ಹರಿಯಾಣದಲ್ಲಿ ಹಿಂಸಾಚಾರವನ್ನ ತಡೆಯುವಲ್ಲಿ ಮನೋಹರ್ ಲಾಲ್ ಖಟ್ಟರ್ ವಿಫಲ: ಅಶೋಕ್ ಗೆಹ್ಲೋಟ್
ನವದೆಹಲಿ, ಆಗಸ್ಟ್ 04: ಹರಿಯಾಣದಲ್ಲಿನ ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಗಮನವನ್ನು ಬೇರೆಡೆ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹರಿಹಾಯ್ದಿದ್ದಾರೆ.
ಫೆಬ್ರುವರಿಯಲ್ಲಿ ಇಬ್ಬರು ಮುಸ್ಲಿಂ ಪುರುಷರ ಹತ್ಯೆಗೈದ ಪ್ರಕರಣದ ಆರೋಪಿಗಳ ಬಂಧನಕ್ಕೆ ಹರಿಯಾಣ ಪೊಲೀಸರು ಸಹಕರಿಸುತ್ತಿಲ್ಲ ಎಂದು ಹೇಳುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಟೀಕಿಸಿದ್ದಾರೆ. ಜುನೈದ್ ಮತ್ತು ನಾಸಿರ್ ಹತ್ಯೆಯ ಶಂಕಿತರನ್ನು ಬಂಧಿಸಲು ಪೊಲೀಸ್ ತಂಡ ಹರಿಯಾಣದ ನುಹ್ ಜಿಲ್ಲೆಗೆ ತೆರಳಿದಾಗ ರಾಜಸ್ಥಾನ ಪೊಲೀಸ್ ತಂಡದ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ತನಿಖೆಗೆ ಸಹಕಾರ ನೀಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಜಸ್ಥಾನದ ಭರತ್‌ಪುರದ ಇಬ್ಬರು ವ್ಯಕ್ತಿಗಳನ್ನು ಕೊಂದ ಪ್ರಕರಣದಲ್ಲಿ ಹೆಸರಿಸಲಾದ ಆರೋಪಿಗಳಲ್ಲಿ ಒಬ್ಬರಾಗಿರುವ ಭಜರಂಗದಳದ ಸದಸ್ಯ ಮೋನು ಮಾನೇಸರ್ ಅವರನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಸ್ವತಂತ್ರರು ಎಂಬ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ದ್ವಂದ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ರಾಜಸ್ಥಾನದ ಭರತ್‌ಪುರದ ಘಟ್ಮೀಕಾ ಗ್ರಾಮದ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಅವರನ್ನು ಗೋರಕ್ಷಕರು ಅಪಹರಿಸಿ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಫೆಬ್ರವರಿ 16 ರಂದು ಹರಿಯಾಣದ ಭಿವಾನಿಯ ಲೋಹರು ಅರಣ್ಯ ಪ್ರದೇಶದಲ್ಲಿ ಸುಟ್ಟ ಕಾರಿನೊಳಗೆ ಅವರ ಶವಗಳು ಪತ್ತೆಯಾಗಿದ್ದವು.
ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿರುವ ಅಶೋಕ್ ಗೆಹ್ಲೋಟ್, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜಸ್ಥಾನ ಪೊಲೀಸರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ನಮ್ಮ ಪೊಲೀಸರು ನಾಸಿರ್-ಜುನೈದ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹೋದಾಗ ಹರಿಯಾಣ ಪೊಲೀಸರು ಸಹಕರಿಸದೆ ರಾಜಸ್ಥಾನ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಹರಿಯಾಣ ಪೊಲೀಸರು ರಾಜಸ್ಥಾನ ಪೊಲೀಸರಿಗೆ ಸಹಕರಿಸುತ್ತಿಲ್ಲ. ಹರಿಯಾಣದಲ್ಲಿ ಹಿಂಸಾಚಾರವನ್ನು ತಡೆಯುವಲ್ಲಿ ಖಟ್ಟರ್ ವಿಫಲರಾಗಿದ್ದಾರೆ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದು ಸೂಕ್ತವಲ್ಲ ಎಂದು ಹರಿಹಾಯ್ದಿದ್ದಾರೆ.
ಹರ್ಯಾಣದಲ್ಲಿ ಕೋಮು ಘರ್ಷಣೆಗಳ ನಡುವೆ "ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾದ ಮೂರು ವೀಡಿಯೊಗಳಿಂದ ಪ್ರಚೋದಿಸಲ್ಪಟ್ಟಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಒಂದು ವೀಡಿಯೊದಲ್ಲಿ, ಮೋನು ಮಾನೇಸರ್ ಅವರು ಮೆರವಣಿಗೆಯಲ್ಲಿ ಭಾಗವಹಿಸಲು ನುಹ್ ತಲುಪುವುದಾಗಿ ಹೇಳುವುದನ್ನು ಕೇಳಬಹುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮೇವಾತ್‌ನಲ್ಲಿರುವ ದೇವಾಲಯಗಳಿಗೆ ಭೇಟಿ ನೀಡುವಂತೆ ಜನರನ್ನು ಒತ್ತಾಯಿಸುತ್ತಾರೆ.












Click it and Unblock the Notifications