Sadhguru Health Update: ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಹೇಗಿದ್ದಾರೆ ಸದ್ಗುರು, ನೀವೇ ನೋಡಿ
ನವದೆಹಲಿ, ಮಾರ್ಚ್ . 26: ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಖುದ್ದು ತಾವೇ ದಿನಪತ್ರಿಕೆ ಓದುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಇಶಾ ಫೌಂಡೇಶನ್ ಕಳೆದ ವಾರ ಘೋಷಿಸಿತು. ಸೋಮವಾರ, ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸದ್ಗುರು ಪತ್ರಿಕೆಯನ್ನು ಓದುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಸದ್ಗುರು ಜಗ್ಗಿ ವಾಸುದೇವ್ ತನ್ನ ಬಲಗೈಯ ಡಾರ್ಸಲ್ ಭಾಗದಲ್ಲಿ ಇಂಟ್ರಾವೆನಸ್ ಡ್ರಿಪ್‌ಗಳನ್ನು ಹಾಕಿದ್ದರೂ ದಿನಪತ್ರಿಕೆಯ ಪುಟಗಳನ್ನು ತಿರುಗಿಸುತ್ತಾ ಓದುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಆಗಿರುವ ಅವರ ತಲೆಯ ಮೇಲೆ ಬ್ಯಾಂಡೇಜ್‌ಗಳನ್ನು ಹಾಕಿರುವುದು ಕೂಡ ಕಾಣಿಸುತ್ತಿದೆ.
ಹಿನ್ನೆಲೆಯಲ್ಲಿ ಸಂಗೀತ ಪ್ಲೇ ಆಗುವ 19 ಸೆಕೆಂಡುಗಳ ವೀಡಿಯೊವನ್ನು #SpeedyRecovery ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಲಾಗಿದೆ. ಮಾರ್ಚ್ 15 ರಂದು ಜಗ್ಗಿ ವಾಸುದೇವ್‌ಗೆ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದ್ದು, ಮೆದುಳಿನಲ್ಲಿ ಭಾರೀ ರಕ್ತಸ್ರಾವ ಕಂಡುಬಂದಿದೆ ಎಂದು ಇಶಾ ಫೌಂಡೇಶನ್ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ನಂತರ, ಅವರು ಮಾರ್ಚ್ 17 ರಂದು ನವದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
#Sadhguru #SpeedyRecovery pic.twitter.com/rTiyhYPiJM
— Sadhguru (@SadhguruJV) March 25, 2024
ಮಾರ್ಚ್ 20 ರಂದು, ಸದ್ಗುರುಗಳನ್ನು ಪರೀಕ್ಷಿಸಿದ ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞ ಡಾ ವಿನಿತ್ ಸೂರಿ ಅವರು ಆಧ್ಯಾತ್ಮಿಕ ಗುರುಗಳ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದರು. "ಕಳೆದ ನಾಲ್ಕು ವಾರಗಳಿಂದ ತಲೆನೋವಿನಿಂದ ಬಳಲುತ್ತಿದ್ದರು, ತಲೆನೋವು ತುಂಬಾ ತೀವ್ರವಾಗಿತ್ತು. ಅವರು ಸಾಮಾನ್ಯ ಚಟುವಟಿಕೆಗಳನ್ನು ಮಾಡಬೇಕಾಗಿರುವುದರಿಂದ ಅದನ್ನು ನಿರ್ಲಕ್ಷಿಸುತ್ತಿದ್ದರು" ಎಂದಿದ್ದಾರೆ.

"ನೋವಿನಲ್ಲಿಯೇ ಮಾರ್ಚ್ 8 ರಂದು ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ನಡೆಸಿದ್ದಾರೆ. ಮಾರ್ಚ್ 15 ರಂದು ನೋವು ಹೆಚ್ಚಾಗಿದೆ. ಬಳಿಕ ನನ್ನ ಜೊತೆಗೆ ಮಾತನಾಡಿದರು. ಸಂಜೆ 4 ಗಂಟೆಗೆ ನಾನು ಅವರಿಗೆ ಎಂಆರ್ಐಗೆ ಸಲಹೆ ನೀಡಿದ್ದೆ, ಆದರೆ ಸಂಜೆ 6 ಗಂಟೆಗೆ ಅವರ ಮೀಟಿಂಗ್ ಇತ್ತು. ನಂತರ ಎಂಆರ್ಐ ಮಾಡಲಾಯಿತು. ಎಂಆರ್‌ಐನಲ್ಲಿ ಅವರಿಗೆ ಮೆದುಳಿನಲ್ಲಿ ಭಾರೀ ರಕ್ತಸ್ರಾವವಾಗಿದೆ ಎಂದು ಗೊತ್ತಾಯಿತು. ಎರಡು ಬಾರಿ ಭಾರೀ ರಕ್ತಸ್ರಾವ ಸಂಭವಿಸಿದೆ" ಎಂದು ಹೇಳಿದ್ದರು.
ಡಾ ವಿನಿತ್ ಸೂರಿ, ಡಾ ಪ್ರಣವ್ ಕುಮಾರ್, ಡಾ ಸುಧೀರ್ ತ್ಯಾಗಿ ಮತ್ತು ಡಾ ಎಸ್ ಚಟರ್ಜಿ ಅವರನ್ನೊಳಗೊಂಡ ವೈದ್ಯರ ತಂಡವು ಜಗ್ಗಿ ವಾಸುದೇವ್ ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆಯ ನಂತರ ಸದ್ಗುರುಗಳನ್ನು ವೆಂಟಿಲೇಟರ್‌ನಿಂದ ಹೊರತರಲಾಯಿತು.












Click it and Unblock the Notifications