ಸೀಮಾಂಧ್ರ ಬಂದ್, ಕರ್ನಾಟಕಕ್ಕೆ ಸಂಕಟ
ಹೈದ್ರಾಬಾದ್, ಸೆ.24: ಆಂಧ್ರ ವಿಭಜನೆ- ತೆಲಂಗಾಣ ರಾಜ್ಯ ರಚನೆ ವಿರುದ್ಧದ ಪ್ರತಿಭಟನೆಯ ಕಾವು ತಾರಕಕ್ಕೇರಿದೆ. ಸೀಮಾಂಧ್ರ ಭಾಗದ 13 ಜಿಲ್ಲೆಗಳಲ್ಲಿ ಮಂಗಳವಾರ ಕರೆದಿದ ಬಂದ್ ಯಶಸ್ವಿಯಾಗಿದೆ. ಇದರಿಂದ ಕರಾವಳಿ ಭಾಗ, ರಾಯಲಸೀಮಾ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಬಂದ್ ಬಿಸಿ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನಿಗೂ ತಟ್ಟಿದೆ. ಸಾವಿರಾರು ಭಕ್ತರು ವಾಹನಗಳಿಲ್ಲದೆ ಪರದಾಡುತ್ತಿದ್ದಾರೆ. ಪ್ರಮುಖವಾಗಿ ತಿರುಪತಿಗೆ ಹೋಗುವ ಎಲ್ಲಾ ಬಸ್ ಗಳನ್ನೂ ಪ್ರತಿಭಟನಾಕಾರರು ತಡೆಹಿಡಿದಿದ್ದಾರೆ.
ದ್ವಿಚಕ್ರ, ತ್ರಿಚಕ್ರ ವಾಹನಗಳೂ ರಸ್ತೆಗಿಳಿಯುವಂತಿಲ್ಲ. ಜತೆಗೆ ಇದುವರೆಗೆ ಟಿಟಿಡಿ ಆಡಳಿತ ಮಂಡಳಿಯವರು ದೇವಸ್ಥಾನದ ಬಸ್ ಗಳನ್ನು ಓಡಿಸಿ ಕೆಲ ಮಟ್ಟಿಗಾದರೂ ಭಕ್ತರಿಗೆ ನೆರವಾಗುತ್ತಿದ್ದರು. ಆದರೆ, ಈ ಬಾರಿ ಪ್ರತಿಭಟನಾಕಾರರು ಅದಕ್ಕೂ ಅಡ್ಡಿ ಪಡಿಸಿದ್ದು, ಒಂದು ಸೈಕಲ್ ಕೂಡ ರಸ್ತೆ ಮೇಲೆ ಸಂಚರಿಸದಂತಾಗಿದೆ.
ತಿರುಪತಿಯ ಉಚಿತ ಬಸ್ ಸೇವೆಯೂ ಸ್ಥಗಿತಗೊಂಡಿದೆ. ತಿರುಮಲದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸಾವಿರಾರು ಮಂದಿ ಭಕ್ತರಿಗೆ ಊಟ, ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು, ಯಾರೂ ಚಿಂತಿಸುವ ಅಗತ್ಯವಿಲ್ಲ ಎಂದು ಟಿಟಿಡಿ ಆಡಳಿತ ಮಂಡಳಿ ಪ್ರಕಟಿಸಿದೆ.
ಆಂಧ್ರ ವಿಭಜನೆ ಖಂಡಿಸಿ ಇದುವರೆಗೆ ಪ್ರತಿಭಟನೆಗಳು ನಡೆದಿವೆಯಾದರೂ, ಇಂದು ಸಮೈಕ್ಯ ರಾಷ್ಟ್ರ ಪರಿರಕ್ಷಣಾ ವೇದಿಕೆ ಕರೆದಿರುವ ಬಂದ್ ಕಳೆದ 38 ವರ್ಷಗಳ ಅವಧಿಯಲ್ಲಿಯೇ ಬೃಹತ್ ಪ್ರತಿಭಟನೆ ಎಂದು ಹೇಳಲಾಗಿದೆ. ಈ ಭಾಗದ ಸರ್ಕಾರಿ ಶಾಲೆ ಕಾಲೇಜುಗಳು ಕಳೆದ 40 ದಿನಗಳಿಂದ ಬಾಗಿಲು ಮುಚ್ಚಿವೆ. ಕಳೆದ ಒಂದು ವಾರದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ತೆರೆದಿಲ್ಲ. ಬಂದ್ ಬಿಸಿ ಚಿತ್ರಣ ಮುಂದೆ ನೋಡಿ..

ಬೃಹತ್ ಪ್ರತಿಭಟನೆ
ಈ ಹಿಂದೆ 1975ರ ತುರ್ತು ಪರಿಸ್ಥಿತಿ ಸಂದರ್ಭ ಆಂಧ್ರದಲ್ಲಿ ಇಂಥದ್ದೇ ಪ್ರತಿಭಟನೆಗಳು ನಡೆದಿದ್ದವು ಎಂದು ಹೇಳಲಾಗಿದೆ. ಸಮೈಕ್ಯ ರಾಷ್ಟ್ರ ಪರಿರಕ್ಷಣಾ ವೇದಿಕೆಯೊಂದಿಗೆ ಸೀಮಾಂಧ್ರ (13 ಜಿಲ್ಲೆಗಳು) ಪ್ರದೇಶದ ನೂರಾರು ಸಂಘಟನೆಗಳು ಕೈ ಜೋಡಿಸಿವೆ. ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಗಡಿಜಿಲ್ಲೆಗಳಿಗೂ ಬಿಸಿ
ಸೀಮಾಂಧ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಗುಲ್ಬರ್ಗ, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಗೂ ಬಿಸಿ ತಟ್ಟಿದ್ದು, ಇಲ್ಲಿಂದ ಆಂಧ್ರಕ್ಕೆ (ತಿರುಪತಿಗೆ) ತೆರಳುವ ಬಸ್ ಗಳನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
ಹೀಗಾಗಿ ಕರ್ನಾಟಕದ ಗಡಿ ಭಾಗದ ಜಿಲ್ಲಾ ಪ್ರದೇಶಗಳಲ್ಲೂ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಆಂಧ್ರ- ಕರ್ನಾಟಕ ನಡುವಣ ಸಂಚಾರ ಸಂಪರ್ಕ ಸ್ಥಗಿತಗೊಂಡಿದೆ.
ದಿನ ನಿತ್ಯ ಭಕ್ತಾದಿಗಳಲ್ಲದೆ, ವ್ಯಾಪಾರಿಗಳು ಕೂಡಾ ಸೀಮಾಂಧ್ರ ಭಾಗಕ್ಕೆ ತೆರಳುತ್ತಿದ್ದವರು ಇಂದು ಭಾರಿ ನಷ್ಟ ಅನುಭವಿಸಿದ್ದಾರೆ.

ವಿದ್ಯಾರ್ಥಿಗಳ ಬೆಂಬಲ
13 ಜಿಲ್ಲೆಗಳ 123 ಡಿಪೋಗಳಲ್ಲಿ 12,000 ಬಸ್ ಗಳು ಸ್ಥಗಿತಗೊಂಡಿದ್ದು, ಆಂಧ್ರವಿಭಜನೆ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿ ಎಪಿಎಸ್ ಆರ್ ಟಿಸಿಯ 66 ಸಾವಿರ ಮಂದಿ ಉದ್ಯೋಗಿಗಳು ಬಂದ್ ನಲ್ಲಿ ಪಾಲ್ಗೊಂಡಿದ್ದಾರೆ.
ಈ ಹಿಂದೆ ನಡೆದ 72 ಗಂಟೆಗಳ ಬಂದ್ ಸಮಯ್ದದಲ್ಲಿ ಇದ್ದ ಪರಿಸ್ಥಿತಿಗಿಂತ ಹೆಚ್ಚಿನ ತೊಂದರೆ ಜನರಿಗೆ ಉಂಟಾಗಿದೆ. ಉಸ್ಮಾನಿಯಾ ವಿವಿ ವಿದ್ಯಾರ್ಥ್ಗಿಗಳಂತೆ ಇತರೆ ವಿವಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮುಕಿದ್ದಾರೆ.

ಆದಾಯ ಬರುವುದು ನಿಂತಿದೆ
ಕೃಷ್ಣಾ ಹಾಗೂ ಗುಂಟೂರು ಜಿಲ್ಲೆಗಳಲ್ಲಿ ಕೇಬಲ್ ಆಪರೇಟರ್ ಗಳು ಮನರಂಜನಾ ಚಾನೆಲ್‌ಗಳ ಪ್ರಸಾರ ಸ್ಥಗಿತಗೊಳಿಸಿದ್ದಾರೆ. ನಿತ್ಯ 50 ಸಾವಿರ ಮಂದಿ ಭೇಟಿ ಕೊಡುವ ತಿರುಮಲ-ತಿರುಪತಿ ದೇಗುಲಕ್ಕೆ ನಿತ್ಯ 2 ಕೋಟಿ ರೂ. ಆದಾಯ ಬರುವುದು ನಿಂತಿದೆ.

ಪ್ರಯಾಣಿಕರಿಗೆ ಸೂಚನೆ
ಜತೆಗೆ ತಿರುಪತಿ ವೆಂಕಟೇಶನ ದರ್ಶನಕ್ಕೆ ಬರುವ ಭಕ್ತಾದಿಗಳು ಒಂದೆರಡು ದಿನ ನಿಧಾನಿಸಿದರೆ ಒಳ್ಳೆಯದು.
ಹೊರ ರಾಜ್ಯ ಅಥವಾ ಹೊರ ದೇಶಗಳಿಂದ ಬಂದಿರುವ ಭಕ್ತರು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪ್ರಯಾಣ ವ್ಯವಸ್ಥೆ ಸರಿ ಹೋಗುವವರೆಗೂ ಟಿಟಿಡಿ ಸಂಸ್ಥೆ ಎಲ್ಲಾ ಭಕ್ತರಿಗೂ ಊಟ, ವಸತಿ ವ್ಯವಸ್ಥೆ ಕಲ್ಪಿಸಲಿದೆ. ಬೆಟ್ಟದ ಕೆಳಗಡೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಿದೆ. ಯಾವುದೇ ವ್ಯವಸ್ಥೆ ಕಲ್ಪಿಸುವಲ್ಲಿ ಸ್ವಲ್ಪ ತಡವಾಗಬಹುದು ಅಷ್ಟೆ. ಭಕ್ತಾದಿಗಳು ಸಹಕರಿಸಬೇಕು ಎಂದು ಆಡಳಿತ ಮಂಡಳಿ ಜನರಿಗೆ ಭರವಸೆ ನೀಡಿದೆ.












Click it and Unblock the Notifications