ಸನಾತನ ಧರ್ಮ; ವಿವಾದ ಹುಟ್ಟುಹಾಕಿದ ಉದಯನಿಧಿ ಸ್ಟಾಲಿನ್ ಹೇಳಿಕೆ
ಚೆನ್ನೈ, ಸೆಪ್ಟೆಂಬರ್ 03; ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆಗಳು ಸಹ ಆರಂಭವಾಗಿವೆ.
ಶನಿವಾರ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ 'ಸನಾತನ ನಿರ್ಮೂಲನಾ ಸಮಾವೇಶ'ದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪುತ್ರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, "ಈ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ಸನಾತನ ವಿರೋಧಿ ಸಮ್ಮೇಳನ ಎಂಬುದಾಗಿ ಆಯೋಜಿಸುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನ ಎಂದು ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು" ಎಂದು ಹೇಳಿದರು.
ಸನಾತನ ಧರ್ಮ ನಿರ್ಮೂಲನೆ; ಉದಯನಿಧಿ ಸ್ಟಾಲಿನ್, "ನಾವು ಕೆಲವು ವಿಷಯಗಳನ್ನು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗ್ಯು, ಮಲೇರಿಯಾ ಅಥವ ಕೋವಿಡ್ ಸೋಂಕನ್ನು ವಿರೋಧಿಸಬಾರದು, ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸಬಾರದು, ಬದಲು ನಿರ್ಮೂಲನೆ ಮಾಡಬೇಕು" ಎಂದರು. ಈ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಉದಯನಿಧಿ ಸ್ಟಾಲಿನ್ ಸಮಾವೇಶದಲ್ಲಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿದೆ. ಹಲವಾರು ಜನರು ಇದನ್ನು ವಿರೋಧಿಸಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.
ಬಿಜೆಪಿಯ ಆಕ್ರೋಶ; ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
'ಉದಯನಿಧಿ ಸ್ಟಾಲಿನ್ ಅವರ ಅಭಿಪ್ರಾಯವನ್ನು ವಿರೋಧಿಸುವ ಬದಲು ಅಭಿಪ್ರಾಯವನ್ನೇ ನಿರ್ಮೂಲನೆ ಮಾಡಬೇಕು. ಅವರು ಸನಾತನ ಧರ್ಮವನ್ನು ಅನುಸರಿಸುವ ದೇಶದ ಶೇ 80ರಷ್ಟು ಜನರ ಹತ್ಯೆಗೆ ಕರೆ ನೀಡಿದ್ದಾರೆ' ಎಂದು ಹೇಳಿದ್ದಾರೆ.
ತಮ್ಮ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. "ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಕಾನೂನು ಹೋರಾಟ ಸೇರಿದಂತೆ ಯಾವುದೇ ಹೋರಾಟಕ್ಕೂ ನಾನು ಸಿದ್ಧ" ಎಂದು ಅವರು ಟ್ವೀಟ್ ಮಾಡಿದ್ದಾರೆ.
"ಯಾವ ಬೆದರಿಕೆಗಳಿಗೂ ನಾನು ಹೆದರುವುದಿಲ್ಲ. ಪೆರಿಯಾರ್, ಅಣ್ಣಾ ಮತ್ತು ಕಲೈನಾರ್ ಅವರ ಅನುಯಾಯಿಗಳಾದ ನಾವು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಹಾಗೂ ತಂದೆ ಎಂ. ಕೆ. ಸ್ಟಾಲಿನ್ ಅವರ ಮಾರ್ಗದರ್ಶನದಲ್ಲಿ ಸಮಾನತೆಯ ಸಮಾಜವನ್ನು ಸ್ಥಾಪಿಸಲು ಹೋರಾಡುತ್ತೇವೆ" ಎಂದು ತಿಳಿಸಿದ್ದಾರೆ.
'ಈ ದ್ರಾವಿಡ ನೆಲದಿಂದ ಸನಾತನ ಧರ್ಮ ನಿರ್ಮೂಲನೆ ಮಾಡುವ ಸಂಕಲ್ಪ ಸ್ವಲ್ಪವೂ ಕಡಿಮೆಯಾಗುವುದಿಲ್ಲ' ಎಂದು ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ರಾಜ್ಯದ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರು. ಅವರು ಸಿನಿಮಾ ನಟರು ಸಹ ಆಗಿದ್ದಾರೆ.
ಯತ್ನಾಳ್ ಟ್ವೀಟ್; ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದು, 'ಸನಾತನ ಧರ್ಮ ಮಲೇರಿಯ, ಡೆಂಗೆ ಇದ್ದಂತೆ..ಇದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿರುವ ತಮಿಳು ನಾಡಿನ ಕ್ರೀಡಾ ಸಚಿವರಾದ ಉದಯನಿಧಿ ಸ್ಟಾಲಿನ್ ಅವರ ತುಚ್ಚ, ಅನಾದರ, ಪ್ರಚೋದನಕಾರಿ ಹೇಳಿಕೆ ಖಂಡನೀಯ. ತಮಿಳು ನಾಡು ಸಂತರು, ಗುರುಗಳು, ಸಾಹಿತ್ಯ ಸಾಧಕರ ತವರೂರು. ರಮಣ ಮಹರ್ಷಿಗಳು, ಕಂಚಿ ಪೆರಿಯವ, ಅಲ್ವಾರ್, ನಯಾನ್ಮಾರ್ ಅವರು ಬದುಕಿ ಬಾಳಿ ಸಂಸ್ಕೃತಿಯನ್ನು, ಪರಂಪರೆಯನ್ನು, ಸನಾತನ ಧರ್ಮವನ್ನು ಶ್ರೀಮಂತಗೊಳಿಸಿದ ದೈವ ಭೂಮಿ. ಇಂತಹ ಪವಿತ್ರ ನೆಲದಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುತ್ತೇನೆ ಎಂದು ಹೇಳುವುದು ಡಿ.ಎಂ.ಕೆ ಪಕ್ಷದ ರೋಗಗ್ರಸ್ಥ ಮನಸ್ಥಿತಿಯ ಪರಾಕಾಷ್ಠೆ' ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications