ರಂಜನ್ ಗೋಗಾಯ್ ಪ್ರಮಾಣ ವಚನ; ಪ್ರತಿಪಕ್ಷಗಳ ಸಭಾತ್ಯಾಗ
ನವದೆಹಲಿ, ಮಾರ್ಚ್ 19 : ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿ ಅಸಮಾಧಾನ ವ್ಯಕ್ತಪಡಿಸಿದವು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಂಜನ್ ಗೋಗಾಯ್‌ರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದರು. ಗುರುವಾರ ಗೋಗಾಯ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು. ವೆಂಕಯ್ಯ ನಾಯ್ಡು ಪ್ರಮಾಣ ವಚನ ಬೋಧಿಸಿದರು.
ನಿವೃತ್ತ ಸಿಐಜೆ ರಂಜನ್ ಗೋಗಾಯ್‌ರನ್ನು ನಾಮ ನಿರ್ದೇಶನ ಮಾಡಿರುವ ಬಗ್ಗೆ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ಅಯೋಧ್ಯೆ, ರಫೆಲ್ ಸೇರಿದಂತೆ ಪ್ರಮುಖ ಪ್ರಕರಣಗಳ ಬಗ್ಗೆ ತೀರ್ಪು ನೀಡಿದ್ದ ರಂಜನ್ ಗೋಗಾಯ್‌ರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವ ಬಗ್ಗೆ ಪ್ರತಿಪಕ್ಷಗಳು ಸಹ ಪ್ರಶ್ನೆ ಎತ್ತಿದ್ದವು.
ಗುರುವಾರ ಪ್ರಮಾಣ ವಚನ ಸಂದರ್ಭದಲ್ಲಿ ಸಭಾತ್ಯಾಗ ಮಾಡುವ ಮೂಲಕ ಪ್ರತಿಪಕ್ಷಗಳು ಅಸಮಾಧಾನವನ್ನು ಹೊರಹಾಕಿದವು. ರಾಜ್ಯಸಭಾ ಸದಸ್ಯತ್ವ ಒಪ್ಪಿಕೊಂಡಿದ್ದು ಏಕೆ? ಎಂದು ಪ್ರಮಾಣ ವಚನದ ಬಳಿಕ ಹೇಳುವುದಾಗಿ ರಂಜನ್ ಗೋಗಾಯ್ ತಿಳಿಸಿದ್ದರು.

ನಿವೃತ್ತ ಸಿಐಜೆ ಈಗ ಎಂಪಿ
ಮೂಲತಃ ಅಸ್ಸಾಂ ರಾಜ್ಯದವರಾದ ರಂಜನ್ ಗೋಗಾಯ್ 2018ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. 2019ರ ನವೆಂಬರ್ 17ರಂದು ಅವರು ನಿವೃತ್ತರಾಗಿದ್ದಾರೆ.

ಮೊದಲ ಮುಖ್ಯ ನ್ಯಾಯಮೂರ್ತಿ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ಈಶಾನ್ಯ ರಾಜ್ಯದ ಮೊದಲಿಗರು ಎಂಬ ಹಿರಿಮೆಯನ್ನು ರಂಜನ್ ಗೋಗಾಯ್ ಹೊಂದಿದ್ದಾರೆ. ಅಸ್ಸಾಂ ರಾಜಧಾನಿ ಗೌಹಾಟಿಯಲ್ಲಿ ವೃತ್ತಿ ಜೀವನವನ್ನು ಅವರು ಆರಂಭಿಸಿದ್ದರು.

ರಂಜನ್ ಗೋಗಾಯ್ ಪರಿಚಯ
ಗೌಹಾಟಿಯಲ್ಲಿ ವೃತ್ತಿ ಜೀವನ ಆರಂಭಿಸಿದ ರಂಜನ್ ಗೋಗಾಯ್, ಫೆಬ್ರವರಿ 28, 2001ರಂದು ಗೌಹಾಟಿ ಹೈಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.

2012ರಲ್ಲಿ ಬಡ್ತಿ ಪಡೆದರು
2012ರ ಏಪ್ರಿಲ್‌ನಲ್ಲಿ ಬಡ್ತಿ ಪಡೆದ ರಂಜನ್ ಗೋಗಾಯ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದರು. ಮುಖ್ಯ ನ್ಯಾಯಮೂರ್ತಿಗಳಾದ ಬಳಿಕ ರಾಷ್ಟ್ರೀಯ ನಾಗರಿಕ ನೋಂದಣಿ, ಅಯೋಧ್ಯೆ, ರಫೆಲ್ ಸೇರಿದಂತೆ ಪ್ರಮುಖ ಪ್ರಕರಣಗಳ ತೀರ್ಪನ್ನು ನೀಡಿದ್ದಾರೆ.












Click it and Unblock the Notifications