Bengaluru Highway: ಪುಣೆ-ಬೆಂಗಳೂರು ಹೈವೇ ಉದ್ದಕ್ಕೂ ಹೊಸ ಯೋಜನೆ
ಪುಣೆ, ಫೆಬ್ರವರಿ 11: ಸಂಚಾರ ದಟ್ಟಣೆ ಕಡಿಮೆ ಮಾಡಲು ಒಂದಲ್ಲಾ ಒಂದು ರಸ್ತೆ ಯೋಜನೆಗಳು ಜಾರಿಯಾಗುತ್ತಲೇ ಇವೆ. ಇದೀಗ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ (NH-04) ಹೊಸ ಯೋಜನೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅನುಮೋದನೆ ನೀಡಿದೆ. ಇದರಿಂದ ಸವಾರರಿಗೆ, ನಿವಾಸಿಗಳಿಗೆ ದಟ್ಟಣೆ ಕಿರಿ ಕಿರಿ ತಪ್ಪುತ್ತದೆ. ಈ ಯೋಜನೆಗಾಗಿ 604 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ.
ಹೌದು, ಮುಂಬೈ-ಬೆಂಗಳೂರು ಹೆದ್ದಾರಿಯ 32.4 ಕಿಲೋಮೀಟರ್ ಉದ್ದಕ್ಕೂ ಸೇವಾ ರಸ್ತೆ (Service Road-NH 4) ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪುಣೆ ತನ್ನ ಸಂಚಾರ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ತರುವ ನಿಟ್ಟಿನಲ್ಲಿ ಈ ಯೋಜನೆಗೆ ಕೈ ಹಾಕಿದೆ. ಈ ಮೂಲಕ ಪುಣೆ ನಿವಾಸಿಗಳಿಗೆ ಒಳ್ಳೆಯ ಸುದ್ದಿ ನೀಡಿದೆ. ನಗರದ ದಟ್ಟಣೆ ನಿಯಂತ್ರಿಸುವ ಜೊತೆಗೆ ರಸ್ತೆ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಈ ಯೋಜನೆಗೆ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ಎಲ್ಲಿಂದ ಎಲ್ಲಿಯವರೆಗೆ ನಿರ್ಮಾಣ
ಈ ಸರ್ವೀಸ್ ರಸ್ತೆಯು ಖೇಡ್-ಶಿವಪುರದಿಂದ ರಾವೆಟ್‌ವರೆಗೆ ವಿಸ್ತರಣೆ ಆಗಲಿದೆ ಎಂದು ಮೂಲಗಳು ತಿಳಿಸಿದವೆ. ಸುಮಾರು ₹604 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡು ಪಥದ ಹೆದ್ದಾರಿ ರಸ್ತೆಯ ಎರಡೂ ಕಡೆಗಳಲ್ಲೂ ಒಟ್ಟು 3.5 ಮೀಟರ್ ಅಗಲದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಮುಂದಿನ ತಿಂಗಳು ಮಾರ್ಚ್ 2025 ನಲ್ಲಿ ಕಾಮಗಾರಿ ಆರಂಭವಾಗಿ ಎರಡು ವರ್ಷಗಳಲ್ಲಿ ಮುಗಿಸಲು ಗಡುವ ನೀಡಲಾಗಿದೆ.
ಸರ್ವೀಸ್ ರಸ್ತೆಯ ಪ್ರಯೋಜನ
ಪುಣೆಯಿಂದ ಬೆಂಗಳೂರಿನ ಕಡೆಗೆ ಬರುವ ಮಂಬೈ-ಬೆಂಗಳೂರು ಮಾರ್ಗ ಮಧ್ಯ ಇರುವ ನರಹೆ, ನವಲೆ ಸೇತುವೆ, ವಾರ್ಜೆ, ಚಂದಾನಿ ಚೌಕ್ ಮತ್ತು ರಾವೆಟ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ದಟ್ಟಣೆ ಇಳಿಕೆ ಆಗುತ್ತದೆ. ಸವಾರರಿಗೆ, ಪ್ರಯಾಣಿಕರಿಗೆ ಸಂಚಾರ ಸುರಕ್ಷತೆ ದೊರೆಯಲಿದೆ. ಅದೇ ನಿಟ್ಟಿನಲ್ಲಿ ವಿನ್ಯಾಸಗೊಳಿಸಾಗಿದೆ.
ಈ ಸರ್ವೀಸ್ ರಸ್ತೆಯಿಂದ ರಸ್ತೆ ಪ್ರಯಾಣದ ಸಮಯ ಸುಮಾರು 20 ನಿಮಿಷಕ್ಕೆ ಕಡಿತಗೊಳ್ಳಲಿದೆ. ನಿತ್ಯ ಸುಮಾರು ಒಂದು ಲಕ್ಷ ವಾಹನ ಸವಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಅದಷ್ಟೇ ಅಲ್ಲದೇ ಯೋಜನೆಯಿಂದ ರಸ್ತೆ ಅಪಘಾತಗಳು ನಿಯಂತ್ರಣಕ್ಕೆ ಬರಲಿವೆ. ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ಅಲ್ಲಿನ ಸರ್ಕಾರ, ಅಧಿಕಾರಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭೂಸ್ವಾಧೀನ ಬಹುತೇಕ ಪೂರ್ಣ
ಈ ಸರ್ವೀಸ್ ರಸ್ತೆ ಯೋಜನೆಗೆ ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (PCMC) ಶೇಕಡಾ 90ರಷ್ಟು ಭೂಮಿ ಸ್ವಾಧೀನ ಪಡಿಸಿಕೊಂಡಿದೆ. ಆದರೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ಉಳಿದ ಶೇಕಡಾ 10ರಷ್ಟು ಭೂಮಿ ಪಡೆಯಲಿದೆ. ಇವೆರು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಯೋಜನೆಗೆ ಅಸ್ತಿತ್ವಕ್ಕೆ ಬರಲಿದೆ. ರಸ್ತೆ ಮೂಲಸೌಕರ್ಯ ಸುಧಾರಣೆ ಆಗಲಿದ್ದು, ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
ದೇಶದ ಪ್ರಮುಖ ವಾಣಿಜ್ಯ ನಗರಿ ಮುಂಬೈಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ. ಪುಣೆ ಬೆಳ್ಳೆಯುತ್ತಿರುವ ಪ್ರಮುಖ ನಗರವಾಗಿದೆ. ಹೀಗಾಗಿ ಹೊಸ ವಾಹನಗಳು ನಿತ್ಯ ರಸ್ತೆಗೆ ಇಳಿಯುತ್ತಿವೆ. ದಿನೇ ದಿನೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ಸಮಯ ಹಾಳಾಗುವ ಜೊತೆಗೆ ಅಪಘಾತಗಳು ಹೆಚ್ಚಾಗುತ್ತಿದ್ದವು. ಸ್ಥಳೀಯ ಸಂಚಾರವು ದುಸ್ತರವಾಗಿತ್ತು. ಈ ಕಾರಣದಿಂದಲೇ ಹೆದ್ದಾರಿ ಪಕ್ಕದಲ್ಲಿ ಹತ್ತಾರು ಕಿಲೋ ಮೀಟರ್ ಸರ್ವೀಸ್ ರಸ್ತೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಇದರ ಅನುಕೂಲತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಪುಣಾ-ಬೆಂಗಳೂರು ಉದ್ದಕ್ಕೂ ಎಲ್ಲೆಲ್ಲಿ ಅಗತ್ಯತೆ ಇದೆಯೋ ಅಲ್ಲಿಯವರೆಗೆ ಹೆದ್ದಾರಿ ಪಕ್ಕ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವ ಚಿಂತನೆಯೂ ಇದೆ ಎನ್ನಲಾಗುತ್ತಿದೆ.












Click it and Unblock the Notifications