10 ಸ್ವಸಹಾಯ ಗುಂಪುಗಳಿಗೆ ತಲಾ 5 ಲಕ್ಷ ರೂ. ಘೋಷಿಸಿದ ಉತ್ತರಾಖಂಡ ಸಿಎಂ
ಡೆಹ್ರಾಡೂನ್, ಡಿಸೆಂಬರ್ 06: ಹತ್ತು ಸ್ವಸಹಾಯ ಗುಂಪುಗಳಿಗೆ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸ್ವರೋಜ್‌ಗಾರ್ ಯೋಜನೆ ಹಾಗೂ ದೀನ್ ದಯಾಳ್ ಉಪಾಧ್ಯಾಯ ಯೋಜನೆ ಅಡಿಯಲ್ಲಿ 10 ಸ್ವಸಹಾಯ ಗುಂಪುಗಳಿಗೆ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಭಾನುವಾರದಂದು ಉತ್ತರಾಖಂಡದ ಖತೀಮಾ ನಗರದಲ್ಲಿ ಸಹಕಾರಿ ಗುಂಪು ಸಾಲದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಘೋಷಣೆಯನ್ನು ಮಾಡಿದ್ದಾರೆ. ಉತ್ತರಾಖಂಡದಲ್ಲಿಯೂ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಿಂದಾಗಿ ಮುಖ್ಯಮಂತ್ರಿಗಳ ಈ ಘೋಷಣೆಯು ಮಹತ್ವವನ್ನು ಪಡೆದಿದೆ.
"ಸ್ವಸಹಾಯ ಗುಂಪುಗಳು ಸ್ವಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು 119 ಕೋಟಿ ರೂಪಾಯಿಯ ಪ್ಯಾಕೆಜ್ ಅನ್ನು ಕೂಡಾ ಘೋಷಣೆ ಮಾಡಿದೆ. ಯಾವುದೇ ಬಡ್ಡಿ ದರ ಇಲ್ಲದೆಯೇ ಐದು ಲಕ್ಷದವರೆಗೆ ಸಾಲವನ್ನು ಕೂಡಾ ನೀಡಲಾಗುತ್ತದೆ," ಎಂದು ಹೇಳಿದ್ದಾರೆ. "ಆರು ತಿಂಗಳವರೆಗೆ ರಾಜ್ಯ ಸರ್ಕಾರವು ಸಾಲದ ಮೇಲೆ ಬಡ್ಡಿ ದರವನ್ನು ಮರುಪಾವತಿ ಮಾಡಲಿದೆ. ಸಮಾಜದ ಎಲ್ಲಾ ವರ್ಗವನ್ನು ಗಮನದಲ್ಲಿ ಇರಿಸಿಕೊಂಡು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ," ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು.

ಉತ್ತರಾಖಂಡದಲ್ಲಿ ಪುಷ್ಕರ್ ಸಿಂಗ್ ಧಾಮಿ, ಕಾಶಿಪುರದ ಉದಮ್ ಸಿಂಗ್ ನಗರ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಭಾನುವಾರ ಉದ್ಘಾಟನೆ ಮಾಡಿದ ಯೋಜನೆಗಳಿಗಾಗಿ ಸುಮಾರು 137 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. "ಉತ್ತರಾಖಂಡವನ್ನು ದೇಶದಲ್ಲಿ ಉತ್ತಮ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ. ನಿನ್ನೆಯಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಡೆಹ್ರಾಡೂನ್‌ಗೆ ಭೇಟಿ ನೀಡಿ ಸುಮಾರು 18,000 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ," ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿವರಿಸಿದ್ದಾರೆ.
ರಾಜ್ಯದಲ್ಲಿ ದಿನಕ್ಕೆ 25 ಸಾವಿರ ಮಂದಿಯ ಕೋವಿಡ್ ಟೆಸ್ಟ್ ಗುರಿ
"ದೇಶದಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿರುವ ಹಿನ್ನೆಲೆಯಿಂದಾಗಿ ರಾಜ್ಯ ಸರ್ಕಾರವು ಕೂಡಾ ಸಂಪೂರ್ಣವಾಗಿ ಎಚ್ಚೆತ್ತುಕೊಂಡಿದೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರವು ರ್‍ಯಾಡಮ್ ಟೆಸ್ಟಿಂಗ್ ಅನ್ನು ಆರಂಭ ಮಾಡಿದೆ. ದಿನಕ್ಕೆ 25 ಸಾವಿರ ಮಂದಿಯ ಕೋವಿಡ್ ಟೆಸ್ಟ್ ಗುರಿಯನ್ನು ಸರ್ಕಾರ ಹೊಂದಿದೆ. ಜನರಲ್ಲೂ ಕೂಡಾ ಜಾಗೃತಿ ಮೂಡಿಸಲಾಗುತ್ತಿದೆ," ಎಂದು ತಿಳಿಸಿದರು.
ಉತ್ತರಾಖಂಡ ವಿಧಾನಸಭೆ ಚುನಾವಣೆ
ಉತ್ತರಾಖಂಡದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಪ್ರಸ್ತುತ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರವಿದೆ. ಬಿಜೆಪಿ ಆಡಳಿತವನ್ನು ತನ್ನ ಕೈಗೆ ಪಡೆದ ಬಳಿಕ ಇಲ್ಲಿ ಎರಡು ಬಾರಿ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಬಿಜೆಪಿಯ ಆಂತರಿಕ ರಾಜಕೀಯದ ಕಾರಣದಿಂದಾಗಿ ಎರಡೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದಾರೆ. 2021 ರ ಮಾರ್ಚ್‌ನಲ್ಲಿ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಧ್ವನಿಗಳು ಕೇಳಿ ಬಂದ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದರು. ಆ ಬಳಿಕ ತೀರತ್ ಸಿಂಗ್ ರಾವತ್ ಉತ್ತರಾಖಂಡದ ಮುಖ್ಯಮಂತ್ರಿ ಕುರ್ಚಿಗೆ ಏರಿದರು. ಆದರೆ ಬಳಿಕ ತೀರತ್ ಸಿಂಗ್ ರಾವತ್ ಕೂಡಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕಾರಣದಿಂದಾಗಿ ಬಳಿಕ ಈ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ ಮುಖ್ಯಮಂತ್ರಿ ಆಗಿದ್ದಾರೆ. ಹಾಗೆಯೇ 45 ವರ್ಷ ಪ್ರಾಯದ ಪುಷ್ಕರ್ ಸಿಂಗ್ ಧಾಮಿ ಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಬಿಜೆಪಿಯು ಕಳೆದ 2017 ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದ ಒಟ್ಟು 70 ವಿಧಾನಸಭೆ ಕ್ಷೇತ್ರದಲ್ಲಿ 57 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ವಿಜಯ ಪತಾಕೆಯನ್ನು ಉತ್ತರಾಖಂಡದಲ್ಲಿ ಹಾರಿಸಿದೆ. ಶೇಕಡ 47 ಮತವನ್ನು ಬಿಜೆಪಿಯು ಪಡೆದಿದೆ. ಳೆದ ಚುನಾವಣೆಯಲ್ಲಿ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಶೇಕಡ 34 ರಷ್ಟು ಮತವನ್ನು ಗಳಿಸಿದೆ. ಇನ್ನು ಇಲ್ಲಿ ಅರವಿಂದ್ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷವೂ ಕೂಡಾ ಗೆಲುವು ಸಾಧಿಸಿದೆ.












Click it and Unblock the Notifications