'ಪ್ರತಿಯೊಂದಕ್ಕೂ ಬಿಜೆಪಿಯನ್ನು ದೂರುವುದನ್ನು ಬಿಡಿ'
ಬೆಂಗಳೂರು, ಅಕ್ಟೋಬರ್ 19 : ಸಾಹಿತಿಗಳು ಪ್ರಶಸ್ತಿ ವಾಪಸ್ ಕೊಟ್ಟರು, ಗೋಮಾಂಸದ ವಿಚಾರದಲ್ಲಿ ಗಲಾಟೆ ನಡೆಯಿತು. ಇವು ಇಂದಿನ ದಿನಗಳಲ್ಲಿ ದೇಶದ ದಿನಪತ್ರಿಕೆಗಳ ಮುಖಪುಟ ಸುದ್ದಿಗಳಾಗುತ್ತಿವೆ. ಪ್ರತಿಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಿವೆ.
ಇದೇ ವಿಚಾರವನ್ನು ಬಿಜೆಪಿಯ ಮುಂದಿಟ್ಟರೆ ಈ ಘಟನೆಗಳು ನಡೆದಿದ್ದು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಲ ಎಂದು ಪಕ್ಷ ಸಮರ್ಥನೆ ನೀಡುತ್ತದೆ. ಇಂತಹ ಘಟನೆಗಳಿಗೆ ನೀವು ಪ್ರಧಾನಿ ಅವರನ್ನು ಹೇಗೆ ದೂಷಿಸುತ್ತೀರಿ? ಎಂದು ಬಿಜೆಪಿ ವಕ್ತಾರ ಜಿ.ಎಲ್.ವಿ.ರಾವ್ ಪ್ರಶ್ನೆ ಮಾಡುತ್ತಾರೆ. [ಕಲಬುರ್ಗಿ ಹತ್ಯೆ : ಕಾಂಗ್ರೆಸ್ ಮೌನಕ್ಕೆ ಕಾರಣವೇನು?]

ಒನ್ ಇಂಡಿಯಾ ಜೊತೆ ಮಾತನಾಡಿರುವ ಜಿ.ಎಲ್.ವಿ.ರಾವ್ ಅವರು ಈ ಎರಡೂ ಘಟನೆಗಳ ಕುರಿತು ಮಾತನಾಡಿದ್ದಾರೆ. 'ರಾಜ್ಯಗಳ ಕಾನೂನು ಸುವ್ಯವಸ್ಥೆ ಬಗ್ಗೆ ನಾವು ಹೇಗೆ ಪ್ರತಿಕ್ರಿಯೆ ನೀಡಲು ಸಾಧ್ಯ?' ಎಂದು ಅವರು ಪ್ರಶ್ನಿಸಿದ್ದಾರೆ. [ಸೆರೆಸಿಕ್ಕರು ದಾದ್ರಿ ಗೋಮಾಂಸ ಪ್ರಕರಣ ಆರೋಪಿಗಳು]
ಕಾನೂನು ಸುವ್ಯವಸ್ಥೆ ರಾಜ್ಯದ ವಿಷಯ : 'ದಾದ್ರಿ ಘಟನೆ ಮತ್ತು ಕಲಬುರ್ಗಿ ಅವರ ಹತ್ಯೆಯ ಬಗ್ಗೆ ಪ್ರಧಾನಿ ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆಗಳು ಬಿಜೆಪಿಯ ವೈಫಲ್ಯ ಹೇಗಾಗುತ್ತದೆ? ಎಂದು ತಿಳಿದಿಲ್ಲ. ಈ ಘಟನೆ ನಡೆದಿರುವ ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆ ಆ ರಾಜ್ಯದ ಆಂತರಿಕ ವಿಚಾರವಾಗಿದೆ' ಎಂದು ರಾವ್ ಹೇಳಿದ್ದಾರೆ.
'ಚರ್ಚ್ ದಾಳಿಗಳು ನಡೆದಾಗಲೂ ಬಿಜೆಪಿಯ ಮೇಲೆ ಆರೋಪ ಮಾಡಲಾಗುತ್ತಿತ್ತು. ಆದರೆ, ಆ ಬಗ್ಗೆ ವಿವರವಾದ ತನಿಖೆ ನಡೆದ ನಂತರ ಎಲ್ಲವೂ ಬಯಲಾಯಿತು. ಆರೋಪ ಮಾಡುವುದು ಮತ್ತು ನೈಜತೆ ಎರಡೂ ಬೇರೆ-ಬೇರೆಯಾದದ್ದು. ದಾದ್ರಿ ಘಟನೆ ದುರಾದೃಷ್ಟಕರ, ಸಮಾಜವಾದಿ ಪಕ್ಷ ಇದನ್ನು ಬಿಜೆಪಿ ಮೇಲೆ ಆರೋಪ ಮಾಡಲು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ'.
ಆಗ ಏಕೆ ಸುಮ್ಮನಿದ್ದರು? : 'ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ ಕೊಡುವುದು ಕತ್ತಲಲ್ಲಿ ಬಾಕ್ಸಿಂಗ್ ಮಾಡಿದಂತೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಇಂತಹ ಘಟನೆಗಳು ನಡೆದಿವೆ. ಆಗ ಸಾಹಿತಿಗಳು ಏಕೆ ಸುಮ್ಮನಿದ್ದರು. ಈಗ ಮಾತ್ರ ಏಕೆ ಆರೋಪ ಮಾಡುತ್ತಿದ್ದಾರೆ?' ಎಂದು ರಾವ್ ಪ್ರಶ್ನಿಸಿದ್ದಾರೆ.
'ಈ ಘಟನೆಗಳ ಕುರಿತು ಪಕ್ಷದ ಕೆಲವು ನಾಯಕರು ಹೇಳಿಕೆ ನೀಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದು ಪಕ್ಷದ ನಿಲುವಿಗೆ ವಿರುದ್ಧವಾಗಿರುವುದರಿಂದಲೇ ಅಂತಹ ನಾಯಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ' ಎಂದು ರಾವ್ ತಿಳಿಸಿದ್ದಾರೆ.












Click it and Unblock the Notifications