Chennai Rain: ಚೆನ್ನೈನಲ್ಲಿ ಮುಂದುವರೆದ ಮಹಾಮಳೆ; ರಜನಿಕಾಂತ್ ಮನೆಗೂ ನುಗ್ಗಿದ ನೀರು
ತಮಿಳುನಾಡಿನಾದ್ಯಂತ ವ್ಯಾಪಕ ಮಳೆ ಮುಂದುವರೆದಿದೆ. ಬುಧವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಗುರುವಾರ ಕೂಡ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರಿ ಮಳೆಯಿಂದ ಚೆನ್ನೈ ನಗರದಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಗೆ ನೀರು ನುಗ್ಗಿದೆ ಎಂದು ವರದಿಯಾಗಿದೆ.
ನಗರದ ಪ್ರತಿಷ್ಠಿತ ಬಡಾವಣೆಯಾದ ಪೋಯಸ್ ಗಾರ್ಡನ್‌ನಲ್ಲಿ ರಜನಿಕಾಂತ್ ಅವರ ಮನೆಯಿದ್ದು, ಬಡಾವಣೆಯ ಹಲವು ಮನೆಗಳಿಗೆ ಕೂಡ ನೀರು ನುಗ್ಗಿರುವುದಾಗಿ ವರದಿಯಾಗಿದೆ. ಇದೇ ಬಡಾವಣೆಯಲ್ಲಿ ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ, ನಟ ಧನುಷ್ ಮತ್ತು ಇತರ ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ಪ್ರಮುಖ ವಕೀಲರು ಸೇರಿದಂತೆ ಹಲವು ಪ್ರತಿಷ್ಠಿತ ವ್ಯಕ್ತಿಗಳ ಮನೆಗಳಿವೆ.

ಮಂಗಳವಾರ ಮತ್ತು ಬುಧವಾರ ಸುರಿದ ಭಾರಿ ಮಳೆಯಿಂದಾಗಿ ತಮಿಳು ನಾಡು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದೆ. ಅದರಲ್ಲೂ ರಾಜಧಾನಿ ಚೆನ್ನೈ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲಾ ನದಿಗಳಂತಾಗಿದ್ದರೆ, ಟ್ರಾಫಿಕ್ ಸಮಸ್ಯೆ ತೀವ್ರವಾಗಿತ್ತು. ದೈನಂದಿನ ಅಗತ್ಯ ಸೇವೆಗಳಿಗೂ ಅಡ್ಡಿಯಾಗಿದೆ.
ನಗರದ ಒಳಚರಂಡಿಗಳು ಭರ್ತಿಯಾಗಿದ್ದರಿಂದ ನೀರು ರಸ್ತೆ ಮೇಲೆ ಹರಿದಿದೆ. ರಜನಿಕಾಂತ್ ಸೇರಿ ಹಲವರ ಮನೆಗಳಿಗೆ ನೀರು ನುಗ್ಗಿದ ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ನಿವಾಸದ ಸುತ್ತಲು ಇರುವ ನೀರನ್ನು ಮೋಟಾರ್ ಪಂಪ್ ಬಳಸಿ ಖಾಲಿ ಮಾಡಿದ್ದಾರೆ. ರಜನಿಕಾಂತ್ ಸೇರಿ ಹಲವರ ಮನೆಗಳಿಗೆ ನೀರು ನುಗ್ಗದಂತೆ ನೋಡಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ. 2023ರಲ್ಲಿ ಮೈಚಾಂಗ್ ಚಂಡಮಾರುತದಿಂದ ಭಾರಿ ಮಳೆಯಾದಾಗಲೂ ರಜನಿಕಾಂತ್ ಅವರ ಮನೆಗೆ ನೀರು ನುಗ್ಗಿತ್ತು.

ಭಾರಿ ಟ್ರಾಫಿಕ್, ಜನಜೀವನ ಅಸ್ತವ್ಯಸ್ತ
ಭಾರಿ ಮಳೆಯಿಂದಾಗಿ ಚೆನ್ನೈನ ಹಲವು ಕಡೆಗಳಲ್ಲಿ ಜಲಾವೃತವಾಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ದಕ್ಷಿಣ ರೈಲ್ವೆಯು ಚೆನ್ನೈ ಸೆಂಟ್ರಲ್-ಮೈಸೂರು ಕಾವೇರಿ ಎಕ್ಸ್‌ಪ್ರೆಸ್ ಸೇರಿದಂತೆ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದ್ದು, ದೇಶೀಯ ವಿಮಾನ ಹಾರಟ ಸೇವೆಯನ್ನು ಕೂಡ ರದ್ದು ಮಾಡಲಾಗಿದೆ. ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಟ್ರಾಫಿಕ್ ಸಮಸ್ಯೆ ತೀವ್ರವಾಗಿತ್ತು ಜನ ಗಂಟೆಗಟ್ಟಲೆ ರಸ್ತೆಗಳಲ್ಲಿ ಕಾಯುವಂತಾಗಿತ್ತು.
ಭಾರಿ ಮಳೆ ಎಚ್ಚರಿಕೆ
ಇನ್ನೂ ಎರಡು ದಿನಗಳ ಕಾಲ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಮಾನಾ ಇಲಾಖೆ ಮುನ್ಸೂಚನೆ ಕೊಟ್ಟಿದೆ. ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು ಮತ್ತು ಚೆನ್ನೈ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ.
ಯಾವುದೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತಮಿಳುನಾಡು ಸರ್ಕಾರ ಈಗಾಗಲೇ ಸಜ್ಜಾಗಿದೆ. ವಿಪತ್ತು ಸ್ಪಂದನಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, 219 ದೋಣಿಗಳನ್ನು ಬಳಿಕ ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ.












Click it and Unblock the Notifications