ಐಪಿಸಿ ಸೆಕ್ಷನ್ 497 ಮಹಿಳಾ ವಿರೋಧಿ : ಸುಪ್ರೀಂಕೋರ್ಟ್
ನವದೆಹಲಿ, ಆಗಸ್ಟ್ 03 : ಅನೈತಿಕ ಸಂಬಂಧದ ಪ್ರಕರಣಗಳಲ್ಲಿ ಪುರುಷರನ್ನು ಮಾತ್ರ ಯಾಕೆ ಅಪರಾಧಿಗಳು ಎಂದು ಪರಿಗಣಿಸಲಾಗುತ್ತದೆ? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಐಪಿಸಿ ಸೆಕ್ಷನ್ 497 ಅಪರಾಧವಾಗಿ ಉಳಿಯಲಿದೆಯೇ ಎಂದು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಐಪಿಸಿ ಸೆಕ್ಷನ್ 497ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ನಡೆಸಿತು.
ಇಟಲಿ ಮೂಲದ ಭಾರತೀಯ ವಾಸಿಯಾದ ಜೋಸೆಫ್ ಶೈನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಐಪಿಸಿ ಸೆಕ್ಷನ್ 497ರ ಅಡಿ ಪುರುಷರನ್ನು ಮಾತ್ರ ಅಪರಾಧಿಗಳಾಗಿ ಮಾಡುವುದು ಲಿಂಗತಾರತಮ್ಯವಾಗಿದೆ. ಸರ್ಕಾರ ಇದರ ವ್ಯಾಪ್ತಿಗೆ ಮಹಿಳೆಯರನ್ನು ತರಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸೆಕ್ಷನ್ 497 ಮಹಿಳೆ ಮತ್ತು ಪುರುಷರಿಗೆ ಭಿನ್ನವಾಗಿ ಅನ್ವಯವಾಗುತ್ತಿರುವುದು ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆ ಇನ್ನೊಬ್ಬ ವ್ಯಕ್ತಿಯ ಪತ್ನಿ ಎಂದು ಗೊತ್ತಿದ್ದರೂ, ಆತನ ಒಪ್ಪಿಗೆ ಇಲ್ಲದೇ ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸುವುದು ಅತ್ಯಾಚಾರ ಎಂದು ಸಾಬೀತಾಗುವುದಿಲ್ಲ. ವ್ಯಭಿಚಾರದ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ 5 ವರ್ಷದ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಐಪಿಸಿ ಸೆಕ್ಷನ್ 497 ಮಹಿಳೆಯ ವಿರುದ್ಧವಾಗಿದೆ. ಗಂಡ ತನ್ನ ಹೆಂಡತಿಯ ಜೊತೆ ಇನ್ನೊಬ್ಬನ ಸಂಬಂಧಕ್ಕೆ ಒಪ್ಪಿದರೆ ಆಕೆಯನ್ನು ವಸ್ತುವಿನಂತೆ ಬಳಸಿಕೊಂಡಂತೆ ಆಗುತ್ತದೆ. ಆಗ ಇದು ವ್ಯಭಿಚಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.












Click it and Unblock the Notifications