ಲಾಲೂ ಪ್ರಸಾದ್‌ಗೆ ಮತ್ತೆ ಆರು ವಾರಗಳ ತಾತ್ಕಾಲಿಕ ಜಾಮೀನು
ರಾಂಚಿ, ಜೂನ್ 29: ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರ ತಾತ್ಕಾಲಿಕ ಜಾಮೀನನ್ನು ರಾಂಚಿ ಹೈಕೋರ್ಟ್ ಇನ್ನೂ ಆರು ವಾರಗಳವರೆಗೆ ವಿಸ್ತರಿಸಿದೆ.
ಲಾಲೂ ಅವರ ಅನಾರೋಗ್ಯದ ಕಾರಣ ಈ ಮೊದಲು ನೀಡಲಾಗಿದ್ದ ತಾತ್ಕಾಳಿಕ ಜಾಮೀನು ಜುಲೈ 3ರಂದು ಅಂತ್ಯಗೊಳ್ಳುತ್ತಿತ್ತು. ಅದನ್ನು ಆಗಸ್ಟ್ 17ರವರೆಗೂ ಹೈಕೋರ್ಟ್ ವಿಸ್ತರಿಸಿದೆ.
ನಮ್ಮ ಕಕ್ಷಿದಾರರಿಗೆ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಈಗಾಗಲೇ ಒಂದು ವಾರದ ತಾತ್ಕಾಲಿಕ ಜಾಮೀನು ದೊರಕಿತ್ತು. ಈಗ ಕೋರ್ಟ್ ಅದನ್ನು ಆರು ವಾರಗಳವರೆಗೆ ವಿಸ್ತರಿಸಿದೆ. ಮುಂದೆ ಅಗತ್ಯವಿದ್ದರೆ ಮತ್ತೆ ಅದರ ವಿಸ್ತರಣೆಗೆ ಮನವಿ ಸಲ್ಲಿಸಲಾಗುವುದು ಎಂದು ಲಾಲೂ ಅವರ ವಕೀಲರು ತಿಳಿಸಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದ ಲಾಲೂ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆದಿದ್ದರು. ತಿಂಗಳ ಆರಂಭದಲ್ಲಿ ಪಾಟ್ನಾಗೆ ಮರಳಿದ್ದರು.
ಲಾಲೂ ಅವರು ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಪಾಟ್ನಾ ಹೈಕೋರ್ಟ್‌ನ ಆದೇಶದಂತೆ 1996ರ ಏಪ್ರಿಲ್ 15ರಂದು ಲಾಲೂ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣದಲ್ಲಿ 1991-1996ರ ಅವಧಿಯಲ್ಲಿ ಅವಿಭಜಿತ ಬಿಹಾರದ ದುಮ್ಕಾ ಜಿಲ್ಲೆಯ ಖಜಾನೆಯಿಂದ 34.91 ಕೋಟಿ ರೂಪಾಯಿ ಹಣವನ್ನು ತೆಗೆದುಕೊಂಡು ದುರ್ಬಳಕೆ ಮಾಡಿರುವುದು ಸಹ ಸೇರಿದೆ.












Click it and Unblock the Notifications