ತುಂಡು ಜಮೀನು ವಿಚಾರಕ್ಕೆ ಜಗಳ: 8 ಬಾರಿ ಟ್ರ್ಯಾಕ್ಟರ್ ಹರಿಸಿ ಸಹೋದರನ ಕೊಲೆ!
ಜಮೀನು ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದು ವ್ಯಕ್ತಿಯೊಬ್ಬನನ್ನು ಆತನ ಸಹೋದರ ಟ್ರ್ಯಾಕ್ಟರ್ ಹರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ. ಆರೋಪಿ ದಾಮೋದರ್ ತನ್ನ ಸಹೋದರ ನಿರ್ಪತ್ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್ ಹರಿಸಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹದ್ದೂರ್ ಸಿಂಗ್ ಮತ್ತು ಅತಾರ್ ಸಿಂಗ್ ಅವರ ಕುಟುಂಬಗಳ ನಡುವೆ ಭರತ್‌ಪುರದ ತುಂಡು ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ವೈಷಮ್ಯ ಇತ್ತು. ಇಂದು ಬೆಳಿಗ್ಗೆ ಬಹದ್ದೂರ್ ಸಿಂಗ್ ಅವರ ಕುಟುಂಬವು ವಿವಾದಿತ ಪ್ಲಾಟ್‌ಗೆ ಟ್ರ್ಯಾಕ್ಟರ್‌ನಲ್ಲಿ ಬಂದಿದೆ. ಸ್ವಲ್ಪ ಸಮಯದ ನಂತರ ಅಥರ್ ಸಿಂಗ್ ಅವರ ಕುಟುಂಬ ಕೂಡ ಈ ಸ್ಥಳಕ್ಕೆ ಬಂದಿದೆ. ತಕ್ಷಣ ಎರಡು ಕುಟುಂಬಗಳ ಸದಸ್ಯರು ಘರ್ಷಣೆಗಿಳಿದು ಪರಸ್ಪರ ದೊಣ್ಣೆ, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ. ಗುಂಡಿನ ಸದ್ದು ಕೂಡ ಈ ವೇಳೆ ಕೇಳಿ ಬಂದಿವೆ.

ಘರ್ಷಣೆಯ ಸಮಯದಲ್ಲಿ ಅತರ್ ಸಿಂಗ್ ಅವರ ಪುತ್ರರಲ್ಲಿ ಒಬ್ಬರಾದ ನಿರ್ಪತ್ ನೆಲಕ್ಕೆ ಬಿದ್ದಾಗ, ಆತನ ಸಹೋದರ ದಾಮೋದರ್ ಅವರು ನಿರ್ಪತ್ ಸಾಯುವವರೆಗೂ ಟ್ರ್ಯಾಕ್ಟರ್ ಅನ್ನು ಅವರ ಮೇಲೆ ಎಂಟು ಬಾರಿ ಓಡಿಸಿದ್ದಾರೆ. ಇತರ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿದರೂ ದಾಮೋದರ್ ತಡೆಯಲು ನಿರಾಕರಿಸಿದ್ದಾರೆ. ಹೀಗೆ ಸ್ಥಳದಲ್ಲೇ ತನ್ನ ಸಹೋದರನನ್ನು ಬರ್ಬರವಾಗಿ ದಾಮೋದರ್ ಕೊಂದಿದ್ದಾನೆ.
ಘರ್ಷಣೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಐದು ದಿನಗಳ ಹಿಂದೆ ಎರಡು ಕುಟುಂಬಗಳು ಘರ್ಷಣೆ ನಡೆಸಿದ್ದವು. ಈ ವೇಳೆ ಬಹದ್ದೂರ್ ಸಿಂಗ್ ಮತ್ತು ಅವರ ಕಿರಿಯ ಸಹೋದರ ಜನಕ್ ಗಾಯಗೊಂಡರು. ಅತರ್ ಸಿಂಗ್ ಅವರ ಪುತ್ರ ನಿರ್ಪತ್ ಸೇರಿದಂತೆ ಕುಟುಂಬದ ವಿರುದ್ಧ ಕುಟುಂಬವು ಪ್ರಕರಣ ದಾಖಲಿಸಿತ್ತು.
ಈ ಭೀಕರ ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿಯ ಸಂಬಿತ್ ಪಾತ್ರಾ, "ಭರತ್‌ಪುರಕ್ಕೆ ಭೇಟಿ ನೀಡಲು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕಷ್ಟವಿದೆ ಎಂದು ತೋರುತ್ತದೆ. ಅವರು ಈ ಭೀಕರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಬೇಕು. ವೈರಲ್ ಆಗಿರುವ ವೀಡಿಯೊ ಹೃದಯ ವಿದ್ರಾವಕವಾಗಿದೆ. ದೇಶಾದ್ಯಂತ ಸಂಚಲ ಮೂಡಿಸಿದೆ. ಇದು ಪ್ರಿಯಾಂಕಾ ವಾದ್ರಾಗೆ ಕಾಣಿಸಿಲ್ಲವೇ" ಎಂದು ಕಿಡಿ ಕಾರಿದರು. ಈ ವೀಡಿಯೊವನ್ನು ನೋಡಿದ ನಂತರ ನನಗೆ ತಡೆಯಲು ಸಾಧ್ಯವಾಗಲಿಲ್ಲ, ಅದಕ್ಕಾಗಿಯೇ ನಾನು ಅಲ್ಲಿಗೆ ಹೋಗುತ್ತೇನೆ ಎಂದು ಬಿಜೆಪಿಯ ಸಂಬಿತ್ ಪಾತ್ರಾ ಅವರು ಸವಾಲು ಹಾಕಿದರು.












Click it and Unblock the Notifications