ಕರ್ನಾಟಕ, ಹಿಮಾಚಲದ ನಂತರ ರಾಜಸ್ಥಾನದ ಒಳಬೇಗುದಿಯನ್ನು ತಣ್ಣಗಾಗಿಸಿದ ಖರ್ಗೆ- ಕಾಂಗ್ರೆಸ್‌ಗೆ ಮರುಜೀವ ನೀಡುತ್ತಿರುವ ಕನ್ನಡಿಗ
ಬೆಂಗಳೂರು, ಮೇ 30: ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಭಾರೀ ಬಹುಮತದಿಂದ ಸರ್ಕಾರ ರಚಿಸಿರುವ ಕಾಂಗ್ರೆಸ್ ಪಕ್ಷ ಹೊಸ ಹುಟ್ಟು ಪಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಕಾಂಗ್ರೆಸ್ ಎರಡು ರಾಜ್ಯಗಳನ್ನು ಗೆದ್ದಿರುವುದು ಈ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿವೆ.
ಮಲ್ಲಿಕಾರ್ಜುನ ಖರ್ಗೆ ಅವರು ಹಿಮಾಚಲ ಹಾಗೂ ಕರ್ನಾಟಕ ಕಾಂಗ್ರೆಸ್‌ನಲ್ಲಿನ ಒಳಬೇಗುದಿಯನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ರಾಜಸ್ಥಾನಲ್ಲಿನ ಪಕ್ಷದ ಬಂಡಾಯವನ್ನು ನಿಯಂತ್ರಿಸುವಲ್ಲಿ ಖರ್ಗೆ ಸಫಲರಾಗಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಹಾಗೂ ರಾಜಸ್ಥಾನ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸಚಿನ್ ಪೈಲಟ್ ನಡುವಿನ ಸುದೀರ್ಘ ಕಾಲದ ಅಸಮಾಧಾನವನ್ನು ಕಾಂಗ್ರೆಸ್ ಹೈಕಮಾಂಡ್ ಸೋಮವಾರ ಶಮನಗೊಳಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ರಾಜಸ್ಥಾನದ ಇಬ್ಬರು ಪ್ರಮುಖ ನಾಯಕರು ನಾಲ್ಕು ಗಂಟೆಗಳ ಸಭೆ ನಡೆಸಿದ್ದಾರೆ. ಈ ವರ್ಷದ ಕೊನೆಯಲ್ಲಿ ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆದಿರುವ ಮ್ಯಾರಾಥಾನ್ ಸಭೆಯು ಭಾರೀ ಮಹತ್ವವನ್ನು ಪಡೆದುಕೊಂಡಿತ್ತು.

ಪಕ್ಷದ ರಾಜಸ್ಥಾನ ನಾಯಕತ್ವದ ನಡುವಿನ ದೀರ್ಘಕಾಲದ ವಿವಾದವನ್ನು ಶಮನಗೊಳಿಸಲು, ಕಾಂಗ್ರೆಸ್ ರಾಜ್ಯ ವ್ಯವಹಾರಗಳ ಉಸ್ತುವಾರಿ ಸುಖಜೀಂದರ್ ರಾಂಧವಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಇಬ್ಬರೂ ನಾಯಕರನ್ನು ಒಂದೇ ವೇದಿಕೆಯಲ್ಲಿ ಕರೆತರುವ ಮೂಲಕ, ಕಾಂಗ್ರೆಸ್ ಪಕ್ಷವು ತನ್ನ ರಾಜಸ್ಥಾನ ಘಟಕದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ತೋರಿಸಲು ಪ್ರಯತ್ನಿಸಿದೆ ಎಂದು ತಿಳಿದುಬಂದಿದೆ. ರಾಜ್ಯ ನಾಯಕರು ಒಟ್ಟಾಗಿ ಕೆಲಸ ಮಾಡಲು ಮತ್ತು ಹೋರಾಡಲು ಪಕ್ಷವು ಸೂತ್ರವನ್ನು ರೂಪಿಸಿದೆ ಎಂದು ಹೇಳಿಕೊಂಡಿದೆ. ಕರ್ನಾಟಕದಂತೆಯೇ ರಾಜಸ್ಥಾನದಲ್ಲಿಯೂ ಒಗ್ಗಟ್ಟಿನಿಂದ ವಿಧಾನಸಭೆ ಚುನಾವಣೆ ಎದುರಿಸಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನವದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಮುಂಬರುವ ರಾಜಸ್ಥಾನ ಚುನಾವಣೆಯ ಕುರಿತು ಇಬ್ಬರೂ ನಾಯಕರು ಖರ್ಗೆ ಮತ್ತು ರಾಹುಲ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಕಾಂಗ್ರೆಸ್ ಪಕ್ಷವು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಖಂಡಿತವಾಗಿಯೂ ನಾವು ರಾಜಸ್ಥಾನದಲ್ಲಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ಅವರು ಸುದ್ದಿಗೋಷ್ಠಿ ನಡೆಸಿದಾಗ ಅಶೋಕ್ ಗೆಹಲೋಟ್ ಹಾಗೂ ಸಚಿನ್ ಪೈಲಟ್ ಪಕ್ಕದಲ್ಲಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ರಾಜಸ್ಥಾನವು ಪ್ರಬಲ ರಾಜ್ಯವಾಗಲಿದೆ ಎಂಬುದು ಸ್ಪಷ್ಟವಾಗಿದೆ. ನಾವು ಗೆಲ್ಲಲಿದ್ದೇವೆ. ಆದ್ದರಿಂದ, ಗೆಹ್ಲೋಟ್ ಜಿ ಮತ್ತು ಸಚಿನ್ ಜಿ ಇಬ್ಬರೂ ಒಟ್ಟಿಗೆ ಹೋಗಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಸುದೀರ್ಘ ಕಾಲದ ನಂತರ ಇದೇ ಮೊದಲ ಬಾರಿಗೆ ರಾಜಸ್ಥಾನ ಮುಖ್ಯಮಂತ್ರಿ ಮತ್ತು ಅವರ ಮಾಜಿ ಉಪ ಪಕ್ಷದ ಉನ್ನತ ನಾಯಕತ್ವದ ಸಮ್ಮುಖದಲ್ಲಿ ಮುಖಾಮುಖಿಯಾಗಿದ್ದಾರೆ.
2018 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದಾಗಿನಿಂದ ಗೆಹ್ಲೋಟ್ ಮತ್ತು ಪೈಲಟ್ ನಡುವೆ ಅಸಮಾಧಾನಗಳು ಶುರುವಾಗಿದೆ. 2020 ರಲ್ಲಿ ಪೈಲಟ್ ಅವರು ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದರು. ನಂತರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗಳಿಂದ ತೆಗೆದುಹಾಕಲಾಯಿತು.
ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಇದೇ ರೀತಿಯ ಒಳ ಸಂಘರ್ಷಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರು ಬಗೆಹರಿಸಿದ್ದಾರೆ. ಈಗ ರಾಜಸ್ಥಾನದ ಒಳಬೇಗುದಿಯನ್ನು ಶಮನಗೊಳಿಸುವ ಮೂಲಕ ತಮ್ಮ ಅನುಭವ, ತಂತ್ರಗಾರಿಕೆ ಹಾಗೂ ಪ್ರಭಾವವನ್ನು ತೋರಿಸಿದ್ದಾರೆ.












Click it and Unblock the Notifications