Satya Pal Malik: 'ಸತ್ಯಪಾಲ್ ಮಲಿಕ್ ಅವರನ್ನು ಬಂಧಿಸಲಾಗಿಲ್ಲ' ದೆಹಲಿ ಪೊಲೀಸರ ಸ್ಪಷ್ಟನೆ
ನವದೆಹಲಿ ಏಪ್ರಿಲ್ 22: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಬಂಧಿಸಲಾಗಿಲ್ಲ ಎಂದು ದೆಹಲಿ ಪೊಲೀಸರ ಸ್ಪಷ್ಟನೆ ನೀಡಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಸಮನ್ಸ್ ಸ್ವೀಕರಿಸಿದ ನಂತರ ಸತ್ಯಪಾಲ್ ಮಲಿಕ್ ಅವರು ದೆಹಲಿಯ ಆರ್‌ಕೆ ಪುರಂನಲ್ಲಿರುವ ಪೊಲೀಸ್ ಠಾಣೆಗೆ ಇಂದು ಭೇಟಿ ನೀಡಿದರು.

ಈ ವೇಳೆ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿಗಳು ಕೇಳಿ ಬಂದ್ದಿದ್ದವು. ಆದರೆ ಅವರನ್ನು ಬಂಧಿಸಲಾಗಿದೆ ಎಂಬ ವರದಿಗಳನ್ನು ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ. ಸತ್ಯಪಾಲ್ ಮಲಿಕ್ ತಮ್ಮ ಸ್ವಂತ ಇಚ್ಛೆಯಿಂದ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
"ನಾವು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಬಂಧಿಸಿಲ್ಲ, ಅವರು ತಮ್ಮ ಬೆಂಬಲಿಗರೊಂದಿಗೆ ಆರ್‌ಕೆ ಪುರಂ ಪೊಲೀಸ್ ಠಾಣೆಗೆ ಸ್ವಯಂ ಪ್ರೇರಿತರಾಗಿ ಬಂದಿದ್ದರು ಮತ್ತು ಅವರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಹೋಗಬಹುದು ಎಂದು ನಾವು ಅವರಿಗೆ ತಿಳಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಮೂಲಗಳ ಪ್ರಕಾರ, ತನ್ನ ಮನೆಯ ಸಮೀಪವಿರುವ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಸಭೆಗೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರ ಬಗ್ಗೆ ಮಾತನಾಡಲು ಮಲಿಕ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಜನವಸತಿ ಪ್ರದೇಶದಲ್ಲಿ ಅನುಮತಿ ಇಲ್ಲದೆ ಯಾವುದೇ ಸಭೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಅವರಿಗೆ ತಳಿಸಿದ್ದಾರೆ.

ಇದರಿಂದಾಗಿ ಸಭೆಗೆ ಬಂದಿದ್ದ ಸತ್ಯಪಾಲ್ ಮಲಿಕ್ ಮತ್ತು ರೈತ ಗುಂಪುಗಳು ಹಾಗೂ ಗ್ರಾಮ ಸಂಸ್ಥೆಗಳ ಮುಖಂಡರು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆದರೆ ಘಟನೆ ಬಳಿಕ ಮಲಿಕ್ ಅವರು ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಬಸ್‌ನಲ್ಲಿದ್ದ ನಾಯಕರು ಮಲಿಕ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಪೊಲೀಸ್ ಠಾಣೆಯಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ಈಗ ನಮ್ಮನ್ನು ಬಂಧಿಸುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಿಲಯನ್ಸ್ ಜನರಲ್ ಇನ್ಶೂರೆನ್ಸ್‌ನಿಂದ ಆಪಾದಿತ ಭ್ರಷ್ಟಾಚಾರ ಪ್ರಕರಣದಲ್ಲಿ ಸಾಕ್ಷಿಯಾಗಿ ಏಪ್ರಿಲ್ 28 ರಂದು ರಾಜ್ಯಪಾಲರನ್ನು ಸಿಬಿಐ ವಿಚಾರಣೆಗೆ ಕರೆದ ಒಂದು ದಿನದ ನಂತರ ಈ ಬೆಳವಣಿಗೆಗಳು ನಡೆದಿವೆ. ಕೇಂದ್ರ ದೆಹಲಿಯಲ್ಲಿರುವ ಏಜೆನ್ಸಿಯ ಅಕ್ಬರ್ ರೋಡ್ ಅತಿಥಿ ಗೃಹದಲ್ಲಿ "ಕೆಲವು ಸ್ಪಷ್ಟೀಕರಣಗಳಿಗಾಗಿ" ಅವರ ಉಪಸ್ಥಿತಿಯನ್ನು ಸಿಬಿಐ ಕೇಳಿದೆ ಎಂದು ಮಲಿಕ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಮಲಿಕ್ ಅವರು 2018 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದಾಗ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಡೆತನದ ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ್ದರು. ಮಲಿಕ್ ಅವರು ವಿಮಾ ಯೋಜನೆಯಲ್ಲಿ ಅಂಬಾನಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆ ನಂತರ ಸಿಬಿಐ ಕ್ರಮ ತೆಗೆದುಕೊಂಡಿದೆ.












Click it and Unblock the Notifications