ಆಂಧ್ರದಲ್ಲಿ ಮತ್ತೆ ಬಂದ್, ಕರ್ನಾಟಕಕ್ಕೆ ಬಿಸಿ
ಹೈದರಾಬಾದ್, ಡಿ.4: ಸುಮಾರು 66 ದಿನಗಳ ನಂತರ ಸೀಮಾಂಧ್ರ ಭಾಗದಲ್ಲಿ ಕತ್ತಲೆ ಸರಿದು ಬೆಳಕು ಹರಿಯುವ ಮುನ್ನವೇ ಮತ್ತೊಮ್ಮೆ ಆಂಧ್ರದಲ್ಲಿ ಬಂದ್ ಬಿಸಿ ತಟ್ಟಿದೆ. ರಾಯಲ -ತೆಲಂಗಾಣ ರಚನೆಗೆ ಕೇಂದ ಸಚಿವರ ಸಮೂಹ(GoM) ಒಪ್ಪಿಗೆ ಸೂಚಿಸಿರುವುದನ್ನು ಖಂಡಿಸಿ ಗುರುವಾರ ಬಂದ್ ನಡೆಸಲಾಗುತ್ತಿದೆ. ಇದರಿಂದ ಕರ್ನಾಟಕ ಗಡಿಭಾಗದಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ತೆಲಂಗಾಣದ 10 ಜಿಲ್ಲೆಗಳು ಹಾಗೂ ರಾಯಲಸೀಮೆಯ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳನ್ನು ಸೇರಿಸಿ ರಾಯಲ ತೆಲಂಗಾಣ ರಚನೆಗೆ ಮುಂದಾಗಿರುವ ಯುಪಿಎ ಸರ್ಕಾರದ ಕ್ರಮವನ್ನು ಖಂಡಿಸಿ ಟಿಆರ್ ಎಸ್ ಪಕ್ಷ ಹೋರಾಟಕ್ಕೆ ಇಳಿದಿದೆ. ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಹಲವೆಡೆ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದಿದೆ.
ಚಳಿಗಾಲದ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ದೇಶದ 29ನೇ ರಾಜ್ಯವಾಗಿ ತೆಲಂಗಾಣ ರಾಜ್ಯ ರಚನೆ ಮಸೂದೆ ಮಂಡನೆ ಮಾಡಲು ಯುಪಿಎ ನಿರ್ಧರಿಸಿದೆ. ರಾಯಲ ತೆಲಂಗಾಣ ರಚನೆ ಬಗ್ಗೆ ಕ್ಯಾಬಿನೆಟ್ ಸಚಿವರಾದ ಎಸ್ ಜೈಪಾಲ್ ರೆಡ್ಡಿ, ಸೀಮಾಂಧ್ರ ಭಾಗದ ಎಂಎಂ ಪಲ್ಲಂ ರಾಜು, ಕಿಶೋರ್ ಚಂದ್ರ ದೇವ್, ಕಾವೂರಿ ಸಾಂಬಶಿವರಾವ್ ಅವರು ತುಟಿ ಪಿಟಕ್ ಎಂದಿಲ್ಲ.
ಆಂಧ್ರ ವಿಭಜನೆಗೆ ತಯಾರಿಸಲಾಗಿರುವ 69 ಪುಟಗಳ ಕರಡು ಪ್ರತಿ, 22 ಪುಟಗಳ ವಿಶೇಷ ವರದಿಯನ್ನು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ನೇತೃತ್ವದ ಕೇಂದ್ರ ಸಚಿವರ ಸಮೂಹ ಸರ್ವಾನುಮತದ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ತೆಲಂಗಾಣ+ರಾಯಲಸೀಮೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಹೊಸ ರಾಜ್ಯದ ಜಿಲ್ಲೆಗಳು
ತೆಲಂಗಾಣದಲ್ಲಿ ಹತ್ತು ಜಿಲ್ಲೆಗಳು ಸೇರ್ಪಡೆಗೊಂಡಿವೆ. ಹೈದರಾಬಾದ್ (ರಾಜಧಾನಿ), ಅದಿಲಾಬಾದ್, ಖಮ್ಮಮ್, ಕರೀಂನಗರ, ಮಹಬೂಬ್ ನಗರ, ಮೇಡಕ್, ನಾಲಗೊಂಡ, ನಿಜಾಮಾಬಾದ್, ರಂಗಾರೆಡ್ಡಿ ಹಾಗೂ ವಾರಂಗಲ್. ಸೀಮಾಂಧ್ರ ಹಾಗೂ ತೆಲಂಗಾಣಕ್ಕೆ 10 ವರ್ಷಕಾಲ ಹೈದರಾಬಾದ್ ಜಂಟಿ ರಾಜಧಾನಿಯಾಗಲಿದೆ. ಇದರ ಜತೆಗೆ ರಾಯಲ ಸೀಮೆಯ ಕರ್ನೂಲ್ ಹಾಗೂ ಅನಂತಪುರ ಸೇರ್ಪಡೆಗೆ ಒಪ್ಪಿಗೆ ನೀಡಲಾಗಿದೆ.

ಜನಸಂಖ್ಯೆ,ಜಾತಿವಾರು ಅಂಕಿ ಅಂಶ
ತೆಲಂಗಾಣ ಭಾಗದಲ್ಲಿ ಸುಮಾರು 3.52 ಕೋಟಿ ಜನರಿದ್ದಾರೆ (2011ರ ಜನಗಣತಿಯಂತೆ) ಇದು ದೇಶದ 12ನೇ ಅತಿದೊಡ್ಡ (ಜನಸಂಖ್ಯೆ) ರಾಜ್ಯವಾಗಿದೆ. ವಿಭಜನೆಗೂ ಮುನ್ನ 5ನೇ ಸ್ಥಾನದಲ್ಲಿದ್ದ ಆಂಧ್ರಪ್ರದೇಶ ಈಗ ಸೀಮಾಂಧ್ರವಾಗಿ 10ನೇ ಸ್ಥಾನಕ್ಕೆ ಕುಸಿದಿದೆ. ತೆಲಂಗಾಣದಲ್ಲಿ ಶೇ 86 ರಷ್ಟು ಹಿಂದುಗಳು, ಶೇ12 ರಷ್ಟು ಮುಸ್ಲಿಂ ಹಾಗೂ ಶೇ 1 ರಷ್ಟು ಕ್ರೈಸ್ತರಿದ್ದಾರೆ.

ಸಂಸತ್ ಸ್ಥಾನ
ತೆಲಂಗಾಣ 17 ಲೋಕಸಭಾ ಸ್ಥಾನ ಹಾಗೂ 119 ವಿಧಾನಸಭೆ ಸ್ಥಾನಗಳನ್ನು ಹೊಂದಿದೆ. ಈಗ ರಾಯಲ ಸೀಮೆ ಜಿಲ್ಲೆಗಳು ಸೇರಿಕೊಂಡರೆ ಆಂಧ್ರಪ್ರದೇಶದ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗುತ್ತದೆ.

ಗಡಿಜಿಲ್ಲೆಗಳಿಗೂ ಬಿಸಿ
ಸೀಮಾಂಧ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಗುಲ್ಬರ್ಗ, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಗೂ ಬಿಸಿ ತಟ್ಟಿದ್ದು, ಇಲ್ಲಿಂದ ಆಂಧ್ರಕ್ಕೆ (ತಿರುಪತಿಗೆ) ತೆರಳುವ ಬಸ್ ಗಳನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಹೀಗಾಗಿ ಕರ್ನಾಟಕದ ಗಡಿ ಭಾಗದ ಜಿಲ್ಲಾ ಪ್ರದೇಶಗಳಲ್ಲೂ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಆಂಧ್ರ- ಕರ್ನಾಟಕ ನಡುವಣ ಸಂಚಾರ ಸಂಪರ್ಕ ಸ್ಥಗಿತಗೊಂಡಿದೆ. ದಿನ ನಿತ್ಯ ಭಕ್ತಾದಿಗಳಲ್ಲದೆ, ವ್ಯಾಪಾರಿಗಳು ಕೂಡಾ ಸೀಮಾಂಧ್ರ ಭಾಗಕ್ಕೆ ತೆರಳುತ್ತಿದ್ದವರು ಇಂದು ಭಾರಿ ನಷ್ಟ ಅನುಭವಿಸಿದ್ದಾರೆ.

ವಿದ್ಯಾರ್ಥಿಗಳ ಬೆಂಬಲ
ಈ ಹಿಂದೆ ನಡೆದ 72 ಗಂಟೆಗಳ ಬಂದ್ ಸಮಯದಲ್ಲಿ ಇದ್ದ ಪರಿಸ್ಥಿತಿಗಿಂತ ಹೆಚ್ಚಿನ ತೊಂದರೆ ಜನರಿಗೆ ಉಂಟಾಗಿದೆ. ಉಸ್ಮಾನಿಯಾ ವಿವಿ ವಿದ್ಯಾರ್ಥ್ಗಿಗಳಂತೆ ಇತರೆ ವಿವಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮುಕಿದ್ದಾರೆ.

ಭಕ್ತರಿಗೆ ಆತಂಕ ಬೇಡ
ಜತೆಗೆ ತಿರುಪತಿ ವೆಂಕಟೇಶನ ದರ್ಶನಕ್ಕೆ ಬರುವ ಭಕ್ತಾದಿಗಳು ಒಂದೆರಡು ದಿನ ನಿಧಾನಿಸಿದರೆ ಒಳ್ಳೆಯದು. ಹೊರ ರಾಜ್ಯ ಅಥವಾ ಹೊರ ದೇಶಗಳಿಂದ ಬಂದಿರುವ ಭಕ್ತರು ಯಾರೂ ಆತಂಕ ಪಡುವ ಅಗತ್ಯವಿಲ್ಲ.
ಪ್ರಯಾಣ ವ್ಯವಸ್ಥೆ ಸರಿ ಹೋಗುವವರೆಗೂ ಟಿಟಿಡಿ ಸಂಸ್ಥೆ ಎಲ್ಲಾ ಭಕ್ತರಿಗೂ ಊಟ, ವಸತಿ ವ್ಯವಸ್ಥೆ ಕಲ್ಪಿಸಲಿದೆ. ಬೆಟ್ಟದ ಕೆಳಗಡೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಿದೆ. ಯಾವುದೇ ವ್ಯವಸ್ಥೆ ಕಲ್ಪಿಸುವಲ್ಲಿ ಸ್ವಲ್ಪ ತಡವಾಗಬಹುದು ಅಷ್ಟೆ. ಭಕ್ತಾದಿಗಳು ಸಹಕರಿಸಬೇಕು ಎಂದು ಆಡಳಿತ ಮಂಡಳಿ ಜನರಿಗೆ ಭರವಸೆ ನೀಡಿದೆ.
ಬಂಕ್ ಖಾಲಿ
ಕರ್ನೂಲ್, ಆನಂತಪುರ, ಖಮ್ಮಂ, ವಾರಂಗಲ್, ಆದಿಲಾಬಾದ್, ಕರೀಂನಗರ ಮುಂತಾದ ಕಡೆ ಬಂದ್ ಬಿಸಿ ತೀವ್ರವಾಗಿದ್ದು, ಪೆಟ್ರೋಲ್ ಬಂಕ್ ಗಳು ಬಂದ್ ಆಗಿವೆ. ರಸ್ತೆಗಳು ಬಿಕೋ ಎನ್ನುತ್ತಿವೆ

ಮೆರವಣಿಗೆ
ಟಿಆರ್ ಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಚೀರಾಟ
ಪ್ರತಿಭಟನಾ ನಿರತ ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ

ಹೈದ್ರಾಬಾದ್ ನಗರ
ಹೈದ್ರಾಬಾದ್ ನಗರ ಕೇಂದ್ರಾಡಳಿತ ಪ್ರದೇಶವಾಗುವುದಿಲ್ಲ. ಸೀಮಾಂಧ್ರ ಭಾಗಕ್ಕೆ ಭಾರಿ ಆರ್ಥಿಕ ಪ್ಯಾಕೇಜ್, ಹೊಸ ರಾಜಧಾನಿಯನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆಯನ್ನು ಸಭೆಯಲ್ಲಿ ನೀಡಲಾಗಿದೆ. ಆದರೆ ಹೈದ್ರಾಬಾದ್ ಅನ್ನು 10 ವರ್ಷಗಳ ಕಾಲ ಉಭಯ ರಾಜ್ಯಗಳ ರಾಜಧಾನಿಯಾಗಿ ಮಾಡುವ ಪ್ರಸ್ತಾಪದಲ್ಲಿ ಯಾವುದೇ ಬದಲಾವಣೆ ಇಲ್ಲ

ಸರ್ಕಾರದ ಸದ್ಯದ ಸವಾಲು
ಮುಖ್ಯವಾಗಿ ನೈಸರ್ಗಿಕ ಸಂಪತ್ತು(ಕಲ್ಲಿದ್ದಲು, ಜಲ ಸಂಪನ್ಮೂಲ, ಅನಿಲ ಹಾಗೂ ಇಂಧನ) ಬಳಕೆ, ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಸೂಕ್ಷ್ಮವಾಗಿ ಚರ್ಚಿಸಲಾಗಿದೆ. ಸಂಪನ್ಮೂಲ ಹಂಚಿಕೆ ವಿಷಯದಲ್ಲಿ ಮತ್ತೊಮ್ಮೆ ಗೊಂದಲ, ಆತಂಕ ಸೃಷ್ಟಿಯಾಗದಂತೆ ಮಾಡುವುದು ಸರ್ಕಾರದ ಸದ್ಯದ ಸವಾಲಾಗಿದೆ

ಸ್ಥಾನ ಮಾನಕ್ಕಾಗಿ
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ತೆಲಂಗಾಣ ಪ್ರಾಂತ್ಯದಲ್ಲಿ ಹೈದರಾಬಾದ್ ಬಿಟ್ಟರೆ ಮಿಕ್ಕ ಭಾಗಗಳಿಗೆ ಅಂದಿನಿಂದ ಇಂದಿನವರೆಗೂ ಸರಿಯಾದ ಸ್ಥಾನ ಮಾನ ಸಿಕ್ಕಿರಲಿಲ್ಲ. ಇದಕ್ಕಾಗಿ ಹಲವು ದಶಕಗಳ ಕಾಲ ಹೋರಾಟ ನಡೆಸಬೇಕಾ ಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ

ಹೈದ್ರಾಬಾದ್ ನಗರ
ಆಂಧ್ರದಲ್ಲಿ ಮತ್ತೆ ಬಂದ್ ಬಿಸಿ

ಹೈದ್ರಾಬಾದ್ ನಗರ
ಆಂಧ್ರದಲ್ಲಿ ಮತ್ತೆ ಬಂದ್ ಬಿಸಿ












Click it and Unblock the Notifications