೇ ಪದೇ ಆರೋಪಿಸಿದೆ.
ಗಡಿಯುದ್ದಕ್ಕೂ ಪಾಕಿಸ್ತಾನ ಖ್ಯಾತೆ
ಭಾರತದ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿರುವ ಸೇನಾ ನೆಲೆಗಳು ಮತ್ತು ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವೈಮಾನಿಕ ದಾಳಿ ಮಾಡಿದ್ದು, ಭಾರತದ ರಕ್ಷಣಾ ಪಡೆಗಳು ಪಾಕ್ ಪ್ರಯತ್ನವನ್ನು ವಿಫಲಗೊಳಿಸಿವೆ. ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪ್ರಯತ್ನಿಸಲಾಗಿದೆ. ರಾಜಸ್ಥಾನ, ಗುಜರಾತ್ ಮತ್ತು ಪಂಜಾಬ್‌ನ ಹಲವಾರು ನಗರಗಳನ್ನು ಸಹ ಗುರಿಯಾಗಿಸಲಾಗಿತ್ತು. ಆದರೆ ಪಾಕಿಸ್ತಾನ ಕಳುಹಿಸಿದ ಎಲ್ಲಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದ್ದು. ಯಾವುದೇ ಸಾವು ನೋವು ವರದಿಯಾಗಿಲ್ಲ.
ಪಾಕಿಸ್ತಾನಿ ಪಡೆಗಳು ಗಡಿ ಮತ್ತು ಎಲ್‌ಒಸಿ ಬಳಿಯ ಭಾರತೀಯ ಠಾಣೆಗಳು ಮತ್ತು ಹಳ್ಳಿಗಳ ಮೇಲೆ ಮತ್ತೆ ಗುಂಡಿನ ದಾಳಿ ನಡೆಸಿದವು. ಭಾರತೀಯ ಪಡೆಗಳು ಸೂಕ್ತ ಉತ್ತರವನ್ನು ನೀಡಿ, ಹಲವಾರು ಪಾಕಿಸ್ತಾನಿ ಸೇನಾ ಠಾಣೆಗಳನ್ನು ನಾಶಪಡಿಸಿವೆ. ಜಮ್ಮು, ಶ್ರೀನಗರ ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಹಲವಾರು ಸ್ಥಳಗಳಲ್ಲಿ ನಾಗರಿಕ ಆಡಳಿತವು ಗಡಿಯ ಸಮೀಪವಿರುವ ನಗರಗಳಲ್ಲಿ ರಾತ್ರಿಯಿಡೀ ಬ್ಲಾಕೌಟ್ ಮಾಡಿತ್ತು.
ಶುಕ್ರವಾರ ಸ್ಥಳೀಯ ವಾಯುಪಡೆ ನಿಲ್ದಾಣದಿಂದ ಎಚ್ಚರಿಕೆ ನೀಡಿದ ನಂತರ ಚಂಡೀಗಢದಲ್ಲಿ ವಾಯು ಸೈರನ್‌ಗಳು ಮೊಳಗಿದವು. ಸಂಭವನೀಯ ದಾಳಿ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಯಿತು ಮತ್ತು ಅವರನ್ನು ಒಳಾಂಗಣದಲ್ಲಿ ಮತ್ತು ಬಾಲ್ಕನಿಗಳಿಂದ ದೂರ ಇರುವಂತೆ ಮನವಿ ಮಾಡಲಾಯಿತು. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 24 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.












Click it and Unblock the Notifications