ಮಹಿಳೆಯರ ಮೇಲಿನ ದೌರ್ಜನ್ಯ: 215 ಸರ್ಕಾರಿ ನೌಕರರ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್!
ಚೆನ್ನೈ,ಸೆಪ್ಟೆಂಬರ್ 30: 1992ರಲ್ಲಿ ಧರ್ಮಪುರಿ ಜಿಲ್ಲೆಯ ವಚಾತಿ ಗ್ರಾಮದಲ್ಲಿ ಶ್ರೀಗಂಧ ಮರಗಳ ಕಳ್ಳಸಾಗಣೆ ಸಂದರ್ಭದಲ್ಲಿ ನಡೆದ ದಾಳಿ ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಆದಿವಾಸಿಗಳ ಮೇಲೆ ದಬ್ಬಾಳಿಕೆ ಕುರಿತಂತೆ ಅರಣ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಎಲ್ಲಾ ಅಧಿಕಾರಿಗಳು ಸೇರಿದಂತೆ 215 ಮಂದಿ ಆರೋಪಿಗಳನ್ನು ದೋಷಿಗಳು ಎಂದು ಧರ್ಮಪುರಿಯ ಕೆಳ ನ್ಯಾಯಾಲಯ ಆದೇಶವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ.
ಎಲ್ಲಾ ಬಲಿಪಶುಗಳು ಮತ್ತು ಕಾನೂನು ಕ್ರಮದ ಸಾಕ್ಷ್ಯಗಳು ಸಮಂಜಸ ಮತ್ತು ಸ್ಥಿರವಾಗಿವೆ ಎಂದು ಈ ನ್ಯಾಯಾಲಯವು ಕಂಡುಕೊಳ್ಳುತ್ತದೆ. ಹಾಗೂ ಅವು ವಿಶ್ವಾಸಾರ್ಹವಾಗಿದೆ ಎಂದು ನ್ಯಾಯಮೂರ್ತಿ ಪಿ ವೇಲ್ಮುರುಗನ್ ತಮ್ಮ ಆದೇಶದಲ್ಲಿ ಹೇಳಿದರು.

ಜೂನ್ 20, 1992 ರಂದು ಅಕ್ರಮವಾಗಿ ಶ್ರೀಗಂಧ ಕಡಿದು ಕಳ್ಳಸಾಗಣೆ ಮಾಡಲಾಗುತ್ತಿದೆ. ಗ್ರಾಮಸ್ಥರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಿ ಜೂನ್ 20, 1992ರಲ್ಲಿ ವಾಚಾತಿ ಗ್ರಾಮದ ಮೇಲೆ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿ ದಾಳಿ ಮಾಡಿದ್ದರು. ದಾಳಿ ವೇಳೆ ಅಧಿಕಾರಿಗಳು ಹಲವು ಮನೆಗಳನ್ನು ಧ್ವಂಸಗೊಳಿಸಿ, ಮಹಿಳೆಯರ ಮೇಲೆ ಹಲ್ಲೆಗೈದು ಕ್ರೂರವಾಗಿ ನಡೆಸಿಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಘಟನೆ ವೇಳೆ ಜನ ಜಾನುವಾರುಗಳ ಮೇಲೆ ಕ್ರೌರ್ಯ ಮೆರೆಯಲಾಗಿತ್ತು ಎನ್ನುವ ಅರೋಪ ಕೇಳಿಬಂದಿತ್ತು. ದಾಳಿ ವೇಳೆ 18 ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಯಿತು ಎಂದು ಮಹಿಳೆಯರು ಅಳಲು ತೊಡಿಕೊಂಡಿದ್ದಾರೆ.
2011ರಲ್ಲಿ ಧರ್ಮಪುರಿಯ ಸೆಷನ್ಸ್ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಭಾರತೀಯ ಅರಣ್ಯ ಸೇವಾ ಅಧಿಕಾರಿಗಳು, 84 ಪೊಲೀಸರು ಮತ್ತು ಐವರು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ 126 ಅರಣ್ಯ ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿತ್ತು. 269 ಆರೋಪಿಗಳ ಪೈಕಿ 54 ಮಂದಿ ವಿಚಾರಣೆ ವೇಳೆ ಸಾವನ್ನಪ್ಪಿದ್ದು, ಉಳಿದ 215 ಮಂದಿಗೆ 1ರಿಂದ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್, ಉಳಿದ ಶಿಕ್ಷೆಯ ಅವಧಿಯನ್ನು ಪೂರೈಸಲು ಎಲ್ಲಾ ಆರೋಪಿಗಳ ಕಸ್ಟಡಿಯನ್ನು ತಕ್ಷಣವೇ ಪಡೆದುಕೊಳ್ಳುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ಶುಕ್ರವಾರ ಸೂಚಿಸಿದೆ.
2016 ರಲ್ಲಿ ವಿಭಾಗೀಯ ಪೀಠದ ಆದೇಶದಂತೆ ಪ್ರತಿ ಅತ್ಯಾಚಾರ ಸಂತ್ರಸ್ತರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು ಆತ್ಯಾಚಾರದ ಅಪರಾಧಿಗಳಿಂದ 50% ಮೊತ್ತವನ್ನು ವಸೂಲಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ನ್ಯಾಯಮೂರ್ತಿ ವೇಲ್ಮುರುಗನ್ ತಿಳಿಸಿದರು. ಆರೋಪಿಗಳನ್ನು ರಕ್ಷಿಸಿದ್ದಕ್ಕಾಗಿ ಅಂದಿನ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಅರಣ್ಯಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಕ್ಕೆ ನ್ಯಾಯಾಲಯ ಸೂಚಿಸಿದೆ.
ನ್ಯಾಯಮೂರ್ತಿ ವೇಲ್ಮುರುಗನ್ ಅವರು ತಮ್ಮ ಆದೇಶದಲ್ಲಿ "ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ನಿಜವಾದ ಅಪರಾಧಿಗಳು ಯಾರು ಎಂದು ತಿಳಿದಿದ್ದರೂ ಸಹ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿಜವಾದ ಅಪರಾಧಿಗಳನ್ನು ರಕ್ಷಿಸಲು ಅಮಾಯಕ ಗ್ರಾಮಸ್ಥರು ಬಲಿಯಾಗುತ್ತಿದ್ದಾರೆ. ಆದ್ದರಿಂದ, ಎಲ್ಲಾ ಮೇಲ್ಮನವಿದಾರರು ಅಪರಾಧ ಮಾಡಿದ್ದಾರೆ ಎಂದು ಸಾಬೀತುಪಡಿಸಿದೆ ಎಂಬ ತೀರ್ಮಾನಕ್ಕೆ ಈ ನ್ಯಾಯಾಲಯವು ಬರುತ್ತದೆ ಎಂದು ತಿಳಿಸಿದ್ದಾರೆ.
18 ಅತ್ಯಾಚಾರ ಸಂತ್ರಸ್ತರಿಗೆ ಅಥವಾ ಅವರ ಕುಟುಂಬದ ಸದಸ್ಯರಿಗೆ ಸ್ವಯಂ ಉದ್ಯೋಗ ಅಥವಾ ಶಾಶ್ವತ ಉದ್ಯೋಗಗಳನ್ನು ಒದಗಿಸುವಂತೆ ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಈ ಘಟನೆಯ ನಂತರ ವಾಚತಿ ಗ್ರಾಮದಲ್ಲಿ ಜೀವನೋಪಾಯ ಮತ್ತು ಜೀವನಮಟ್ಟ ಸುಧಾರಣೆಗೆ ಕೈಗೊಂಡಿರುವ ಕಲ್ಯಾಣ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಅವರು ಸರ್ಕಾರಕ್ಕೆ ಸೂಚಿಸಿದರು.












Click it and Unblock the Notifications