ಉಗ್ರರು ನುಸುಳುವ ಭೀತಿ, ರಾಜಸ್ಥಾನದಲ್ಲಿ ಹೈಅಲರ್ಟ್
ಜೈಪುರ, ಆ.30 : 15 ಮಂದಿ ಭಯೋತ್ಪಾದಕರು ಪಾಕಿಸ್ತಾನದಿಂದ ರಾಜಸ್ಥಾನದ ಗಡಿ ಮೂಲಕ ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಇದರಿಂದಾಗಿ ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಎಕೆ 47 ಬಂದೂಕು ಮತ್ತು ಸ್ಫೋಟಗಳನ್ನು ಬಳಸುವಲ್ಲಿ ತರಬೇತಿ ಪಡೆದ 15 ಮಂದಿ ಭಯೋತ್ಪಾದಕರ ತಂಡ ದೇಶಕ್ಕೆ ನುಸುಳುವ ಪ್ರಯತ್ನ ನಡೆಸಿದೆ ಎಂದು ಗೃಹ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ.

ರಾಜಸ್ಥಾನದಲ್ಲಿನ ಗಡಿಭಾಗದ ಮೂಲಕ ಉಗ್ರರು ಭಾರತವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ರಾಜಸ್ಥಾನದ ಗಡಿಭಾಗದಲ್ಲಿನ ಬಿಕಾನೇರ್ ವಲಯದ 4 ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ರಾಜಸ್ಥಾನದಲ್ಲಿ ಬಿಎಸ್‌ಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಸೈನಿಕರು ನಿರಂತರವಾಗಿ ಗುಂಡಿನ ದಾಳಿ ನಡೆಸಿ ಭಾರತದ ಗಮನವನ್ನು ಆ ಕಡೆ ಸೆಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ರಾಜಸ್ಥಾನದ ಗಡಿ ಮೂಲಕ ಭಯೋತ್ಪಾದಕರು ದೇಶ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications