ಸಂಸತ್‌ನಲ್ಲಿ 2030 ಕೋಟಿ ರೂ. ಲಂಚ ಪ್ರಕರಣ, ಅಲ್ಲೋಲ ಕಲ್ಲೋಲ: ಗುಡುಗಿದ ಕಾಂಗ್ರೆಸ್!
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಅಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭೆ ಉಪ ಚುನಾವಣೆ ಹಾಗೂ ಲೋಕಸಭೆಯ ಉಪ ಚುನಾವಣೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಗೌತಮ್ ಅದಾನಿ ಲಂಚ ಪ್ರಕರಣವನ್ನು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಲು ಕಾಂಗ್ರೆಸ್ ಮುಂದಾಗಿದೆ. ಸೌರಶಕ್ತಿ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ಬಿಲೆನಿಯರ್ ಗೌತಮ್ ಅದಾನಿ ಹಾಗೂ ಅದಾನಿ ಸಮೂಹ 2030 ಕೋಟಿ ಲಂಚ ನೀಡಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಸಂಸತ್ ಅಧೀವೇಶನದಲ್ಲಿ ಇದೇ ಜೋರು ಸದ್ದಾಗುತ್ತಿದೆ. ಪ್ರಮುಖ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಹೋರಾಟಕ್ಕೆ ಇಳಿದಿದೆ.
ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ಅದಾನಿ ಮೇಲೆ ಕೇಳಿ ಬಂದಿರುವ ಆರೋಪ ಸದ್ದು ಮಾಡ್ತಿದೆ. ಇದೀಗ ಸಂಸತ್‌ನಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸಿ ಮತ್ತೆ ಬಿಜೆಪಿ ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ. ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸೆಕ್ಷನ್ 267ರ ಅಡಿಯಲ್ಲಿ ಗೌತಮ್ ಅದಾನಿ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಅದಾನಿ ಗ್ರೂಪ್ ಈಗಾಗಲೇ ಭ್ರಷ್ಟಾಚಾರ, ಲಂಚ ಹಾಗೂ ಹಣಕಾಸು ಅಕ್ರಮಗಳ ಬಗ್ಗೆ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ನಾವು ಈ ವಿಷಯವನ್ನು ಸದನದ ಮುಂದೆ ಇಡಲು ಬಯಸಿದ್ದೇವೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸಂಸತ್ ಚಳಿಗಾಲದ ಅಧಿವೇಶನ ನೆನ್ನೆಯಿಂದ ಪ್ರಾರಂಭವಾಗಿದ್ದು ಮೊದಲ ದಿನದ ಅಧಿವೇಶದನಲ್ಲೇ ಬಿಜೆಪಿ ಪಕ್ಷದ ಮೇಲೆ ಕಾಂಗ್ರೆಸ್ ಮುಗಿ ಬಿದ್ದಿದೆ. ಅದಾನಿ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಿರುವ ಕಾಂಗ್ರೆಸ್ ಅಂದಾಜು 2030 ಕೋಟಿ ರೂಪಾಯಿ ಲಂಚ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರ ಹಣವನ್ನು ಲಂಚಕ್ಕೆ ಬಳಸಲಾಗಿದೆ ಎಂಬುದನ್ನು ಸದನದ ಮೂಲಕ ದೇಶಕ್ಕೆ ತಿಳಿಸಲು ಬಯಸಿದ್ದೇವೆ ಎಂದಿದೆ.
ಅಲ್ಲದೇ ಇದಕ್ಕೂ ಮೊದಲೇ ಅದಾನಿ ಗ್ರೂಪ್ ವಿರುದ್ಧ ಷೇರುಪೇಟೆಯ ಮ್ಯಾನಿಪ್ಯುಲೇಷನ್, ಲೆಕ್ಕಪತ್ರ ವಂಚನೆ, ಓವರ್ ಇನ್‌ವಾಯ್ಸ್ ಹಾಗೂ ಶೆಲ್ ಕಂಪನಿಯಂತಹ ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಈಗ ಈ ವಿಷಯಗಳನ್ನು ಸದನದಲ್ಲಿ ತರುವುದು ಮುಖ್ಯ, ಇದರಿಂದ ದೇಶ ನಷ್ಟ ಅನುಭವಿಸಿದೆ ಮತ್ತು ಇದರಿಂದ ಜಗತ್ತು ನಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಹುದು. ದೇಶ ಉಳಿಸಲು ನಾವು ಈ ವಿಷಯವನ್ನು ಎತ್ತಿದ್ದೆವು ಎಂದು ಖರ್ಗೆ ಅವರು ಹೇಳಿದ್ದಾರೆ.

ಜೂನ್ 2015 ರಲ್ಲಿ ಮೋದಿಯವರು ಬಾಂಗ್ಲಾದೇಶಕ್ಕೆ ಹೋದಾಗ, ಅದಾನಿ ಗ್ರೂಪ್ ಅಲ್ಲಿ ವಿದ್ಯುತ್ ಯೋಜನೆಯನ್ನು ಪಡೆದುಕೊಂಡಿತು. ಮೋದಿಯವರ ಆಶೀರ್ವಾದವಿಲ್ಲದೆ ಯಾವ ದೇಶ ಅದಾನಿಯನ್ನು ಮಾತ್ರ ಆಯ್ಕೆ ಮಾಡುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದೆಲ್ಲವೂ ಮೋದಿಯವರ ಬೆಂಬಲದಿಂದ ನಡೆಯುತ್ತಿದೆ, ಇದು ದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಮುಂದುವರಿದು ಇಂತಹ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಮಾತ್ರ ನಿಯಮ 267 ಮಾಡಲಾಗಿದೆ. ಸತ್ಯ ಹೊರಬರಲು ಜೆಪಿಸಿ ರಚನೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಅವರ ಆಗ್ರಹಿಸಿದ್ದಾರೆ.
ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ವಾರೆಂಟ್ ಜಾರಿ ಮಾಡಿದ ಮೇಲೆ ಭಾರತದ ವಿವಿಧ ರಾಜ್ಯಗಳಲ್ಲಿ ಈ ವಿಷಯವು ಗಂಭೀರವಾಗಿ ಚರ್ಚೆಯಾಗುತ್ತಿದೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅದಾನಿ ಅವರ ಆರ್ಥಿಕ ನೆರವು ಬೇಡ ಎಂದಿದ್ದಾರೆ. ತಮಿಳುನಾಡಿನಲ್ಲೂ ಅದಾನಿ - ಡಿಎಂಕೆ ವ್ಯಹವಾರ ಚರ್ಚೆಯಾಗ್ತಿದೆ. ಆಂಧ್ರಪ್ರದೇಶದಲ್ಲೂ ತನಿಖೆ ಮಾಡುವುದಾಗಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.












Click it and Unblock the Notifications