ಗುಜರಾತ್ ಚುನಾವಣೆ: ಸುಪ್ರಿಂ ಕೋರ್ಟಿನಲ್ಲಿ ಕಾಂಗ್ರೆಸಿಗೆ ಮುಖಭಂಗ
ನವದೆಹಲಿ, ಡಿಸೆಂಬರ್ 15: ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಎರಡು ದಿನಗಳಿವೆ ಎಂದಾಗ ಕಾಂಗ್ರೆಸ್ ಪಕ್ಷ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು. ಕನಿಷ್ಠ ಶೇ. 25 ವಿವಿಪ್ಯಾಟ್ ಗಳ ಮತಗಳನ್ನು ಎಣಿಕೆ ಮಾಡಿ ಇವಿಎಂಗಳ ಜತೆ ತಾಳೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅದು ಕೋರಿತ್ತು.
ಆದರೆ ಕಾಂಗ್ರೆಸ್ ಅರ್ಜಿಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ. ನಿನ್ನೆಯಷ್ಟೇ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿಯವರ ಕೈಗೊಂಬೆ ಎಂದು ಟೀಕಿಸಿತ್ತು. ಮತ ಚಲಾಯಿಸಿದ ನಂತರ ಪ್ರಧಾನಿಗೆ ರೋಡ್ ಶೋ ಮಾಡಲು ಅನುಮತಿ ನೀಡಿದ್ದಕ್ಕೆ ಆಯೋಗವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತ್ತು.

ಇದಾದ ಬೆನ್ನಿಗೆ ಇಂದು ಕಾಂಗ್ರೆಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಕಾಂಗ್ರೆಸ್ ಅರ್ಜಿಯನ್ನು ಸುಪ್ರಿಂ ತಿರಸ್ಕರಿಸಿದೆ.
ಕಾಂಗ್ರೆಸ್ ಅರ್ಜಿಯಲ್ಲಿ ಯಾವುದೇ ಸತ್ವ ಇಲ್ಲ ಎಂದು ಪರಿಗಣಿಸಿದ ಸುಪ್ರಿಂ ಕೋರ್ಟ್, ಬೇಕಿದ್ದರೆ ಪಕ್ಷ ಚುನಾವಣಾ ಸುಧಾರಣೆಗಾಗಿ ಸುಪ್ರಿಂ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಚುನಾವಣಾ ಆಯೋಗದ ವಿಶೇಷ ಅಧಿಕಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಪಕ್ಷದ ಭಯವನ್ನು ತಗ್ಗಿಸಲು ಹಸ್ತಕ್ಷೇಪ ಸಾಧ್ಯವಿಲ್ಲ ಎಂದಿದೆ.












Click it and Unblock the Notifications