ಭಾರತೀಯರ ವಾರ್ಷಿಕ ಹಜ್ ಕೋಟಾ ಹೆಚ್ಚಳ

Posted By:
Subscribe to Oneindia Kannada

ನವದೆಹಲಿ, ಜನವರಿ 12: ಭಾರತದಿಂದ ಹಜ್ ಯಾತ್ರೆ ಕೈಗೊಳ್ಳುವ ಹಜ್ ಯಾತ್ರಿಕರಿಗೊಂದು ಸಿಹಿ ಸುದ್ದಿಯಿದೆ. ಸೌದಿ ಅರೇಬಿಯಾ ಸರ್ಕಾರದ ವತಿಯಿಂದ ನಿಗದಿಗೊಳಿಸಲಾಗಿದ್ದ ಭಾರತೀಯ ಹಜ್ ಯಾತ್ರಿಕರ ವಾರ್ಷಿಕ ಕೋಟಾವನ್ನು 1.36 ಲಕ್ಷದಿಂದ 1.70 ಲಕ್ಷಕ್ಕೆ ಏರಿಸಲಾಗಿದೆ. ಇದರಿಂದಾಗಿ, ಭಾರತದಿಂದ ಹಜ್ ಯಾತ್ರೆ ಕೈಗೊಳ್ಳಲು ಹೆಚ್ಚು ಜನರಿಗೆ ಅನುಕೂಲವಾಗಲಿದೆ.

ಜೆಡ್ಡಾದಲ್ಲಿ ಇತ್ತೀಚೆಗೆ, ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ ನಖ್ವಿ ಹಾಗೂ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವರಾದ ಡಾ. ಮೊಹಮ್ಮದ್ ಸಲೇಹ್ ಅವರು ಹಜ್ ಯಾತ್ರೆಯ ಕೋಟಾ ಹೆಚ್ಚಳಕ್ಕೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಅದರ ಫಲವಾಗಿ ಈಗ ಈ ಸೌಲಭ್ಯ ಹಜ್ ಯಾತ್ರಿಕರಿಗೆ ಲಭ್ಯವಾಗಿದೆ.

Saudi Arabia increases India's annual Haj quota from 1.36 lakh to 1.70 lakh

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಕ್ತಾರ್ ಅಬ್ಬಾಸ್ ನಖ್ವಿ, "ಕಳೆದ 29 ವರ್ಷಗಳಿಂದ ಇಲ್ಲಿಯವರೆಗೆ ಹೆಚ್ಚಿಸಲಾಗಿರುವ ಕೋಟಾಗಳಲ್ಲೇ ಇದು ಗರಿಷ್ಠ ಹೆಚ್ಚಳವಾಗಿದೆ. ಪ್ರಸಕ್ತ ವರ್ಷದಿಂದಲೇ ಇದು ಜಾರಿಗೆ ಬರಲಿದ್ದು, ಈ ಹೊಸ ಕೋಟಾದಿಂದ ವಾರ್ಷಿಕವಾಗಿ ಹೆಚ್ಚುವರಿ 34 ಸಾವಿರ ಜನರ ಹಜ್ ಯಾತ್ರೆಯ ಕನಸು ನನಸಾಗಲಿದೆ'' ಎಂದು ತಿಳಿಸಿದರು.

ಅನಿಸಿಕೆ...
ಜೀವಮಾನದಲ್ಲೊಮ್ಮೆ ಹಜ್ ಯಾತ್ರೆ ಕೈಗೊಳ್ಳಬೇಕೆಂಬುದು ಬಹು ಜನರ ಕನಸಾಗಿರುತ್ತದೆ. ಅದಕ್ಕಾಗಿ ಎಷ್ಟೋ ವರ್ಷಗಳಿಂದ ದುಡ್ಡು ಕೂಡಿಡು ವ ರೂಢಿ ಹಲವಾರು ಮುಸ್ಲಿಂ ಕುಟುಂಬದಲ್ಲಿರುತ್ತದೆ. ಆದರೆ, ಕೊನೆ ಕ್ಷಣದಲ್ಲಿ ಕೋಟಾ ಭರ್ತಿಯಾಗಿ ಹಲವರ ಕನಸು ಕೈಗೂಡದ ಸಂದರ್ಭಗಳೂ ಬಂದೊದಗುತ್ತಿದ್ದವು. ಈಗ, ಕೋಟಾ ಹೆಚ್ಚಳ ಮಾಡಿರುವುದು ಮತ್ತಷ್ಟು ಜನರಿಗೆ ಉಪಯೋಗವಾಗಲಿದೆ.
- ಸಾದಿಯಾ, ಅಂಕಣಗಾರ್ತಿ, ಬೆಂಗಳೂರು

ಆರ್ಥಿಕವಾಗಿ ಅನುಕೂಲವಿರುವ ಮುಸ್ಲಿಮರಿಗೆ ಜೀವಮಾನದಲ್ಲಿ ಒಮ್ಮೆ ಹಜ್ ಗೆ ಹೋಗಿ ಬರಬೇಕೆಂಬ ನಿಯಮವಿದೆ. ಆದರೆ, ಇಂತಿಷ್ಟೇ ಜನರು ಹೋಗಬೇಕೆಂಬ ನಿಯಮದಿಂದಾಗಿ ಹೆಚ್ಚಿನ ಜನರಿಗೆ ಅದು ಸಾಧ್ಯವಾಗುವುದಿಲ್ಲ. ಇದೀಗ ಕೋಟಾ ಹೆಚ್ಚಿಸಿರುವುದು ಅನೇಕರಿಗೆ ಅದರಲ್ಲೂ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲ ನೀಡಲಿದೆ.
- ರಹಮಾನ್, ಬಳ್ಳಾರಿ

ಕೋಟಾ ಹೆಚ್ಚಳವು ಹೆಚ್ಚು ಜನರ ಹಜ್ ಯಾತ್ರೆಯ ಕನಸನ್ನು ಸಾಕಾರಗೊಳಿಸಲಿದೆ. ಬಕ್ರೀದ್ ಗೂ ಮುನ್ನ ಅಲ್ಲಿಗೆ ಹೋಗಬೇಕೆಂಬ ಅಭಿಲಾಷೆ ಹಲವಾರು ಭಕ್ತರಲ್ಲಿರುತ್ತದೆ. ಈಗ ಕೋಟಾ ಹೆಚ್ಚಳವು ಹಲವರಿಗೆ ವರದಾನವಾಗಲಿದೆ.
- ರಿಸ್ವಾನಾ, ಉಪನ್ಯಾಸಕಿ, ಬೆಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a pleasant development for Haj pilgrims, the government of Saudi Arabia has increased India's annual Haj quota from 1.36 lakh to 1.70 lakh.
Please Wait while comments are loading...