Aryan Khan Case: ನಟ ಶಾರುಖ್ ಖಾನ್ ಕುಟುಂಬಕ್ಕೆ 25 ಕೋಟಿ ರೂ. ಬೇಡಿಕೆಯಿಟ್ಟಿದ್ದ ಸಮೀರ್ ವಾಂಖೆಡೆ!
ಮುಂಬೈ, ಮೇ. 15: 25 ಕೋಟಿ ರೂಪಾಯಿ ನೀಡದಿದ್ದಲ್ಲಿ ಅವರ ಪುತ್ರ ಆರ್ಯನ್ ಅವರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಸುವುದಾಗಿ ನಟ ಶಾರುಖ್ ಖಾನ್ ಅವರ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಅಕ್ಟೋಬರ್ 2021 ರಲ್ಲಿ ಮುಂಬೈನ ಕ್ರೂಸ್ ಹಡಗಿನಲ್ಲಿ ಮಾದಕವಸ್ತು ದಂಧೆಯಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಂಧಿಸಿದ ನಂತರ ಹೆಚ್ಚು ಸುದ್ದಿಯಾದ ಸಮೀರ್ ವಾಂಖೆಡೆ ಮೇಲೆ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ದುರ್ನಡತೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಅಧಿಕಾರಿಯ ವಿದೇಶಿ ಪ್ರವಾಸಗಳು ಮತ್ತು ದುಬಾರಿ ಕೈಗಡಿಯಾರಗಳ ಖರೀದಿಯನ್ನು ಉಲ್ಲೇಖಿಸಿದೆ.

ಸಮೀರ್ ವಾಂಖೆಡೆ ಮತ್ತು ಎನ್‌ಸಿಬಿಯ ಗುಪ್ತಚರ ಅಧಿಕಾರಿ ಆಶಿಶ್ ರಂಜನ್ ವಿರುದ್ಧದ ಆರೋಪಗಳ ವಿಚಾರಣೆಗಳಲ್ಲಿ, "ತಮ್ಮ ಘೋಷಿತ ಆದಾಯದ ಪ್ರಕಾರ ತನಿಖಾ ಸಂಸ್ಥೆಗಳು ಸ್ವಾಧೀನಪಡಿಸಿಕೊಂಡ ಆಸ್ತಿಯನ್ನು ಸಮರ್ಥಿಸಲು ಸಾಧ್ಯವಾಗಲಿಲ್ಲ" ಎಂದು ಎಫ್‌ಐಆರ್ ಹೇಳುತ್ತದೆ. ಸಮೀರ್ ವಾಂಖೆಡೆ ತಮ್ಮ ವಿದೇಶಿ ಭೇಟಿಗಳನ್ನು ಸರಿಯಾಗಿ ವಿವರಿಸಿಲ್ಲ. ಜೊತೆಗೆ ಅವರ ವಿದೇಶಿ ಪ್ರಯಾಣದ ವೆಚ್ಚವನ್ನು ತಪ್ಪಾಗಿ ಘೋಷಿಸಿದ್ದಾರೆ" ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಎಫ್‌ಐಆರ್‌ನಲ್ಲಿ ಸಮೀರ್ ವಾಂಖೆಡೆ ಹೊರತುಪಡಿಸಿ ಇನ್ನು ನಾಲ್ವರು ಆರೋಪಿಗಳನ್ನು ಹೆಸರಿಸಿದೆ. ಇವರಲ್ಲಿ ಎನ್‌ಸಿಬಿಯ ಹಿರಿಯ ಅಧಿಕಾರಿಗಳಾದ ವಿಶ್ವ ವಿಜಯ್ ಸಿಂಗ್ ಮತ್ತು ಆಶಿಶ್ ರಂಜನ್ ಮತ್ತು ಕೆಪಿ ಗೋಸಾವಿ ಮತ್ತು ಅವರ ಸಹಾಯಕ ಸಾನ್ವಿಲ್ ಡಿಸೋಜಾ ಸೇರಿದ್ದಾರೆ.
ಕೆಪಿ ಗೋಸಾವಿ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ. ಆದರೆ, ಆರ್ಯನ್ ಖಾನ್ ಬಂಧನದ ನಂತರ ಅವರೊಂದಿಗೆ ಅವರ ಸೆಲ್ಫಿ ತೆಗೆದುಕೊಂಡು ವಿವಾದಕ್ಕೆ ಒಳಗಾಗಿದ್ದರು. ಎನ್‌ಸಿಬಿಯಲ್ಲಿ ಕೆಲಸ ಮಾಡದ ಒಬ್ಬ ವ್ಯಕ್ತಿಗೆ ಆರೋಪಿಗಳ ಜೊತೆಗೆ ಮಾತನಾಡಲು ಹೇಗೆ ಅನುಮತಿಸಲಾಗಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಸಿಬಿಐನ ಎಫ್‌ಐಆರ್‌ನಲ್ಲಿ "ಮಾದಕ ಪದಾರ್ಥಗಳನ್ನು ಹೊಂದಿದ್ದ ಆರೋಪದಲ್ಲಿ ಆಪಾದಿತ 'ಆರೋಪಿ' ಆರ್ಯನ್ ಖಾನ್‌ನ ಕುಟುಂಬ ಸದಸ್ಯರಿಗೆ ಬೆದರಿಕೆಯೊಡ್ಡುವ ಮೂಲಕ 25 ಕೋಟಿ ರೂಪಾಯಿ ಮೊತ್ತವನ್ನು ಸುಲಿಗೆ ಮಾಡುವ ಸಂಚು ರೂಪಿಸಲಾಗಿದೆ. ಈ ಮೊತ್ತವು ಅಂತಿಮವಾಗಿ 18 ಕೋಟಿಗೆ ಇತ್ಯರ್ಥವಾಯಿತು. ಲಂಚದ ಹಣವಾಗಿ 50 ಲಕ್ಷಗಳ ಟೋಕನ್ ಮೊತ್ತವನ್ನು ಕೆ.ಪಿ.ಗೋಸಾವಿ ಮತ್ತು ಅವರ ಸಹಾಯಕ ಸ್ಯಾನ್‌ವಿಲ್ ಡಿಸೋಜಾ ಅವರು ತೆಗೆದುಕೊಂಡರು. ಆದರೆ ನಂತರ ಈ ಮೊತ್ತದ 50 ಲಕ್ಷ ಲಂಚದ ಹಣವನ್ನು ಹಿಂತಿರುಗಿಸಲಾಗಿದೆ" ಎನ್ನಲಾಗಿದೆ.
ಸಮೀರ್ ವಾಂಖೆಡೆ ಅವರನ್ನು ಕಳೆದ ವರ್ಷ ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ಮಹಾನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿತ್ತು. ಇತ್ತೀಚೆಗೆ ಅವರ ಮನೆಯಲ್ಲಿ ಸಿಬಿಐ ದಾಳಿ ನಡೆಸಿದ ನಂತರ, ತಾವು ದೇಶಭಕ್ತರಾಗಿರುವ ಕಾರಣ ಶಿಕ್ಷೆ ಅನುಭವಿಸುತ್ತಿರುವುದಾಗಿ ಎಂದು ಹೇಳಿದ್ದರು.
"ನಾನು ದೇಶಪ್ರೇಮಿ ಎಂಬುದಕ್ಕೆ ಈ ಬಹುಮಾನ ಪಡೆಯುತ್ತಿದ್ದೇನೆ. ನಿನ್ನೆ 18 ಸಿಬಿಐ ಅಧಿಕಾರಿಗಳು ನನ್ನ ನಿವಾಸದ ಮೇಲೆ ದಾಳಿ ನಡೆಸಿ 12 ಗಂಟೆಗಳಿಗೂ ಹೆಚ್ಚು ಕಾಲ ನನ್ನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿದ್ದಾಗ ಶೋಧ ನಡೆಸಿದರು. ಅವರಿಗೆ 23,000 ಹಣ ಮತ್ತು ನಾಲ್ಕು ಆಸ್ತಿ ಪತ್ರಗಳು ಸಿಕ್ಕಿವೆ" ಎಂದು ಸಮೀರ್ ವಾಂಖೆಡೆ ಹೇಳಿದ್ದರು.












Click it and Unblock the Notifications