Radia Audio tapes: ಸುಪ್ರೀಂಕೋರ್ಟಲ್ಲಿ ರತನ್ ಟಾಟಾ ಅರ್ಜಿ ವಿಚಾರಣೆ
ನವದೆಹಲಿ, ಸೆ.1: ಲಂಡನ್ ಮೂಲದ ಆರ್ಥಿಕ ಸಲಹೆಗಾರ ಜನಕ್ ರಾಡಿಯಾ ಪತ್ನಿ ನೀರಾ ರಾಡಿಯಾ ಆಡಿಯೋ ಟೇಪ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರತನ್ ಟಾಟಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ರಾಡಿಯಾ ಟೇಪ್ಸ್ ನಿಂದ ಆಂತರಿಕ ವಿಷಯಗಳು ಹೊರ ಬರಬಹುದು ಅದು ಸಾರ್ವಜನಿಕವಾಗಿ ಬಿತ್ತರಿಸುವುದು ತರವಲ್ಲ ಎಂದು ರತನ್ ಟಾಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಟೆಲಿಕಾಂ, ಏವಿಯೇಷನ್, ಪವರ್ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ, ಪ್ರಮುಖ ಕಾರ್ಪೊರೇಟ್ ಲಾಬಿಗಾರ್ತಿ ಎನಿಸಿಕೊಂಡಿದ್ದ ನೀರಾ ಹಾಗೂ ಆಕೆ ಹುಟ್ಟುಹಾಕಿದ್ದ ಸಂಸ್ಥೆ ಕಾಲಿಟ್ಟ ಪರಿಸರದಲ್ಲಿ ಹಣದ ಹೊಳೆ ಹರಿದಾಡಿತ್ತು. ಪತ್ರಕರ್ತರು, ಪ್ರಮುಖ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ ಮುಖ್ಯಸ್ಥರ ಜೊತೆ ನೀರಾ ನಡೆಸಿದ ಸಂಭಾಷಣೆ ಭಾರಿ ಸಂಚಲನ ಮೂಡಿಸಿತ್ತು.
ನೀರಾ ಹಿನ್ನೆಲೆ: ಸಿಂಗಪುರ ಏರ್ ಲೈನ್ ಅನ್ನು ಭಾರತಕ್ಕೆ ತರಲು ಸಹಾರಾ ಏರ್ ಲೈನ್ಸ್ ಯತ್ನಿಸುತ್ತಿದ್ದ ಕಾಲದಲ್ಲಿ ಬರೀ ಕನ್ಸಲ್ಟೆಂಟ್ ಆಗಿದ್ದ ಈಕೆ ಲಾಬಿಕೋರಳಾಗಿ ಬೆಳೆದು ನಂತರ ನೇರ ಅಂದಿನ ನಾಗರಿಕ ವಿಮಾನಯಾನ ಸಚಿವರ ಜೊತೆ ಸಂಪರ್ಕ ಬೆಳೆಸಿದರು. ದಿವಂಗತ ಅನಂತ್ ಕುಮಾರ್ ಹಾಗೂ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಪರಿಚಯವಾದ ಬಳಿಕ ನೀರಾ ಹಿಂತಿರುಗಿ ನೋಡಲಿಲ್ಲ.

2000 ಇಸವಿಯಲ್ಲಿ ಇಡೀ ವಿಮಾನಯಾನ ಉದ್ಯಮವೇ ಆಕೆಯತ್ತ ಬೆರಗು ನೋಟದಿಂದ ನೋಡುವಂತಾಯಿತು. ಕೇವಲ 1 ಲಕ್ಷ ಬಂಡವಾಳದೊಂದಿಗೆ ಖಾಸಗಿ ಏರ್ ಲೈನ್ ಆರಂಭಿಸುವುದಾಗಿ ಘೋಷಿಸಿದ ನೀರಾ, NOC ಪಡೆದು ಕ್ರೌನ್ ಎಕ್ಸ್ ಪ್ರೆಸ್ ಎಂಬ ಹೆಸರಿನಲ್ಲಿ ದೇಶಿ ಖಾಸಗಿ ವಿಮಾನಯಾನ ಆರಂಭಿಸುವ ಕನಸು ಕಂಡಿದ್ದರು.
ವಿಮಾನ ಮೇಲಕ್ಕೇರದಿದ್ದರೂ 100 ಕೋಟಿ ರು ಗೂ ಅಧಿಕ ಎಫ್ ಡಿ ಐ ಹಣ ಮುಂದಿನ ಯೋಜನೆಗಳಿಗೆ ಬಂಡವಾಳವಾಯಿತು. ಮುಂದಿನ ವರ್ಷವೇ ಟಾಟಾ ಸಂಸ್ಥೆಗೆ ಪ್ರಚಾರ ನೀಡಲು ವೈಷ್ಣವಿ ಕಾರ್ಪೊರೇಟ್ ಕಮ್ಯೂನಿಕೇಷನ್ ಹುಟ್ಟು ಹಾಕಿ, ಅಂಬಾನಿ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳ ಪಿಆರ್ ಆಗಿ ಬೆಳೆದರು.
ಆದರೆ, ರಾಡಿಯಾ ಟೇಪ್ಸ್ ಹೊರ ಬಂದ ಬಳಿಕ ಟಾಟಾ ಬೆಂಬಲ ಸಿಗದೆ, ಕಾನೂನು ಸಮರ ಎದುರಿಸುವಂತಾಯಿತು. ಇನ್ನೊಂದೆಡೆ, 1.76 ಲಕ್ಷ ಕೋಟಿ ರು ಮೌಲ್ಯದ 2ಇ ಹಗರಣದ ಪ್ರಮುಖ ಆರೋಪಿ ಡಿಎಂಕೆ ನಾಯಕ ರಾಜಾ ರಾಜೀನಾಮೆ ಪಡೆಯುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾದವು.
"ರಾಡಿಯಾ ಟೇಪ್‌ಗಳು" ಎಂದು ಹೆಸರಾದ ವಿವಾದ - ಹೇಗೆ ಸೋರಿಕೆಯಾಯಿತು ಎಂಬುದನ್ನು ವಿವರಿಸುವ ಸರ್ಕಾರ ಸಲ್ಲಿಸಿದ ವರದಿಯ ಪ್ರತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಆಗಸ್ಟ್ 2012 ರಲ್ಲಿ ರತನ್ ಟಾಟಾ ಕೋರಿದ್ದರು. ಇದಕ್ಕೂ ಮುನ್ನ ಖಾಸಗಿತನಕ್ಕೆ ಧಕ್ಕೆ ಎಂದು 2011ರಲ್ಲೇ ಅರ್ಜಿ ಹಾಕಿದ್ದರು. 2014ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.
2ಜಿ ಹಗರಣದಲ್ಲಿ ಭಾಗಿ, ಡೀಲ್ ಕುದುರಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ಉದ್ಯಮಿ ನೀರಾ ರಾಡಿಯಾ ಹೆಸರು ಒಂದು ದಶಕದ ಬಳಿಕ ಮತ್ತೊಮ್ಮೆ ಕೇಳಿ ಬಂದಿದೆ. ಯೆಸ್ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗದಿಂದ ತನಿಖೆ ಜಾರಿಯಲ್ಲಿದ್ದು, ನೀರಾ ರಾಡಿಯಾಗೆ ಇಂದು ಸಮನ್ಸ್ ಕಳಿಸಲಾಗಿದೆ. ನೀರಾ ಹಾಗೂ ಅವರ ತಂಗಿ, ನಯತಿ ಹೆಲ್ತ್ ಕೇರ್ ಹಾಗೂ ರಿಸರ್ಚ್ ಎನ್ ಸಿ ಆರ್ ಪ್ರೈ ಲಿಮಿಟೆಡ್ ಸಂಸ್ಥೆ ಅಧಿಕಾರಿಗಳಿಗೆ ಸಮನ್ಸ್ ತಲುಪಿಸಲಾಗಿದೆ.
ಯೆಸ್ ಬ್ಯಾಂಕ್ ನಿಂದ ಒಂದು ಯೋಜನೆಗೆಂದು ಸಾಲ ಪಡೆದು ಮತ್ತೊಂದು ಯೋಜನೆಯಲ್ಲಿ ಹಣ ತೊಡಗಿಸಿ, ಅವ್ಯವಹಾರ ಮಾಡಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಾ ಹಾಗೂ ಇತರರು ತನಿಖೆ, ವಿಚಾರಣೆ ಎದುರಿಸಬೇಕಾಗಿದೆ.












Click it and Unblock the Notifications