ರಾಜಸ್ಥಾನ ಗೆಲವಿನ ಶ್ರೇಯಸ್ಸು ಮೋದಿಗೆ ಸಲ್ಲುತ್ತದೆ
ಜೈಪುರ, ಡಿ.8: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶದಲ್ಲಿ ಬಹುತೇಕ 4-0 ಲೀಡ್ ನೊಂದಿಗೆ ಲೋಕಸಭಾ ಚುನಾವಣೆಗೆ ಭರ್ಜರಿ ಮುನ್ನುಡಿ ಹಾಕಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ.
ಆದಾಗ್ಯೂ ದಿಲ್ಲಿ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ತಿಣುಕಾಡುತ್ತಿದೆ. ಈ ಮಧ್ಯೆ, ಅಭೂತಪೂರ್ವ ಗೆಲುವಿನೊಂದಿಗೆ ಜೈಪುರದಲ್ಲಿ ಅಧಿಕಾರದ ಗದ್ದುಗೆ ಏರಲು ಸರ್ವಸಿದ್ಧತೆ ನಡೆಸಿರುವ ರಾಜಮಾತೆ ವಸುಂಧರಾ ರಾಜೆ ಅವರು ಪ್ರಸಕ್ತ ಚುನಾವಣಾ ಗೆಲವಿನ ಶ್ರೇಯಸ್ಸನ್ನು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಈ ವಿಧಾನಸಭಾ ಚುನಾವಣೆ ದಿಕ್ಸೂಚಿಯಾಗಲಿದ್ದು, ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ವಸುಂದರಾ ರಾಜೆ ಹೇಳಿದರು. ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಿ ವಸುಂದರಾ ರಾಜೇ ಅವರೇ ಆಯ್ಕೆಯಾಗುವುದು ನಿಚ್ಚಳ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗಮನಾರ್ಹವೆಂದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣೆ ಉಸ್ತುವಾರಿ ಹೊತ್ತಿದ್ದವರು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್. ರಾಜ್ಯದಲ್ಲಿ ಕಾಂಗ್ರೆಸ್ಸಿನ ಭಷ್ಟಾಚಾರ ಮೇರೆ ಮೀರಿತ್ತು ಮತ್ತು ದೇಶಾದ್ಯಂತ ತೀವ್ರ ಸಂಚನವನ್ನುಂಟುಮಾಡಿದ್ದ ಭನ್ವರಿದೇವಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಇಬ್ಬರು ಆರೋಪಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆಗೆ ಕಾಂಗ್ರೆಸ್ಸಿನ ಅಶೋಕ್ ಗೆಹ್ಲೋಟ್ ಸರಕಾರ ಕೊಚ್ಚಿ ಹೋಗಿದ್ದು, ಮೋದಿ ಮೋಡಿಯಿಂದಾಗಿ ಅಧಿಕಾರದ ಗದ್ದುಗೆ ಬಿಜೆಪಿಯತ್ತ ವಾಲಿದೆ. ರಾಜಸ್ಥಾನ ವಿಧಾನಸಭೆ ಒಟ್ಟು 200 ಸ್ಥಾನಗಳನ್ನು ಹೊಂದಿದ್ದು, ಆ ಪೈಕಿ ಬಿಜೆಪಿ ಒಟ್ಟು 144 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಒಂದು ಮತಕ್ಷೇತ್ರದಲ್ಲಿ ಅಭ್ಯರ್ಥಿಯ ಸಾವಿನಿಂದಾಗಿ ಚುನಾವಣೆ ಮುಂದೂಡಲಾಗಿದೆ.












Click it and Unblock the Notifications