ಚುನಾವಣೆಗೂ ಮುನ್ನ 19 ಹೊಸ ಜಿಲ್ಲೆಗಳನ್ನು ಘೋಷಿಸಿದ ರಾಜಸ್ಥಾನ:ರಾಜಕೀಯ ನಡೆ ಎಂದ ಬಿಜೆಪಿ
ರಾಜಸ್ಥಾನವು ಭೌಗೋಳಿಕ ವಿಸ್ತೀರ್ಣದಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿದೆ. ಜನರು ಸುಲಭವಾಗಿ ಜಿಲ್ಲಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಮತ್ತು ಆಡಳಿತವು ಪ್ರತಿಯೊಂದು ಕುಟುಂಬವನ್ನು ತಲುಪಲು ಸಾಧ್ಯವಾಗುತ್ತಿಲ್ಲ
ಜೈಪುರ, ಮಾರ್ಚ್ 17: ರಾಜ್ಯದ ಕೇಂದ್ರ ಕಚೇರಿಯಿಂದ ದೂರದಲ್ಲಿ ವಾಸಿಸುವ ಜನರ ಅಗತ್ಯತೆಗಳನ್ನು ಪೂರೈಸಲು 19 ಹೊಸ ಜಿಲ್ಲೆಗಳು ಮತ್ತು ಇನ್ನೂ ಮೂರು ವಿಭಾಗೀಯ ಕೇಂದ್ರಗಳನ್ನು ರಚಿಸುವುದಾಗಿ ರಾಜಸ್ಥಾನ ಸರ್ಕಾರ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ.
ಚುನಾವಣಾ ವರ್ಷದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಈ ಘೋಷಣೆ ಬಿಜೆಪಿಯಿಂದ ಭಾರೀ ಟೀಕೆಗೆ ಗುರಿಯಾಗಿದೆ. ಅಶೋಕ್ ಗೆಹ್ಲೋಟ್ ಸರ್ಕಾರದ ನಿರ್ಧಾರದ ಹಿಂದಿನ ನಿಜವಾದ ಉದ್ದೇಶವು ವೈಯಕ್ತಿಕ ರಾಜಕೀಯ ಉದ್ದೇಶಗಳನ್ನು ಪೂರೈಸುವುದಾಗಿದೆ ಎಂದು ಬಿಜೆಪಿ ತೀವ್ರವಾಗಿ ಆರೋಪಿಸಿದೆ.

"ರಾಜಸ್ಥಾನವು ಭೌಗೋಳಿಕ ವಿಸ್ತೀರ್ಣದಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿದೆ, ಕೆಲವು ಸಂದರ್ಭಗಳಲ್ಲಿ ಹಲವು ನಗರಗಳು ಜಿಲ್ಲಾ ಕೇಂದ್ರಕ್ಕೆ 100 ಕಿ.ಮೀ.ಗಿಂತ ಹೆಚ್ಚು ದೂರವಿದೆ. ಜನರು ಸುಲಭವಾಗಿ ಜಿಲ್ಲಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಮತ್ತು ಆಡಳಿತವು ಪ್ರತಿಯೊಂದು ಕುಟುಂಬವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಪ್ರಸ್ತುತ 33 ಜಿಲ್ಲೆಗಳು ಇವೆ. ಮೂರು ಹೊಸ ವಿಭಾಗೀಯ ಕೇಂದ್ರಗಳು ಪಾಲಿ, ಸಿಕರ್ ಮತ್ತು ಬನ್ಸ್ವಾರಾವನ್ನು ಹೊಂದಿದೆ. "ಜಿಲ್ಲೆಗಳು ಚಿಕ್ಕದಾಗಿದ್ದರೆ, ಅದು ಪರಿಣಾಮಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಉತ್ತಮ ಆಡಳಿತವನ್ನು ಒದಗಿಸಬಹುದು" ಎಂದು ಅಶೋಕ್ ಗೆಹ್ಲೋಟ್ ವಿಧಾನಸಭೆಗೆ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ, ಅಶೋಕ್ ಗೆಹ್ಲೋಟ್ ಅವರು "ರಾಜಕೀಯ ಉದ್ದೇಶಗಳನ್ನು ಪೂರೈಸಲು" ಹೊಸ ಜಿಲ್ಲೆಗಳನ್ನು ರಚಿಸಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದ್ದಾರೆ. "ಹೊಸ ಜಿಲ್ಲೆಗಳನ್ನು ಘೋಷಿಸಿದ ವಿಧಾನವು ರಾಜ್ಯದ ಬಜೆಟ್ ಮತ್ತು ಆರ್ಥಿಕ ರಚನೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಹೊಸ ಜಿಲ್ಲೆಗಳನ್ನು ಘೋಷಿಸುವಲ್ಲಿ ಅನೇಕ ಪ್ರಮುಖ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ. ಈ ಕ್ರಮವು ಹೆಚ್ಚಿನ ಆಡಳಿತಾತ್ಮಕ ಸವಾಲುಗಳನ್ನು ಉಂಟುಮಾಡುತ್ತದೆ" ಎಂದು ವಸುಂಧರಾ ರಾಜೆ ಹೇಳಿದ್ದಾರೆ.

ಹೊಸ ಜಿಲ್ಲೆಗಳನ್ನು ರಚಿಸುವ ಮೊದಲ ಹಂತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲಕ್ಕಾಗಿ 2,000 ಕೋಟಿ ರೂಪಾಯಿ ಅನುದಾನದ ಬಜೆಟ್ ಅನ್ನು ಅಶೋಕ್ ಗೆಹ್ಲೋಟ್ ಪ್ರಸ್ತಾಪಿಸಿದ್ದಾರೆ. ಇನ್ನು, ಹದಿನೈದು ವರ್ಷಗಳ ಹಿಂದೆ, ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಾಪಗಢವನ್ನು ಜಿಲ್ಲೆಯಾಗಿ ಮಾಡಿದ್ದರು.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಪ್ರಚಾರವನ್ನು ಆರಂಭಿಸಿವೆ. ಎರಡೂ ಪಕ್ಷಗಳು ಕಳೆದ ತಿಂಗಳು ರಾಜಸ್ಥಾನದಲ್ಲಿ ಚುನಾವಣಾ ಮಹತ್ವದ ಗುಜ್ಜರ್ ಸಮುದಾಯವನ್ನು ತಲುಪಿ ತಮ್ಮ ಪ್ರಚಾರ ನಡೆಸಿವೆ. ರಾಜ್ಯದ ಜನಸಂಖ್ಯೆಯ ಸುಮಾರು 9 ರಿಂದ 12% ರಷ್ಟಿರುವ ಮತ್ತು ಪೂರ್ವ ರಾಜಸ್ಥಾನದಲ್ಲಿ 40 ರಿಂದ 50 ವಿಧಾನಸಭಾ ಸ್ಥಾನಗಳಲ್ಲಿ ಗಮನಾರ್ಹವಾಗಿರುವ ಗುಜ್ಜರ್ ಸಮುದಾಯದ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ನಿರ್ಣಾಯಕ ಮತ ಬ್ಯಾಂಕ್ ಆಗಿದ್ದಾರೆ.
ಆದರೆ, ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿಯೇ ಬಂಡಾಯ ಎದುರಿಸುತ್ತಿದೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬಹಳ ಸಮಯದಿಂದ ತಮ್ಮ ನಡುವೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ನಾವು ಒಟ್ಟಾಗಿ ಇದ್ದೇವೆ ಎಂದು ಪ್ರದರ್ಶಿಸುವ ಪ್ರಯತ್ನವಿದ್ದರೂ, ಇಬ್ಬರೂ ಪರಸ್ಪರ ಸೂಕ್ಷ್ಮವಾಗಿ ಗೇಲಿ ಮಾಡುವ ಮೂಲಕ ತಮ್ಮ ನಡುವಿನ ಭಿನ್ನಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.
1998 ರಲ್ಲಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದಲ್ಲಿ 156 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದರು. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರು ಗುರಿಯಿಟ್ಟಿದ್ದ ಅದೇ ಸಂಖ್ಯೆಯನ್ನು ಸಾಧಿಸಿದೆ. ಇದರಿಂದ ಅವರ ವಿಶ್ವಾಸ ಕೂಡ ಹೆಚ್ಚಾಗಿದೆ. ಇದಲ್ಲದೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಮುಖ್ಯಮಂತ್ರಿ ಸ್ಥಾನ ಬಿಡುವ ಅವರ ನಿರ್ಧಾರಕ್ಕೆ ರಾಜ್ಯದಲ್ಲಿ ಬಂಡಾಯವೆದ್ದಿತ್ತು. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಬಿಟ್ಟಿದ್ದಾರೆ.












Click it and Unblock the Notifications