'ಬ್ರಿಟಿಷರು ಇನ್ನೂ ನೂರು ವರ್ಷ ಭಾರತವನ್ನು ಆಳಿದ್ದರೆ ಚೆನ್ನಾಗಿರುತ್ತಿತ್ತು!'
ಜೈಪುರ, ಅಕ್ಟೋಬರ್ 26: 'ಬ್ರಿಟಿಷರು ಇನ್ನೂ ನೂರು ವರ್ಷ ಭಾರತವನ್ನು ಆಳಬೇಕಿತ್ತು! ಆಗ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಜನರು ಉದ್ಧಾರವಾಗುತ್ತಿದ್ದರು' ಎಂದು ಬಿಎಸ್ಪಿ ನಾಯಕರೊಬ್ಬರು ಹೇಳಿರುವುದು ವಿವಾದ ಸೃಷ್ಟಿಸಿದೆ.
ರಾಜಸ್ಥಾನದ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥ ಧರಂವೀರ್ ಸಿಂಗ್ ಗುರುವಾರ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಡಿಸೆಂಬರ್ 7 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಸಭೆ ನಡೆಸುತ್ತಿದ್ದ ಅವರು. ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಓಲೈಕೆಗಾಗಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.
ಈ ಹೇಳಿಕೆಯ ವಿರುದ್ಧ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಹಸ್ರಾರು ಹೋರಾಟಗಾರರ ಬಲಿದಾನಕ್ಕೆ ಧರಂವೀರ್ ಅಪಚಾರ ಮಾಡಿದ್ದಾರೆ ಎಂದು ದೂರಲಾಗಿದೆ.

ಬ್ರಿಟೀಷರಿಂದಲೇ ಅಂಬೇಡ್ಕರ್ ಓದುವುದಕ್ಕೆ ಸಾಧ್ಯವಾಗಿದ್ದು!
'ಬ್ರಿಟಿಷರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಓದಲು ಅವಕಾಶ ನೀಡದೆ ಇದ್ದಿದ್ದರೆ ಅವರು ವಾಪಸ್ ಬಂದು ಹಿಂದುಳಿದ ವರ್ಗಗಳ ಉದ್ಧಾರಕ್ಕೆ ತೊಡಗಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬ್ರಿಟಿಷರ ಆಡಳಿತದಲ್ಲಿ ಅವರಿಗೆ ಓದಲು ಅವಕಾಶ ಸಿಕ್ಕಿತು. ಇಲ್ಲದಿದ್ದರೆ ಯಾವ ಶಾಲೆಯೂ ಅಂಬೇಡ್ಕರ್ ಅವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ' ಎಂದು ಅವರು ಹೇಳಿದರು.

ಇನ್ನೂ ನೂರು ವರ್ಷ ಆಳಬೇಕಿತ್ತು!
ಈ ದೇಶವನ್ನು ಇನ್ನೂ ನೂರು ವರ್ಷಗಳ ಕಾಳ ಬ್ರಿಟಿಷರು ಆಳಿದ್ದರೆ ಎಸ್ಸಿ ಎಸ್ಟಿ ಮತ್ತು ಒಬಿಸಿ ಸಮುದಾಯದ ಜನರ ಮೇಲೆ ದೌರ್ಜನ್ಯ ನಡೆಯುತ್ತಿರಲಿಲ್ಲ, ಅವರು ಎಂದೋ ಉದ್ಧಾರವಾಗುತ್ತಿದ್ದರು ಎಂದು ಅವರು ಹೇಳಿದರು. ರಾಜಸ್ಥಾನದಲ್ಲಿ ದಲಿತರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಎಸ್ಪಿ ಮತಗಳಿಕೆಗೋಸ್ಕರ ಇಂಥ ಅಪ್ರಬುದ್ಧ ಹೇಳಿಕೆ ನೀಡುವುದು ಎಷ್ಟು ಸರಿ ಎಂಬುದು ಹಲವರ ವಾದ.

ಇಂಗ್ಲೆಂಡಿಗೆ ಹೋಗಿ ಋಣತೀರಿಸಿ!
ಧರಂವೀರ್ ಅವರ ಹೇಳಿಕೆಯನ್ನು ಅವರ ರಾಜಕೀಯ ವಿರೋಧಿಗಳು ಕಟುವಾಗಿ ಟೀಕಿಸಿದ್ದು, ಭಾರತದ ಸ್ವಾತಂತ್ರ್ಯಕ್ಕಾಗಿ ಹಗಲಿರುಳೂ ಶ್ರಮಿಸಿದ, ಪ್ರಾಣವನ್ನು ಪಣಕ್ಕಿಟ್ಟ ಸಹಸ್ರಾರು ಜನರ ಬಲಿದಾನಕ್ಕೆ ಧರಂವೀರ್ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ. ಅಕಸ್ಮಾತ್ ಧರಂವೀರ್ ಅವರಿಗೆ ಬ್ರಿಟಿಷರ ಬಗ್ಗೆ ಅಷ್ಟೊಂದು ಅಭಿಮಾನವಿದ್ದರೆ ಇಂಗ್ಲೆಂಡಿಗೆ ತೆರಳಿ, ಅಲ್ಲೇ ಆಶ್ರಯ ಪಡೆಯಲಿ, ಬ್ರಿಟಿಷರ ಋಣ ತೀರಿಸಲಿ' ಎಂದು ಲೇವಡಿ ಮಾಡಿದ್ದಾರೆ.

ಡಿ.7 ರಂದು ಚುನಾವಣೆ
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಪ್ರಸ್ತುತ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಇಲ್ಲಿ ಬಿಎಸ್ಪಿಯು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ.












Click it and Unblock the Notifications