Rat Murder Case: ಇಲಿ ಕೊಂದವನ ವಿರುದ್ಧ ಎಫ್‌ಐಆರ್- 30 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಲಕ್ನೋ ಏಪ್ರಿಲ್ 11: ಉತ್ತರಪ್ರದೇಶದಲ್ಲಿ ಇಲಿ ಕೊಂದವನ ವಿರುದ್ಧ ಎಫ್‌ಐಆರ್ ದಾಖಲಿಸಿದ ಅಪರೂಪದ ಘಟನೆಯೊಂದು ನಡೆದಿದೆ. ಬದೌನ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನವೆಂಬರ್ 25, 2022 ರಂದು ಇಲಿಯ ಬಾಲಕ್ಕೆ ಕಲ್ಲನ್ನು ಕಟ್ಟಿ ಚರಂಡಿಯಲ್ಲಿ ಮುಳುಗಿಸಿ ಅದನ್ನು ಕೊಂದಿದ್ದನ್ನು. ಈ ಪ್ರಕರಣದಲ್ಲಿ ಇದೀಗ ಬದೌನ್ ಪೊಲೀಸರು ವ್ಯಕ್ತಿಯ ವಿರುದ್ಧ 30 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಏಪ್ರಿಲ್ 10 ರಂದು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಅನ್ನು ಕೋರ್ಟ್ ಅಂಗೀಕರಿಸಿದ್ದು, ಈಗ ಇಲಿ ಕೊಂದವರ ವಿರುದ್ಧ ಪ್ರಕರಣ ದಾಖಲಾಗಲಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಬದೌನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ ಯಾದವ್, ಇಲಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪ್ರಾಣಿ ಹಿಂಸೆ ನಡೆದಿರುವುದು ಕಂಡುಬಂದಿದೆ. ಹಾಗಾಗಿ ಆರೋಪಿ ಮನೋಜ್ ವಿರುದ್ಧ ಸೆಕ್ಷನ್ 429ರ ಅಡಿಯಲ್ಲಿ ನ್ಯಾಯಾಲಯಕ್ಕೆ 30 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ನ್ಯಾಯಾಲಯ ಆರೋಪ ಪಟ್ಟಿಯನ್ನು ಅಂಗೀಕರಿಸಿದೆ.

ಏನಿದು ಘಟನೆ?
25 ನವೆಂಬರ್ 2022 ರಂದು ಪ್ರಾಣಿ ಪ್ರೇಮಿ ವಿಕೇಂದ್ರ ಶರ್ಮಾ ಬದಯುನ್‌ನ ಗಾಂಧಿ ಗ್ರೌಂಡ್ ಛೇದನದ ಬಳಿ ಹಾದು ಹೋಗುತ್ತಿದ್ದರು. ಈ ವೇಳೆ ಮನೋಜ್ ಕುಮಾರ್ ಎಂಬ ವ್ಯಕ್ತಿ ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಚರಂಡಿಯಲ್ಲಿ ಮುಳುಗಿಸುತ್ತಿರುವುದನ್ನು ನೋಡಿದ ಅವರು ಅದನ್ನು ವಿಡಿಯೋ ಮಾಡಿದ್ದಾರೆ.
ಮಾತ್ರವಲ್ಲದೆ ವಿಕೇಂದ್ರ ಇಲಿಯನ್ನು ರಕ್ಷಿಸಲು ಚರಂಡಿಗೆ ಹಾರಿ ಇಲಿಯನ್ನು ಹೊರತೆಗೆದಿದ್ದಾರೆ. ಅಷ್ಟರೊಳಗೆ ಇಲಿ ಸತ್ತು ಹೋಗಿತ್ತು. ಇದಾದ ನಂತರ ವಿಕೇಂದ್ರ ಬದೌನ್ ಸದರ್ ಕೊತ್ವಾಲಿಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ಸದರ್ ಕೊತ್ವಾಲಿ ಪೊಲೀಸರು ಇಲಿಯ ಶವವನ್ನು ಸೀಲ್ ಮಾಡಿ ಬದೌನ್‌ನ ಪಶು ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇಲಿಯ ಮರಣೋತ್ತರ ಪರೀಕ್ಷೆ
ಸಂಪನ್ಮೂಲಗಳ ಕೊರತೆಯನ್ನು ಉಲ್ಲೇಖಿಸಿ ಇಲಿಯ ಮರಣೋತ್ತರ ಪರೀಕ್ಷೆ ಮಾಡಲು ನಿರಾಕರಿಸಲಾಯಿತು. ಇದಾದ ನಂತರ ಬದೌನ್ ಪೊಲೀಸರು ಇಲಿಯ ಮೃತ ದೇಹವನ್ನು ಬರೇಲಿಯ ಐವಿಆರ್‌ಐಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಇಲಿಗಳ ಮರಣೋತ್ತರ ಪರೀಕ್ಷೆಯ ಮೊದಲ ಪ್ರಕರಣ ಇದಾಗಿದೆ. ಡಾ.ಅಶೋಕ್ ಕುಮಾರ್ ಮತ್ತು ಡಾ.ಪವನ್ ಕುಮಾರ್ ಸೇರಿದಂತೆ ಇಬ್ಬರು ವಿಜ್ಞಾನಿಗಳ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ ಎಂದು ಐವಿಆರ್ ಐನ ಜಂಟಿ ನಿರ್ದೇಶಕ ಡಾ.ಕೆ.ಪಿ.ಸಿಂಗ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇಲಿಯ ಶ್ವಾಸಕೋಶ ಊದಿಕೊಂಡಿದ್ದು, ಲಿವರ್ ನಲ್ಲಿ ಸ್ವಲ್ಪ ಸಮಸ್ಯೆ ಇರುವುದು ಬೆಳಕಿಗೆ ಬಂದಿದೆ. ಶ್ವಾಸಕೋಶದ ಸೂಕ್ಷ್ಮದರ್ಶಕ ಪರೀಕ್ಷೆಯನ್ನು ಮಾಡಲಾಯಿತು. ಇದರಲ್ಲಿ ಇಲಿಯ ಶ್ವಾಸಕೋಶದಲ್ಲಿ ಡ್ರೈನ್ ನೀರಿನ ಕೊಳಕು ಕಂಡುಬಂದಿಲ್ಲ. ಆದರೆ ಶ್ವಾಸಕೋಶದ ಸ್ನಾಯುಗಳು ಹರಿದಿರುವುದು ಕಂಡು ಬಂದಿದೆ. ಇಲಿಯ ಲಿವರ್‌ನಲ್ಲಿ ಇನ್ ಫೆಕ್ಷನ್ ಇತ್ತು ಎಂದು ವರದಿ ಹೇಳುತ್ತದೆ. ಉಸಿರುಗಟ್ಟುವಿಕೆಯಿಂದ ಇಲಿ ಸತ್ತಿದೆ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ
ಕ್ಷಮೆ ಕೇಳಿದ ಆರೋಪಿ
ಸಾವಿಗೆ ಮುನ್ನ ಜೋರಾಗಿ ಉಸಿರಾಡಿದ್ದರಿಂದ ಶ್ವಾಸಕೋಶದ ಕೊಳವೆ ಹರಿದಿತ್ತು ಎನ್ನಲಾಗಿದೆ. ಆದರೆ, ಇಲಿ ಕೊಂದು ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಆರೋಪಿ ಮನೋಜ್ ಹೇಳುತ್ತಾನೆ. ಇಲಿಯಿಂದ ತನಗೆ ತೊಂದರೆಯಾಗುತ್ತಿತ್ತು ಎಂದ ಅವರು ಹೇಳಿದ್ದಾರೆ. ಇಲಿ ಹತ್ಯೆಗೆ ಕ್ರಮ ಕೈಗೊಳ್ಳುವುದಾದರೆ ಮೇಕೆ, ಹುಂಜ ಕೊಂದ ಪ್ರಕರಣವಾಗಳನ್ನೂ ದಾಖಲಿಸುವರೇ. ತಪ್ಪಾಗುವುದು ಸಹಜ ನಾನು ಅದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ.












Click it and Unblock the Notifications