ದೆಹಲಿ: ಮಾಂಸ ಮಾರಾಟಗಾರರ ಮೇಲೆ ಪೊಲೀಸರು ಸೇರಿ ಏಳು ಮಂದಿಯಿಂದ ಹಲ್ಲೆ, ಮೂತ್ರ ವಿಸರ್ಜನೆ
ಆರೋಪಿಗಳು ಗೋ ರಕ್ಷಕರು ಎಂದು ಹೇಳಿಕೊಂಡಿದ್ದು, ಸಂತ್ರಸ್ತರ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ, ಮಾರ್ಚ್ 17: ಪೂರ್ವ ದೆಹಲಿಯ ಶಾಹದಾರದಲ್ಲಿ ಇಬ್ಬರು ಮಾಂಸ ಮಾರಾಟಗಾರರ ಮೇಲೆ ಮೂವರು ದೆಹಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಂದರೆ ಮಾರ್ಚ್ 7 ರಂದು ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಾಂಸ ಮಾರಾಟಗಾರರು ಪ್ರಯಾಣಿಸುತ್ತಿದ್ದ ಕಾರು ಸ್ಕೂಟರ್‌ಗೆ ಅಪಘಾತಕ್ಕೀಡಾಗಿತ್ತು. ಗಾಜಿಪುರದ ಕಸಾಯಿಖಾನೆಯಲ್ಲಿ ಮಾಂಸ ಪೂರೈಕೆದಾರರಾಗಿ ಕೆಲಸ ಮಾಡುತ್ತಿರುವ ನವಾಬ್, ತಮ್ಮ ಸಂಬಂಧಿ ಶೋಯೆಬ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ಇಬ್ಬರು ಮಾಂಸ ಪೂರೈಕೆದಾರರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದ ಮೇಲೆ ಮೂವರು ದೆಹಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಗೋ ರಕ್ಷಕರು ಎಂದು ಹೇಳಿಕೊಂಡಿದ್ದು, ಸಂತ್ರಸ್ತರ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಸಂತ್ರಸ್ತರು ಘಟನೆ ನಡೆದ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದರೂ ನಾಲ್ಕು ದಿನಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಎಲ್ಲಾ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸ ರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಗಾಜಿಪುರದ ಕಸಾಯಿಖಾನೆಗೆ ಮಾಂಸ ಪೂರೈಸುವ ಹಾಗೂ ಮುಸ್ತಫಾಬಾದ್ ನಿವಾಸಿಯಾಗಿರುವ ನವಾಬ್ ತನ್ನ ಸೋದರಸಂಬಂಧಿ ಶೋಯೆಬ್ ಜತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಆನಂದ್ ವಿಹಾರ್ ಬಳಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾರೆ. ಸ್ಕೂಟರ್ ಚಾಲಕ ಅವರಿಂದ 4,000 ರೂಪಾಯಿ ಕೇಳಿದ್ದಾರೆ. ಅಷ್ಟರಲ್ಲಿ ಪಿಸಿಆರ್ ವ್ಯಾನ್ ಅಲ್ಲಿಗೆ ಬಂದು, ಒಬ್ಬ ಪೊಲೀಸ್ ಸಿಬ್ಬಂದಿ ಮಾಂಸ ಪೂರೈಕೆದಾರರಿಂದ 2,500 ರೂಪಾಯಿಗಳನ್ನು ತೆಗೆದುಕೊಂಡು ಸ್ಕೂಟರ್ ಚಾಲಕನಿಗೆ ನೀಡಿದ್ದಾರೆ. ನಂತರ ಪೊಲೀಸರು ಮಾಂಸ ಮಾರಾಟಗಾರರಿಂದ 15,000 ರೂಪಾಯಿಗೆ ಬೇಡಿಕೆಯಿಟ್ಟು, ಕೊಡದಿದ್ದರೇ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಹಾಕಿದ್ದಾರೆ.

ಪಿಸಿಆರ್ ವ್ಯಾನ್‌ನಲ್ಲಿದ್ದ ಪೊಲೀಸರು ಇತರ ನಾಲ್ವರನ್ನು ಕರೆದು ಸಂತ್ರಸ್ತರನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾರೆ. ನವಾಬ್ ಮತ್ತು ಶೋಯೆಬ್ ಅವರನ್ನು ಆರೋಪಿಗಳು ಬಂಧಿಸಿ ಥಳಿಸಿದ್ದಾರೆ. ಚಾಕುವಿನಿಂದ ಅವರ ಕೈಗಳನ್ನು ಕತ್ತರಿಸಲು ಪ್ರಯತ್ನಿಸಿ, ಅವರ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಪೊಲೀಸರು ಕೂಡ ಗೋಹತ್ಯೆ ಮಾಡುತ್ತಿದ್ದಿರಾ ಎಂದು ಆರೋಪಿಸಿ 25 ಸಾವಿರ ರೂಪಾಯಿ ದೋಚಿದ್ದಾರೆ. ಇಬ್ಬರನ್ನು ಕೊಂದು ನಂತರ ಶವವನ್ನು ಚರಂಡಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಮಾರ್ಚ್ 10 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ. ನವಾಬ್ ಮತ್ತು ಶೋಯೆಬ್ ಅವರನ್ನು ಎರಡರಿಂದ ಮೂರು ಗಂಟೆಗಳ ಕಾಲ ಬಂಧಿಸಿ, ಕೆಲವು ಮಾದಕ ದ್ರವ್ಯಗಳನ್ನು ಚುಚ್ಚಲಾಯಿತು ಬಳಿಕ ಕೆಲವು ಖಾಲಿ ಕಾಗದಗಳಿಗೆ ಸಹಿ ಹಾಕಿಸಿಕೊಳ್ಳಲಾಯಿತು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಸಂತ್ರಸ್ತರಿಗೆ ಕೈಕಾಲುಗಳು ಮತ್ತು ಬೆನ್ನಿನ ಮೇಲೆ ಗಾಯಗಳಾಗಿದ್ದು, ಅವರನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸುಲಿಗೆ ಮತ್ತು ಹಲ್ಲೆ ಮಾಡಿದ ಇತರ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications