Tandoori Roti Ban: ಈ ನಗರದಲ್ಲಿ ಇನ್ಮುಂದೆ ತಂದೂರಿ ರೋಟಿ ಮಾರಾಟಕ್ಕೆ ಬ್ರೇಕ್!
Tandoori Roti Ban: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಆಹಾರ ಪದಾರ್ಥಗಳು ಹಾಗೂ ಆಹಾರ ಪದಾರ್ಥಗಳಿಗೆ ಸೇರಿಸುವ ಬಣ್ಣವನ್ನು ನಿಷೇಧಿಸಲಾಗಿದೆ. ಇದೀಗ ದೇಶದ ಪ್ರಮುಖ ನಗರದಲ್ಲಿ ತಂದೂರಿ ರೋಟಿ ಮಾರಾಟವನ್ನು ಹಾಗೂ ತಂದೂರಿ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಮಾಡಲಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆಯು ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಆಹಾರ ಪದಾರ್ಥಗಳನ್ನು ನಿಷೇಧ ಮಾಡಿದೆ. ಆದರೆ ಈಗ ತಂದೂರಿ ನಿಷೇಧ ಮಾಡಿರುವ ದೆಹಲಿ ಸರ್ಕಾರವು ಬೇರೆಯ ಕಾರಣವನ್ನೇ ನೀಡಿದೆ.

ದೆಹಲಿ ಸೇರಿದಂತೆ ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂದೂರಿ ರೋಟಿ ಮಾರಾಟ / ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ದೆಹಲಿ - ಎನ್‌ಸಿಆರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಯುಮಾಲಿನ್ಯ ಪ್ರಮಾಣವು ವಿಪರೀತವಾಗಿದ್ದು. ವಾಯುಮಾಲಿನ್ಯ ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಂದೂರಿ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಮಟ್ಟವನ್ನು ತಡೆಯಲು ದೆಹಲಿ ಸರ್ಕಾರವು ನಗರದಲ್ಲಿ ಕಟ್ಟಿಗೆ (ಮರದ ತುಂಡು) ಮತ್ತು ಡ್ರಮ್ ಮಾದರಿ ಬಳಸಿ ತಯಾರಿಸುವ ತಂದೂರ್ ರೋಟಿ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಕಟ್ಟಿಗೆ ಬಳಸಿ ರೋಟಿ ಸುಡುವಿಕೆಯನ್ನು ನಿಷೇಧಿಸಿ ದೆಹಲಿ ಬಿಜೆಪಿ ಸರ್ಕಾರ ಆದೇಶ ಮಾಡಿದೆ.
ದೇಶದ ಇತಿಹಾಸದಲ್ಲೇ ದೆಹಲಿ ವಾಯುಮಾಲಿನ್ಯವು ವಿಪರೀತ ಮಟ್ಟವನ್ನು ತಲುಪಿದೆ. ವಾಯು ಮಾಲಿನ್ಯದ ಮಟ್ಟ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಕಟ್ಟಿಗೆ ಮತ್ತು ಉರುವಲು ತಂದೂರಿ ರೋಟಿಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಢಾಬಾಗಳು ಮತ್ತು ಬೀದಿ ಬದಿಯ ಫುಡ್‌ಕೌಂಟರ್‌ಗಳಲ್ಲಿ ಕಸ ಸೇರಿದಂತೆ ಯಾವುದೇ ರೀತಿಯ ತೆರೆದ ಸುಡುವಿಕೆಯನ್ನು ನಿಷೇಧಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1981ರ ಅನ್ವಯ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ಮಾದರಿಯ ತಂದೂರಿ ರೋಟಿ ತಿನಿಸುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿದ್ಯುತ್ ಅಥವಾ ಅನಿಲ ಆಧಾರಿತ ತಂದೂರ್ ತಯಾರಿಕೆಗೆ ಬದಲಾಯಿಸುವಂತೆ ಆದೇಶದಲ್ಲಿ ದೆಹಲಿ ಬಿಜೆಪಿ ಸರ್ಕಾರ ಉಲ್ಲೇಖಿಸಿದೆ. ಹೆಚ್ಚಿನ ವಾಯು ಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡಲು GRAP ಕ್ರಮಗಳ ಭಾಗವಾಗಿ ನಿರ್ಬಂಧವನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ನಗರದಾದ್ಯಂತ ಕಟ್ಟಿಗೆ ಸುಡುವಿಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದ್ದು. ಈ ಹೊಸ ನಿಯಮವನ್ನು ಉಲ್ಲಂಘಿಸುವವರಿಗೆ 5,000 ರೂ.ಗಳವರೆಗೆ ದಂಡ ವಿಧಿಸಲು ಜಿಲ್ಲಾಡಳಿತಗಳು ಮತ್ತು ಸ್ಥಳೀಯ ಪಾಲಿಕೆಗಳಿಗೆ ಅಧಿಕಾರ ನೀಡಿದ್ದಾರೆ.
ಎಲ್ಲಾ ನಾಗರಿಕರು ತ್ಯಾಜ್ಯವನ್ನು ಸುಡದಂತೆ ನಾವು ವಿನಮ್ರವಾಗಿ ವಿನಂತಿಸುತ್ತೇವೆ. ನಿಮ್ಮ ಸಣ್ಣ ಸಹಕಾರವು ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು, ಸ್ಥಳೀಯ ಮಾಲಿನ್ಯ ಮೂಲಗಳನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಣಯಗಳನ್ನು ತೆಗೆದುಕೊಂಡಿರುವುದಾಗಿ ಹೇಳಲಾಗಿದೆ.












Click it and Unblock the Notifications