ಮಾಜಿ ಸಚಿವ ರಾಜೀವ್ ಚಂದ್ರಶೇಖರ್‌ಗೆ ಮಹತ್ವದ ಹುದ್ದೆ?
ತಿರುವನಂತಪುರಂ, ಮಾರ್ಚ್ 23: ಕೇಂದ್ರದ ಮಾಜಿ ಸಚಿವ, ಉದ್ಯಮಿ ರಾಜೀವ್ ಚಂದ್ರಶೇಖರ್‌ಗೆ ಬಿಜೆಪಿ ಮಹತ್ವದ ಹುದ್ದೆಯನ್ನು ನೀಡಲಿದೆ ಎಂಬ ಸುದ್ದಿಗಳು ಹಬ್ಬಿವೆ. ಈ ಕುರಿತು ಸೋಮವಾರ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ. ರಾಜೀವ್ ಚಂದ್ರಶೇಖರ್ 2024ರ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಲ್ಲಿ 342,078 ಮತಗಳನ್ನು ಪಡೆದು ಸೋಲು ಕಂಡಿದ್ದರು.
ಪಕ್ಷದ ಮೂಲಗಳ ಮಾಹಿತಿ ಪ್ರಕಾರ ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಲಿದ್ದಾರೆ. ಪ್ರಸ್ತುತ ಕೆ. ಸುರೇಂದ್ರನ್ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು. ಲೋಕಸಭೆ ಚುನಾವಣೆಯಲ್ಲಿ ಸೋತಿರುವ ರಾಜೀವ್ ಚಂದ್ರಶೇಖರ್‌ಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆ ಇದೆ.

ಕೇರಳ ರಾಜ್ಯದ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ರಾಜೀವ್ ಚಂದ್ರಶೇಖರ್ ಹೆಸರನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಲಿದ್ದಾರೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ಅಧ್ಯಕ್ಷರು ಎಂದು ಸೋಮವಾರ ಘೋಷಣೆಯಾಗಲಿದೆ.
ಚುನಾವಣೆಯಲ್ಲಿ ಸೋಲು: ರಾಜ್ಯಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ನರೇಂದ್ರ ಮೋದಿ 2.0 ಸಂಪುಟದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ. ಖಾತೆ ರಾಜ್ಯ ಸಚಿವರಾಗಿದ್ದರು. ಅವರ ರಾಜ್ಯಸಭೆ ಅವಧಿ ಮುಗಿದ ಬಳಿಕ ಮತ್ತೊಮ್ಮೆ ಆಯ್ಕೆ ಮಾಡಿರಲಿಲ್ಲ.
ಸಚಿವ ರಾಜೀವ್ ಚಂದ್ರಶೇಖರ್ ಅವರು ಮೊದಲ ಬಾರಿಗೆ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್‌ನ ಶಶಿ ತರೂರ್ ಎದುರಾಳಿಯಾಗಿದ್ದರು.
ಚುನಾವಣೆಯಲ್ಲಿ ಕ್ಷೇತ್ರದ ಹಾಲಿ ಸಂಸದರೂ ಆಗಿದ್ದ ಶಶಿ ತರೂರ್ 358,155 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ರಾಜೀವ್ ಚಂದ್ರಶೇಖರ್ 342,078 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈಗ ಅವರನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ.
ಕೇರಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ 5 ವರ್ಷದ ಅವಧಿ ಪೂರ್ಣಗೊಳಿಸಿದ್ದಾರೆ. ಆದ್ದರಿಂದ ಹೊಸ ಬಿಜೆಪಿ ಅಧ್ಯಕ್ಷರಿಗಾಗಿ ಬಿಜೆಪಿ ಹುಡುಕಾಟ ಆರಂಭಿಸಿದೆ. ಶೋಭಾ ಸುರೇಂದ್ರನ್, ಎಂ. ಟಿ. ರಮೇಶ್, ರಾಜೀವ್ ಚಂದ್ರಶೇಖರ್ ಹೆಸರುಗಳು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ.
ಕೆ. ಸುರೇಂದ್ರನ್ ಅವರ ಅವಧಿ ವಿಸ್ತರಣೆ ಮಾಡಲಾಗುತ್ತದೆ? ಅಥವ ಶೋಭಾ ಸುರೇಂದ್ರನ್, ಎಂ. ಟಿ. ರಮೇಶ್ ನೇಮಕ ಮಾಡಲಾಗುತ್ತದೆ? ಎಂಬ ಸುದ್ದಿಗಳು ಹಬ್ಬಿವೆ. ಆದರೆ ರಾಜೀವ್ ಚಂದ್ರಶೇಖರ್ ನೇಮಕದ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ.
ರಾಜೀವ್ ಚಂದ್ರಶೇಖರ್ ಮೂಲ ಸಂಘ ಪರಿವಾರದ ನಾಯಕರಲ್ಲ. ಆದ್ದರಿಂದ ಎಲ್ಲಾ ವರ್ಗದ ಮತಗಳನ್ನು ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಕೆ. ಸುರೇಂದ್ರನ್ ಅಧಿಕಾರಾವಧಿ ವಿಸ್ತರಣೆಗೆ ಬಿಜೆಪಿ ವಲಯದಲ್ಲಿಯೇ ಅಸಮಾಧಾನವಿದೆ. ಆದ್ದರಿಂದ ರಾಜೀವ್ ಚಂದ್ರಶೇಖರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
60 ವರ್ಷದ ರಾಜೀವ್ ಚಂದ್ರಶೇಖರ್ ಕರ್ನಾಟಕದಿಂದ ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು. ನರೇಂದ್ರ ಮೋದಿ ಸಂಪುಟದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ. ಖಾತೆ ರಾಜ್ಯ ಸಚಿವರಾದರು. 2024ರ ಲೋಕಸಭೆ ಚುನಾವಣೆಯ ಬಳಿಕ ಅವರು ಕೇರಳ ರಾಜ್ಯದ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ರಾಜೀವ್ ಚಂದ್ರಶೇಖರ್ ತಿರುವನಂತಪುರದಲ್ಲಿ ಮನೆಯನ್ನು ಖರೀದಿ ಮಾಡಿದ್ದಾರೆ. ಕೇರಳ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ವಿವಿಧ ಹೋರಾಟಗಳಲ್ಲಿ ಪಾಳ್ಗೊಳ್ಳುತ್ತಿದ್ದಾರೆ. ಆದ್ದರಿಂದ ಅವರನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬಹುದು ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications