ನಿಮಗೇನು ಮನುಷ್ಯತ್ವ ಇಲ್ಲವೇ: ಕೊವಿಡ್ ಮೃತರ ಕುಟುಂಬಕ್ಕೆ ಪರಿಹಾರ ನೀಡದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ನವದೆಹಲಿ, ಡಿಸೆಂಬರ್ 6: ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತೋರುತ್ತಿರುವ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೋಮವಾರ ತರಾಟೆ ತೆಗೆದುಕೊಂಡಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ ಸರ್ಕಾರಗಳ ವಿರುದ್ಧ ಕೋರ್ಟ್ ಚಾಟಿ ಬೀಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅಡಿಯಲ್ಲಿ ಕೋವಿಡ್ -19 ಸೋಂಕಿನಿಂದ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ 50,000 ರೂಪಾಯಿ ಪಾವತಿಸಲು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್‌ನಲ್ಲಿ ಅನುಮೋದನೆ ನೀಡಿತ್ತು.
ಸೋಮವಾರ ಕೊವಿಡ್-19 ಮೃತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತೋರುತ್ತಿರುವ ವಿಳಂಬ ಧೋರಣೆ ಕುರಿತು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಹಾಗೂ ನ್ಯಾ ಬಿವಿ ನಾಗರತ್ನ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ಮಹಾರಾಷ್ಟ್ರ ಅಫಿಡವಿಟ್ ಕುರಿತು ಅಸಮಾಧಾನ:
ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ತೃಪ್ತಿದಾಯಕವಾಗಿಲ್ಲ. ರಾಜ್ಯದಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಜನರಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ, ಆದರೆ 37,000 ಕುಟುಂಬಗಳಿಂದ ಮಾತ್ರ ಪರಿಹಾರಕ್ಕಾಗಿ ಅರ್ಜಿಗಳು ಬಂದಿವೆ. ಈ ಪೈಕಿ ಒಬ್ಬರೇ ಒಬ್ಬರಿಗೆ ಇದುವರೆಗೂ ಪರಿಹಾರವನ್ನು ನೀಡಿಲ್ಲ. ಇದು ಹಾಸ್ಯಾಸ್ಪದವಾಗಿದ್ದು, ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ," ಎಂದು ರಾಜ್ಯ ಸರ್ಕಾರನ್ನು ನ್ಯಾ. ಎಂ ಆರ್ ಶಾ ತರಾಟೆ ತೆಗೆದುಕೊಂಡರು.
ಮಹಾರಾಷ್ಟ್ರ ಸರ್ಕಾರದ ಪರ ವಕೀಲರಾದ ಸಚಿನ್ ಪಾಟೀಲ್ ಪರಿಹಾರ ವಿತರಿಸಲು ಹೆಚ್ಚಿನ ಸಮಯ ಕೋರಿದಾಗ, "ನಾವು ಶೀಘ್ರದಲ್ಲೇ ಈ ಬಗ್ಗೆ ಅಫಿಡವಿಟ್ ಸಲ್ಲಿಸುತ್ತೇವೆ" ಎಂದು ಹೇಳಿದರು. "ನೀವು ಆ ಅಫಿಡವಿಟ್ ಅನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ನಿಮ್ಮ ಸಿಎಂಗೆ ಕೊಡಿ. ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ," ಎಂದು ನ್ಯಾಯಮೂರ್ತಿ ಶಾ ಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ತಕ್ಷಣದಿಂದಲೇ ಪರಿಹಾರವನ್ನು ವಿತರಿಸುವ ಕಾರ್ಯವನ್ನು ಶುರು ಮಾಡಬೇಕು ಎಂದು ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿತು.
ಪಶ್ಚಿಮ ಬಂಗಾಳದಲ್ಲಿ 110 ಕುಟುಂಬಕ್ಕೆ ಪರಿಹಾರ:
ಪಶ್ಚಿಮ ಬಂಗಾಳದ ವಿಷಯಕ್ಕೆ ಬಂದರೆ, ರಾಜ್ಯದಲ್ಲಿ ಇದುವರೆಗೂ 19,000ಕ್ಕೂ ಅಧಿಕ ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ, 467 ಜನರು ಮಾತ್ರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 110 ಮೃತ ಕುಟುಂಬಗಳಿಗೆ ಮಾತ್ರ ಪರಿಹಾರವನ್ನು ನೀಡಲಾಗಿದೆ ಎಂಬುದನ್ನು ಕೋರ್ಟ್ ಗಮನಿಸಿದೆ.
ರಾಜಸ್ಥಾನದಲ್ಲೂ ವಿಭಿನ್ನವಾಗಿಲ್ಲ ಚಿತ್ರಣ:
ರಾಜ್ಯದಲ್ಲಿ ಕೊವಿಡ್-19 ಸೋಂಕಿನಿಂದ 9,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ 595 ಕುಟುಂಬಗಳಿಂದ ಮಾತ್ರ ಪರಿಹಾರಕ್ಕಾಗಿ ಅರ್ಜಿಗಳು ಬಂದಿದ್ದು, ಅದರಲ್ಲಿ ಒಬ್ಬರಿಗೂ ಪರಿಹಾರವನ್ನು ವಿತರಿಸಿಲ್ಲ ಎಂಬುದು ಗೊತ್ತಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿತು. 'ಜನರ ಕುರಿತು ಮಾನವೀಯತೆ ತೋರುವಂತೆ ನಿಮ್ಮ ಸರ್ಕಾರಕ್ಕೆ ತಿಳಿಸಿ," ಎಂದು ನ್ಯಾಯಮೂರ್ತಿ ಶಾ ಹೇಳಿದರು.
ಡಿಸೆಂಬರ್ 3ರ ಬಳಿಕ ಆನ್ ಲೈನ್ ಪೋರ್ಟಲ್:
ಹೆಚ್ಚಿನ ರಾಜ್ಯ ಸರ್ಕಾರಗಳಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ ನಂತರ ಡಿಸೆಂಬರ್ 3ರಂದು ಆನ್‌ಲೈನ್ ಪೋರ್ಟಲ್‌ಗಳನ್ನು ಆರಂಭಿಸಿವೆ. "ನ್ಯಾಯಾಲಯ ಕೆಲಸ ಮಾಡಲು ಒತ್ತಾಯಿಸಿದ ನಂತರವೇ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ಆನ್‌ಲೈನ್ ಪೋರ್ಟಲ್‌ಗಳನ್ನು ಸ್ಥಾಪಿಸಿದವು" ಎಂದು ನ್ಯಾಯಮೂರ್ತಿ ಶಾ ಟೀಕಿಸಿದರು. ಕೊವಿಡ್-19 ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಟಿವಿ, ಪತ್ರಿಕೆ ಹಾಗೂ ರೇಡಿಯೋಗಳ ಮೂಲಕ ಪ್ರಚಾರ ಮಾಡಬೇಕು. ಹೆಚ್ಚು ಹೆಚ್ಚು ಸಂತ್ರಸ್ತರು ಪರಿಹಾರ ಪಡೆದುಕೊಳ್ಳುವುದಕ್ಕೆ ಮುಂದೆ ಬರುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.












Click it and Unblock the Notifications