ತೆಲಂಗಾಣ ಶಾಸಕರ ಖರೀದಿ ಪ್ರಕರಣ: ಸಿಬಿಐಗೆ ವರ್ಗಾಯಿಸಿದ ಹೈಕೋರ್ಟ್
ಹೈದರಾಬಾದ್, ಡಿಸೆಂಬರ್ 26: ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ತೆಲಂಗಾಣ ಶಾಸಕರ ಖರೀದಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಹೈಕೋರ್ಟ್ ಆದೇಶಿಸಿದೆ.
ಭಾರತೀಯ ಜನತಾ ಪಕ್ಷದ(BJP) ತೆಲಂಗಾಣ ರಾಜ್ಯ ಘಟಕದ ಮನವಿಯ ನಂತರ ಈ ಆದೇಶ ಬಂದಿದೆ.
ಇದುವರೆಗಿನ ತನಿಖೆಯನ್ನು ರಾಜ್ಯದ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ್ದು, ಬಿಜೆಪಿಯು ಬಿಆರ್‌ಎಸ್ (ಹಿಂದಿನ ಟಿಆರ್‌ಎಸ್) ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸಿದೆ ಎಂದು ಹೇಳಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡವನ್ನೂ ಹೈಕೋರ್ಟ್ ರದ್ದುಗೊಳಿಸಿದೆ.
ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಮುಖಂಡ ಮತ್ತು ವಕೀಲ ರಾಮ್ ಚಂದರ್ ರಾವ್ ಹೇಳಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಹಣದ ಆಮಿಷವನ್ನು ಬಿಜೆಪಿ ಒಡ್ಡಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು.
ತೆಲಂಗಾಣದಲ್ಲಿ ಆಪರೇಷನ್ ಕಮಲದ ಭಾಗವಾಗಿ ಫಾರ್ಮ್‌ಹೌಸ್ ಒಂದರಲ್ಲಿ ರಹಸ್ಯ ಮಾತುಕತೆ ನಡೆಸಲಾಗಿದೆ. ಈ ವೇಳೆ, ಟಿಆರ್‌ಎಸ್‌ನ ಪ್ರಮುಖ ನಾಯಕರೊಬ್ಬರಿಗೆ ₹ 100 ಕೋಟಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಶಾಸಕರಲ್ಲಿ ಒಬ್ಬರಾದ ಪೈಲಟ್ ರೋಹಿತ್ ರೆಡ್ಡಿ ಅವರು ಫಾರ್ಮ್ ಹೌಸ್‌ನ ಮಾಲೀಕರಾಗಿದ್ದಾರೆ. ಇಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.
ಪೋಲಿಸರು ಹಾಕಿರುವ ಎಫ್‌ಐಆರ್‌ನಲ್ಲಿ ಪೈಲಟ್ ರೋಹಿತ್ ರೆಡ್ಡಿ ದೂರುದಾರರಾಗಿದ್ದರು. ನಾಲ್ವರು ಶಾಸಕರ ಆಪರೇಷನ್ ಕಮಲ ನಡೆಸಲು ₹ 250 ಕೋಟಿ ಮೇಜಿನ ಮೇಲಿತ್ತು ಎಂದು ರೆಡ್ಡಿ ಆರೋಪಿಸಿದ್ದರು.

ಬೇಡಿಕೆಗೆ ಒಪ್ಪದೇ ಹೋದಲ್ಲಿ, ತಮ್ಮ ಮೇಲೆ ತನಿಖೆ ನಡೆಸುವುದಾಗಿ ಬಿಜೆಪಿ ಬೆದರಿಗೆ ಹಾಕಿದೆ ಎಂದೂ ರೆಡ್ಡಿ ಆರೋಪಿಸಿದ್ದರು.
ಈ ಪ್ರಕರಣದ ಸಂಬಂಧ ಮೂವರನ್ನು ಬಂಧಿಸಲಾಗಿತ್ತು. ಹರಿಯಾಣದ ಫರಿದಾಬಾದ್‌ನ ಅರ್ಚಕ ಸತೀಶ್ ಶರ್ಮಾ, ಅಲಿಯಾಸ್ ರಾಮ್ ಚಂದ್ರ ಭಾರತಿ, ತಿರುಪತಿಯ ಧರ್ಮದರ್ಶಿ ಡಿ. ಸಿಂಹಯಾಜಿ ಮತ್ತು ಹೈದರಾಬಾದ್ ಮೂಲದ ಉದ್ಯಮಿ ನಂದಕುಮಾರ್ ಬಂಧಿತರು. ಅವರಿಗೆ ಬಿಜೆಪಿ ಜೊತೆ ನಂಟು ಇದೆ ಎಂದು ಪೊಲೀಸರು ಹೇಳಿದ್ದರು.
ಇದೇ ಪ್ರಕರಣದಲ್ಲಿ ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಅವರಿಗೂ ತೆಲಂಗಾಣ ಎಸ್‌ಐಟಿ ನೋಟಿಸ್ ನೀಡಿತ್ತು. ತೆಲಂಗಾಣ ಸರ್ಕಾರದ 'ಆಪರೇಶನ್ ಕಮಲ' ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.












Click it and Unblock the Notifications