ಕಾಂಗ್ರೆಸ್‌ಗೆ ಹತ್ತಿರವಾಗುತ್ತಿರುವ ಬಿಜೆಪಿ ನಾಯಕಿ ವಸುಂದರಾ ರಾಜೇ- ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಜೊತೆಗಿನ ಫೋಟೋ ವೈರಲ್
ಜೈಪುರ, ಸೆಪ್ಟೆಂಬರ್ 23: ಕಳೆದ ರಾತ್ರಿ ಜೈಪುರದಲ್ಲಿ ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. ರಾಜಸ್ಥಾನದ ಕಾನ್ಸ್ಟಿಟ್ಯೂಷನ್ ಕ್ಲಬ್ ಉದ್ಘಾಟನೆ ಬಳಿಕ ವಸುಂದರಾ ರಾಜೇ ಅವರು ಅಶೋಕ್ ಗೆಹ್ಲೋಟ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ರಾಜಸ್ಥಾನ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಇಬ್ಬರು ನಾಯಕರು ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ರಾಜಕೀಯ ಪರಿಣಾಮಗಳು ಏನಾಗಬಹುದು ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.

ವಸುಂದರಾ ರಾಜೇ ಹಾಗೂ ಅಶೋಕ್ ಗೆಹ್ಲೋಟ್ ಅವರ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಅವರು ಸಹ ಹಾಜರಿದ್ದರು.
200 ಸ್ಥಾನಗಳ ರಾಜಸ್ಥಾನ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿಯು ಕಾಂಗ್ರೆಸ್‌ನಿಂದ ಮತ್ತೆ ಅಧಿಕಾರವನ್ನು ಕಸಿದುಕೊಳ್ಳುವ ನಿರೀಕ್ಷೆಯಲ್ಲಿದೆ.
ರಾಜಸ್ಥಾನದ ಕಾಂಗ್ರೆಸ್‌ನಂತಯೇ ಬಿಜೆಪಿಯು ಆಂತರಿಕ ಸಂಘರ್ಷಗಳನ್ನು ಎದುರಿಸುತ್ತಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಿಜೆಪಿ ಇನ್ನೂ ಸಜ್ಜಾಗಿಲ್ಲವೆಂಬ ಮಾತುಗಳು ಕೇಳಿಬಂದಿವೆ. ಬಿಜೆಪಿ ನಾಯಕರಾದ ವಸುಂದರಾ ರಾಜೇ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿವೆ. ಈ ಇಬ್ಬರು ನಾಯಕರು ರಾಜಸ್ಥಾನ ಸಿಎಂ ರೇಸ್‌ನಲ್ಲಿ ಇರುವುದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.
ಇದೆಲ್ಲದರ ನಡುವೆ, ರಾಜಸ್ಥಾನದ ಹಡೋತಿ ಪ್ರದೇಶದಲ್ಲಿ ಪರಿವರ್ತನ್ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ವಸುಂದರಾ ರಾಜೇ ಗೈರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತಮ್ಮದೇ ಕ್ಷೇತ್ರದಲ್ಲಿ ಈ ಯಾತ್ರೆ ಹಾದುಹೋದರೂ ವಸುಂದರಾ ರಾಜೇ ಹಾಜರಾಗದೇ ಹೋಗಿದ್ದು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ವಸುಂದರಾ ರಾಜೇ ಅವರ ಅನುಪಸ್ಥಿತಿಯ ಬಗ್ಗೆ ಹಲವು ಚರ್ಚೆಗಳು ಹುಟ್ಟಿಕೊಂಡಿವೆ.
ಕೋಟಾವನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಇದೇ ಪ್ರದೇಶದಲ್ಲಿ ನಡೆದ ಬಿಜೆಪಿಯ ಪರಿವರ್ತನ ಯಾತ್ರೆಗೆ ನೀರಸವಾದ ಪ್ರತಿಕ್ರಿಯೆ ದೊರೆತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇತ್ತ ಕಾಂಗ್ರೆಸ್‌ನಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ಇಬ್ಬರು ನಾಯಕರು ಕರೆಸಿ ಮಾತನಾಡಿದೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಪ್ರಯತ್ನಿಸಿದೆ.
ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಬರಬಹುದು ಎಂದು ಕೆಲ ಸಮೀಕ್ಷೆಗಳು ಬಹಿರಂಗಪಡಿಸಿವೆ.












Click it and Unblock the Notifications