ಅಮೆರಿಕದಿಂದ 119 ಅಕ್ರಮ ಭಾರತೀಯ ವಲಸಿಗರು ಇಂದು ವಾಪಸ್
ಚಂಡೀಗಢ, ಫೆಬ್ರವರಿ 15: ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಕೇವಲ ಮೂರು ದಿನಗಳಲ್ಲಿ ಅಧಿಕಾರಿಗಳು ಅತಿದೊಡ್ಡ ಗಡಿಪಾರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲ ಹಂತದಲ್ಲಿ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಭಾರತೀಯರನ್ನು ಸೇನಾ ವಿಮಾನದ ಮೂಲಕ ಭಾರತಕ್ಕೆ ಕಳಿಸಲಾಗಿತ್ತು. 2ನೇ ವಿಮಾನ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಆಗಮಿಸಲಿದೆ.
ಮಾಹಿತಿಗಳ ಪ್ರಕಾರ 119 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಭಾರತಕ್ಕೆ ಆಗಮಿಸಲಿದೆ. ಪಂಜಾಬ್‌ನ ಅಮೃತಸರದಲ್ಲಿರುವ ಶ್ರೀ ಗುರು ರಾಮದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಲಿದೆ.

ಕಳೆದ ವಾರ 104 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದ ಸೇನಾ ವಿಮಾನದ ಮೂಲಕ ವಾಪಸ್ ಕಳಿಸಿತ್ತು. ಅಮೃತಸರದ ವಿಮಾನ ನಿಲ್ದಾಣಕ್ಕೆ ಈ ವಿಮಾಬ ಬಂದಿತ್ತು. ಹರ್ಯಾಣ, ಗುಜರಾತ್‌ನ ತಲಾ 33 ಮಂದಿ ಹಾಗೂ ಪಂಜಾಬ್‌ನ 30 ಜನರು ಈ ವಿಮಾನದಲ್ಲಿದ್ದರು.
ಕೈಕೋಳ ಹಾಕಲಾಗಿದೆ ಎಂಬ ವಿವಾದ: ಶನಿವಾರ ಲ್ಯಾಂಡ್ ಆಗಲಿರುವ ಸೇನಾ ವಿಮಾನದಲ್ಲಿ 119 ಭಾರತೀಯರು ಆಗಮಿಸಲಿದ್ದಾರೆ. ಇವರಲ್ಲಿ ಪಂಜಾಬ್‌ನ 67, ಹರ್ಯಾಣದ 33, ಗುಜರಾತ್‌ನ 8, ಉತ್ತರ ಪ್ರದೇಶದ 3, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಆಗಮಿಸಲಿದ್ದಾರೆ ಎಂಬ ಮಾಹಿತಿ ಇದೆ.
ಅಮೆರಿಕದಲ್ಲಿ ನೆಲೆಸಿರುವ ವಿವಿಧ ದೇಶಗಳ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಈ ಕಾರ್ಯಾಚರಣೆಯ ಭಾಗವಾಗಿಯೇ ಭಾರತ ಸೇರಿದಂತೆ ವಿವಿಧ ದೇಶಗಳ ಅಕ್ರಮ ವಲಸಿಗರನ್ನು ಬಂಧಿಸಿ, ಅವರ ದೇಶದಕ್ಕೆ ಗಡಿಪಾರು ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಭಾರತಕ್ಕೆ ಬಂದ ಅಕ್ರಮ ವಲಸಿಗರಿಗೆ ಕೈ ಕೋಳ ಹಾಕಲಾಗಿತ್ತು ಎಂಬುದು ವಿವಾದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ಅಕ್ರೋಶ ವ್ಯಕ್ತಪಡಿಸಿದ್ದವು.
ಈಗ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಬಳಿಕ 2ನೇ ತಂಡದಲ್ಲಿ ಅಕ್ರಮ ಭಾರತೀಯ ವಲಸಿಗರನ್ನು ದೇಶಕ್ಕೆ ಕಳಿಸಲಾಗುತ್ತಿದೆ. ಇವರಿಗೆ ಸಹ ಕೈ ಕೋಳ ಹಾಕಲಾಗಿದೆಯೇ? ಎಂಬುದು ಚರ್ಚೆಯ ವಿಚಾರವಾಗಿದೆ.
ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕ ವಾಪಸ್ ಕಳಿಸುವ ಕುರಿತು ಪ್ರತಿಕ್ರಿಯೆ ನೀಡಿದ್ದರು.
"ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸ್ನೇಹಿತ. ನನ್ನ ಮಾತು ಕೇಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಹೇಳುತ್ತಾರೆ. ಆದರೆ ನಿಮ್ಮನ್ನು ಕೇಳದೆ ಅಕ್ರಮ ಭಾರತೀಯ ವಲಸಿಗರನ್ನು ಏಕೆ ದೇಶದಿಂದ ಹೊರ ಹಾಕುತ್ತಿದ್ದಾರೆ?" ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದರು.
"ದೇಶದ ಪ್ರಜೆಗಳ ಕೈಗಳಿಗೆ, ಕಾಳಿಗೆ ಬೇಡಿ ಹಾಕಿ ಕರೆತರಲಾಗುತ್ತಿದೆ. ಅಂದರೆ ನಿಮ್ಮ ಸ್ನೇಹಿತ ನಮ್ಮ ದೇಶದ ಪ್ರಜೆಗಳನ್ನು ಗುಲಾಮರಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮೋದಿ ಆಲೋಚಿಸಬೇಕು, ಮಾತನಾಡಬೇಕು" ಎಂದು ಖರ್ಗೆ ಒತ್ತಾಯಿಸಿದ್ದರು.












Click it and Unblock the Notifications