SBIನಲ್ಲಿ ಬರೋಬ್ಬರಿ 12,000 ನೇಮಕಾತಿ: ಶೀಘ್ರದಲ್ಲೇ 250 ಹೊಸ ಬ್ರಾಂಚ್ ಆರಂಭ, ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್
ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (FY27) ಒಟ್ಟು 12,000 ಹೊಸ ಉದ್ಯೋಗಿಗಳನ್ನ ನೇಮಿಸಿಕೊಳ್ಳಲು ಹಾಗೂ ದೇಶಾದ್ಯಂತ 250 ಹೊಸ ಶಾಖೆಗಳನ್ನ ತೆರೆಯಲು ಬ್ಯಾಂಕ್ ಸಿದ್ಧತೆ ನಡೆಸಿದೆ ಎಂದು ಎಸ್‌ಬಿಐ ಅಧ್ಯಕ್ಷರಾದ ಸಿ.ಎಸ್. ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
ಕ್ಲರಿಕಲ್ (ಗುಮಾಸ್ತ) ಮತ್ತು ಅಧಿಕಾರಿ (ಆಫೀಸರ್) ಕೇಡರ್‌ಗಳೆರಡರಲ್ಲೂ ಸೇರಿ ಈ ವರ್ಷ ಸುಮಾರು 11,000 ದಿಂದ 12,000 ನೇಮಕಾತಿಗಳನ್ನ ಮಾಡಲು ಎಸ್‌ಬಿಐ ಗುರಿ ಹೊಂದಿದೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಿ.ಎಸ್. ಶೆಟ್ಟಿ, "ನಿವೃತ್ತಿಯಾಗುತ್ತಿರುವ ನೌಕರರ ಸಂಖ್ಯೆ ಹಾಗೂ ಬ್ಯಾಂಕಿನ ಹೊಸ ಅಗತ್ಯಗಳ ಆಧಾರದ ಮೇಲೆ ಈ ನೇಮಕಾತಿ ಸಂಖ್ಯೆಯಲ್ಲಿ ಕೊಂಚ ಬದಲಾವಣೆಯಾಗಬಹುದು. ಆದರೆ, ಈ ವರ್ಷಾಂತ್ಯಕ್ಕೆ ಸುಮಾರು 12,000 ಹೊಸ ನೇಮಕಾತಿಗಳನ್ನ ಪೂರ್ಣಗೊಳಿಸುವ ನಿರೀಕ್ಷೆಯಿದೆ" ಎಂದು ಸಿ.ಎಸ್. ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ (2025-26) ದೊಡ್ಡ ಮಟ್ಟದ ನೇಮಕಾತಿಯನ್ನ ಮಾಡಿತ್ತು. ವಿಶೇಷವಾಗಿ 1,500 ಐಟಿ ಅಧಿಕಾರಿಗಳನ್ನ ನೇಮಿಸಿಕೊಂಡಿತ್ತು. ಆದರೆ, ಈ ವರ್ಷ ಐಟಿ ವಿಭಾಗದಲ್ಲಿ ಅಷ್ಟು ದೊಡ್ಡ ಮಟ್ಟದ ನೇಮಕಾತಿಯ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಾರ್ಚ್ 2026ರ ಅಂಕಿ-ಅಂಶಗಳ ಪ್ರಕಾರ, ಎಸ್‌ಬಿಐ 2.45 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನ ಹೊಂದಿದ್ದು, ಭಾರತದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆಗಳಲ್ಲಿ ಒಂದಾಗಿದೆ. ಬ್ಯಾಂಕ್‌ನ ವಾರ್ಷಿಕ ವರದಿಯ ಪ್ರಕಾರ 2025-26ನೇ ಸಾಲಿನಲ್ಲಿ 4,640 ಅಧಿಕಾರಿಗಳು, 19,340 ಅಸೋಸಿಯೇಟ್‌ಗಳು ಮತ್ತು 1,653 ಗುತ್ತಿಗೆ ಸಿಬ್ಬಂದಿ ಸೇರಿದಂತೆ ಒಟ್ಟು 25,633 ಜನರನ್ನ ನೇಮಿಸಿಕೊಳ್ಳಲಾಗಿತ್ತು.
ದೇಶಾದ್ಯಂತ 250 ಹೊಸ ಎಸ್‌ಬಿಐ ಶಾಖೆಗಳ ವಿಸ್ತರಣೆ
ಉದ್ಯೋಗಾವಕಾಶಗಳ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನ ಇನ್ನಷ್ಟು ವಿಸ್ತರಿಸಲು ಎಸ್‌ಬಿಐ ಮುಂದಾಗಿದೆ. ಪ್ರಸ್ತುತ ಎಸ್‌ಬಿಐ ದೇಶಾದ್ಯಂತ ಅತಿದೊಡ್ಡ ನೆಟ್‌ವರ್ಕ್ ಹೊಂದಿದ್ದರೂ, ಇನ್ನು ಹಲವು ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಕೊರತೆಯಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಬ್ಯಾಂಕ್‌ನ ಅಸ್ತಿತ್ವವನ್ನ ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಲವು ಹಳೆಯ ಶಾಖೆಗಳನ್ನ ಮರುಹೊಂದಾಣಿಕೆ ಮಾಡಿ, ನಿವ್ವಳವಾಗಿ ವರ್ಷಕ್ಕೆ 200 ರಿಂದ 250 ಹೊಸ ಶಾಖೆಗಳನ್ನ ತೆರೆಯಲು ಬ್ಯಾಂಕ್ ಯೋಜನೆ ರೂಪಿಸಿದೆ.
ಎನ್‌ಎಸ್‌ಇ ಐಪಿಒ ಮತ್ತು ಎಸ್‌ಬಿಐ ಪಾಲು ಮಾರಾಟ
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE)ನ ಉದ್ದೇಶಿತ 30,000 ಕೋಟಿ ರೂ.ಗಳ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಕುರಿತು ಮಾತನಾಡಿದ ಎಸ್‌ಬಿಐ ಅಧ್ಯಕ್ಷರು, ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅದರ ಅಂಗಸಂಸ್ಥೆ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಒಟ್ಟಾಗಿ ಶೇ. 1ರಷ್ಟು ಪಾಲನ್ನು ಮಾರಾಟ ಮಾಡಲು ಮುಂದಾಗಿವೆ ಎಂದು ತಿಳಿಸಿದ್ದಾರೆ.
ಎನ್‌ಎಸ್‌ಇಯಲ್ಲಿ ಎಸ್‌ಬಿಐ ಪ್ರಸ್ತುತ ಶೇ. 3.23ರಷ್ಟು ಪಾಲು ಹೊಂದಿದ್ದರೆ, ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಶೇ. 4.33ರಷ್ಟು ಪಾಲು ಹೊಂದಿದೆ. ಐಪಿಒ ಮೂಲಕ ಎಸ್‌ಬಿಐ ಶೇ. 0.65 ಮತ್ತು ಎಸ್‌ಬಿಐ ಕ್ಯಾಪಿಟಲ್ ಶೇ. 0.35ರಷ್ಟು ಪಾಲನ್ನ ಹಿಂತೆಗೆದುಕೊಳ್ಳಲು ನಿರ್ಧರಿಸಿವೆ. ಇದಲ್ಲದೆ, ಬ್ಯಾಂಕಿನ ಇತರ ಯಾವುದೇ ಅಂಗಸಂಸ್ಥೆಗಳ ಷೇರುಗಳನ್ನ ಸದ್ಯಕ್ಕೆ ನಗದೀಕರಿಸುವ ಯೋಜನೆ ಇಲ್ಲ ಎಂಬುದನ್ನು ಸಿ.ಎಸ್. ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಎನ್‌ಎಸ್‌ಇ ಬಹುನಿರೀಕ್ಷಿತ ಐಪಿಒಗೆ ನಿಯಂತ್ರಕ ಮಂಡಳಿಯಿಂದ ಅನುಮೋದನೆ ಪಡೆದುಕೊಂಡಿದ್ದು, ಇದು ಭಾರತದ ಅತಿ ದೊಡ್ಡ ಐಪಿಒ ಆಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಬ್ಯಾಂಕಿಂಗ್ ಕ್ಷೇತ್ರದ ದೈತ್ಯ ಎಸ್‌ಬಿಐನ ಈ ವಿಸ್ತರಣಾ ನಿರ್ಧಾರವು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.


Click it and Unblock the Notifications
